ಫೆಬ್ರವರಿ 2020ರ ದೆಹಲಿ ಗಲಭೆ ವೇಳೆ ಫೈಜಾನ್ ಎಂಬ ವ್ಯಕ್ತಿಗೆ ಥಳಿಸಿ ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿ ಆತನ ಸಾವಿಗೆ ಕಾರಣರಾದ ಪೊಲೀಸರ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ಬುಧವಾರ ರಾಷ್ಟ್ರ ರಾಜಧಾನಿಯ ಪೊಲೀಸರಿಗೆ ಸೂಚಿಸಿದೆ [ಕಿಸ್ಮತುನ್ ಮತ್ತು ದೆಹಲಿ ಸರ್ಕಾರದ ಗೃಹ ಇಲಾಖೆ ಮತ್ತಿತರರ ನಡುವಣ ಪ್ರಕರಣ].
ತನಿಖಾ ಸಂಸ್ಥೆಗಳ ಮೇಲೆ ತಮಗೆ ನಂಬಿಕೆ ಇದ್ದು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ ಸ್ಥಿತಿಗತಿ ವರದಿಯಲ್ಲಿ ಏನಾದರೂ ತಪ್ಪಾದರೆ ಮಧ್ಯಪ್ರವೇಶಿಸುತ್ತೇನೆ ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ತಿಳಿಸಿದರು.
"ತನಿಖೆಯಲ್ಲಿ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸಲು ನಾನು ಇಲ್ಲಿ ಇಲ್ಲ. ಆದರೆ ಈ ವರದಿಯಲ್ಲಿ ನನಗೆ ಯಾವುದೇ ಲೋಪ ದೋಷ ಕಂಡು ಬಂದರೆ, ಆಗ ಮಧ್ಯಪ್ರವೇಶಿಸುತ್ತೇನೆ. ತನಿಖೆಗೆ ಎರಡು ವರ್ಷ ಹಿಡಿದಿದೆ. ಎಸ್‌ಐಟಿಯಲ್ಲಿ ಒಂದು ತಂಡಕ್ಕೆ ನೀವೇ (ಡಿಸಿಪಿ) ನೇತೃತ್ವ ವಹಿಸಿದ್ದಿರಿ. ನಿಮ್ಮನ್ನು ನಂಬದೇ ಇರಲು ನಮಗೆ ಯಾವುದೇ ಕಾರಣ ಇಲ್ಲ. ಆದರೆ ಯಾವುದೇ ಪ್ರಭಾವವಿಲ್ಲದೇ ತನಿಖೆ ನಡೆಸುವಂತೆ ನಿಮಗೆ ನಿರ್ದೇಶನ ನೀಡುತ್ತಿದ್ದೇನೆ” ಎಂದು ಅವರು ಹೇಳಿದರು. ಇದೇ ವೇಳೆ, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಪ ಪೊಲೀಸ್ ಆಯುಕ್ತರು ನೀಡಿದ ಹೇಳಿಕೆಗೆ ನ್ಯಾಯಾಲಯವು "ಕಾನೂನು ಕ್ರಮ" ಎನ್ನುವುದು ತುಂಬಾ ಮೃದುವಾದ ಪದವಾಯಿತು. ಆರೋಪಿಗಳನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಿ ಎಂದರು.
“ಅವರು (ಪೊಲೀಸರು) ಕ್ರಿಮಿನಲ್‌ಗಳಾಗಿದ್ದು ಕಾನೂನಿನ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಬೇಕು. ಒಬ್ಬ ತಾಯಿಯ ಮಗ ಸತ್ತಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಹೇಳಿತು.
ಫೈಜಾನ್‌ನ ತಾಯಿ ಕಿಸ್ಮತುನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಕರ್ದಂಪುರಿಯಲ್ಲಿ ಫೈಜಾನ್ ಹಾಗೂ ಕೆಲವು ಮುಸ್ಲಿಂ ಪುರುಷರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಪೊಲೀಸರು ಲಾಠಿ ಪ್ರಹಾರ ನಡೆಸಿ ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಫೈಜಾನ್ ಅವರನ್ನು ಅಕ್ರಮ ಬಂಧನದಲ್ಲಿರಿಸಲಾಯಿತು. ಅಲ್ಲಿ ಪೊಲೀಸರು ಆತನಿಗೆ ಯಾವುದೇ ವೈದ್ಯಕೀಯ ನೆರವು ನಿರಾಕರಿಸಿದರು. ಪರಿಣಾಮ ಅವರು ಸಾವನ್ನಪ್ಪಿದ್ದರು.
ತನಿಖೆ ನಡೆಸುವಾಗ ಅರ್ಜಿದಾರರು ನೀಡಿರುವ ಕೆಲವು ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೂಡ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದ್ದು ಮೇ 17ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.