ಸುದ್ದಿಗಳು

ದೆಹಲಿ ಗಲಭೆ: ಪ್ರಾಸಿಕ್ಯೂಷನ್ ಮತ್ತು ತನಿಖಾ ಸಂಸ್ಥೆಯ ನಿರ್ಲಕ್ಷ್ಯ ಖಂಡಿಸಿದ ನ್ಯಾಯಾಲಯ

Bar & Bench

ದೆಹಲಿ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಮತ್ತು ಪೊಲೀಸರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೆಹಲಿಯ ನ್ಯಾಯಾಲಯವೊಂದು ಹೇಳಿದೆ. ಸೆ. 17ರಂದು ಆರೋಪಿ ರೋಹಿತ್‌ ವಿರುದ್ಧ ದಾಖಲಾದ ಗಲಭೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಾಸಿಕ್ಯೂಷನ್‌ ಮತ್ತು ತನಿಖಾ ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯ ಕುರಿತು ಪದೇ ಪದೇ ಈಶಾನ್ಯ ಮತ್ತು ಪೂರ್ವ ವಲಯ ಡಿಸಿಪಿಗಳು ಮಾತ್ರವಲ್ಲದೆ ದೆಹಲಿ ಪೊಲೀಸ್‌ ಕಮಿಷನರ್‌ ಗಮನಕ್ಕೂ ತರಲಾಗಿತ್ತು. ಆದರೆ ಪ್ರಕರಣಗಳ ಸೂಕ್ತ ತನಿಖೆಗಾಗಿ ಅವರು ಯಾರೂ ಕ್ರಮ ಕೈಗೊಳ್ಳಲಿಲ್ಲ ಎಂದು ಕಡ್‌ಕಡ್‌ಡೂಮಾ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಬೇಸರ ವ್ಯಕ್ತಪಡಿಸಿದರು.

ಒಂದು ವೇಳೆ ಕ್ರಮ ತಗೆದುಕೊಂಡಿದ್ದರೂ ಅದನ್ನು ಇನ್ನೂ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಗಲಭೆ ಪ್ರಕರಣಗಳ ವಿಚಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಅಧಿಕಾರಿಗಳ ವೈಫಲ್ಯವು ಪ್ರಕರಣಗಳ ನಿಯೋಜನೆ/ ವಿಚಾರಣೆಯಲ್ಲಿ ತಪ್ಪಿಸಬಹುದಾಗಿದ್ದ ವಿಳಂಬಕ್ಕೆ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗಲಭೆಗೆ ಸಂಬಂಧಿಸಿದಂತೆ ಖುದ್ದು ಮೇಲ್ವಿಚಾರಣೆ ನಡೆಸಲು ಮತ್ತು ಸೂಕ್ತ ರೀತಿಯಲ್ಲಿ ತನಿಖೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸ್‌ ಕಮಿಷನರ್‌ ಅವರಿಗೆ ಮತ್ತೊಮ್ಮೆ ನಿರ್ದೇಶನ ನೀಡುವುದು ಸೂಕ್ತ ಎಂದರು. ತಪ್ಪಿದಲ್ಲಿ ಸರ್ಕಾರದ ವಿರುದ್ಧ ಪ್ರಕರಣಗಳ ಮುಂದೂಡಿಕೆಯ ದಂಡ ವಿಧಿಸಬೇಕಾಗುತ್ತದೆ ಮತ್ತು ಅಧಿಕಾರಿಗಳ ಸಂಬಳದಿಂದ ದಂಡ ಪಾವತಿಸುವಂತೆ ಪ್ರತಿಕೂಲ ಆದೇಶ ಹೊರಡಿಸುವುದು ನ್ಯಾಯಾಲಯಕ್ಕೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಅಲ್ಲದೆ ಮುಂದಿನ ವಿಚಾರಣೆ ದಿನದಂದು ಖುದ್ದು ವಿಚಾರಣೆಯ ಅವಕಾಶ ಪಡೆಯಲು ದೆಹಲಿ ಈಶಾನ್ಯ ವಲಯ ಡಿಸಿಪಿ ಅವರು ಮುಂದಿನ ವಿಚಾರಣೆ ವೇಳೆ ಹಾಜರಿರಬೇಕು. ವಿಫಲವಾದರೆ ಹೆಚ್ಚುವರಿ ವಿಚಾರಣೆಗೆ ಅವಕಾಶವಿಲ್ಲದೆ ಕಾನೂನು ಪ್ರಕಾರ ಸೂಕ್ತ ಆದೇಶ ನೀಡುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಾಲಯದ ಕಟುಶಬ್ದಗಳಿಂದ ಕೂಡಿದ ಆದೇಶ ತಿಳಿಸಿದೆ.

ಅಲ್ಲದೆ ಗೋಕಲ್‌ಪುರಿ ಠಾಣಾಧಿಕಾರಿ ಅವರ ವೈಫಲ್ಯದ ಕುರಿತೂ ಹಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್‌ 1ಕ್ಕೆ ಮುಂದೂಡಿತು. ಇದೇ ವೇಳೆ ವಿವಿಧ ಪೊಲೀಸ್‌ ಅಧಿಕಾರಿಗಳು ಮಾತ್ರವಲ್ಲದೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೂ ತನ್ನ ಆದೇಶದ ಪ್ರತಿ ನೀಡುವಂತೆ ಅದು ಸೂಚಿಸಿತು.