2020ರ ದೆಹಲಿ ಗಲಭೆ ವೇಳೆ ಕೆಲ ಮುಸ್ಲಿಂ ವ್ಯಕ್ತಿಗಳನ್ನು ಪೊಲೀಸರು ಥಳಿಸಿ ರಾಷ್ಟ್ರಗೀತೆ, ವಂದೇಮಾತರಂ ಹಾಡಿ ಜೈಶ್ರೀರಾಂ ಘೋಷಣೆ ಕೂಗುವಂತೆ ಒತ್ತಾಯಿಸಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ತನಿಖೆಗೆ ಆದೇಶಿಸಿದೆ [ಮೊಹಮ್ಮದ್ ವಸೀಂ ಮತ್ತು ಠಾಣಾಧಿಕಾರಿ ಮೂಲಕ ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಕ್ರಮ ಬಂಧನ, ಕ್ರಿಮಿನಲ್ ಬೆದರಿಕೆ, ಘಾಸಿ ಹಾಗೂ ಧಾರ್ಮಿಕ ಅಪಮಾನದ ಕೃತ್ಯಗಳಿಗೆ ಸಂಬಂಧಿಸಿದಂತೆ ಐಪಿಸಿಯಡಿ ಜ್ಯೋತಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ತೋಮರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಡ್‌ಕಡ್‌ಡೂಮಾ ನ್ಯಾಯಾಲಯದ ನ್ಯಾಯಾಧೀಶ ಉದ್ಭವ್ ಕುಮಾರ್ ಜೈನ್ ಅವರು ನಿರ್ದೇಶನ ನೀಡಿದ್ದಾರೆ.
ಗಲಭೆ ಹಿನ್ನೆಲೆಯಲ್ಲಿ ತಾಯಿಯನ್ನು ಹುಡುಕುತ್ತಾ ಹೊರಗೆ ಬಂದಿದ್ದೆ. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅಕ್ರಮ ಸಭೆ ನಡೆಸುತ್ತಿರುವುದು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದನ್ನು ಕಂಡೆ ಎಂದು ಮೊಹಮ್ಮದ್ ವಸೀಂ ಎಂಬುವವರು ದೂರು ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಠಾಣಾಧಿಕಾರಿಯ ಅಣತಿಯಂತೆ ತನ್ನನ್ನು ಉಳಿದ ಗಾಯಾಳುಗಳತ್ತ ತಳ್ಳಿ ಥಳಿಸಲು ಆರಂಭಿಸಿದರು. ಜೊತೆಗೆ ಜೈಶ್ರೀರಾಂ, ವಂದೇಮಾತರಂ ಘೋಷಣೆ ಕೂಗುವಂತೆ ಒತ್ತಾಯಿಸಿದರು. ಘಟನೆಯನ್ನು ಕೆಲ ಪೊಲೀಸ್ ಸಿಬ್ಬಂದಿ ಚಿತ್ರೀಕರಿಸಿಕೊಂಡರು ಎಂದು ಅಳಲು ತೋಡಿಕೊಂಡಿದ್ದರು.
ನಂತರ ಠಾಣಾಧಿಕಾರಿ ಖಾಲಿ ಹಾಳೆ ಮೇಲೆ ಸಹಿ ಹಾಕುವಂತೆ ಹಾಗೂ ತಾನು ಹೇಳಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುವಂತೆ ವಸೀಂ ಹಾಗೂ ಅವರ ತಂದೆಗೆ ತಾಕೀತು ಮಾಡಿದರು. ಭೀತಿಯಿಂದ ಅವರು ಹೇಳಿದ ಹಾಗೆ ನಡೆದುಕೊಂಡೆವು. ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅವರು ತಿಳಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಘಟನೆಯಲ್ಲಿ ಠಾಣಾಧಿಕಾರಿ ಜೊತೆಗೆ ಉಳಿದ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ.
ಪೊಲೀಸ್ ಅಧಿಕಾರಿಗಳು ದೂರುದಾರರ ವಿರುದ್ಧ ದ್ವೇಷದ ಕ್ರಮ ಕೈಗೊಂಡಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಅಗತ್ಯವಿಲ್ಲ ಎಂದಿದೆ. ಪೊಲೀಸರ ಕ್ರಮ ಕೈಗೊಂಡ ವರದಿ (ಎಟಿಆರ್) ಕೆಲ ಅಂಶಗಳ ಕುರಿತು ತಳೆದಿರುವ ಮೌನವನ್ನು ನ್ಯಾಯಾಲಯ ಇದೇ ವೇಳೆ ಪ್ರಸ್ತಾಪಿಸಿದೆ. ಅಲ್ಲದೆ ಮಾಜಿ ಶಾಸಕರ ವಿರುದ್ಧ ದೂರು ದಾಖಲಿಸಲು ಜನಪ್ರತಿನಿಧಿಗಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ನ್ಯಾಯಾಲಯ ಅರ್ಜಿದಾರರಿಗೆ ಇದೇ ವೇಳೆ ತಿಳಿಸಿದೆ.