ದೆಹಲಿ ಗಲಭೆಗೆ ಸಂಬಂಧಿಸಿದ ದ್ವೇಷ ಭಾಷಣ ಪ್ರಕರಣದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಭಾರತೀಯ ಜನತಾ ಪಕ್ಷದ ನಾಯಕರಾದ ಕಪಿಲ್ ಮಿಶ್ರಾ ಮತ್ತು ಪ್ರವೇಶ್ ಸಾಹೇಬ್ ಸಿಂಗ್ ವರ್ಮಾ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಎಪಿಯ ಮನೀಶ್ ಸಿಸೋಡಿಯಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರ ಭಾಷಣಗಳು 2020ರ ದೆಹಲಿ ಗಲಭೆಗೆ ಕಾರಣ ಎಂದು ಆರೋಪಿಸಿರುವ ಮನವಿಯ ವಿಚಾರಣೆಯ ಸಂಬಂಧ ಈ ಮುಖಂಡರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ದೆಹಲಿ ಹೈಕೋರ್ಟ್ ಬುಧವಾರ ಸಮ್ಮತಿ ಸೂಚಿಸಿದೆ.
ಪ್ರಕರಣದಲ್ಲಿ ಪಕ್ಷಕಾರರಾಗಿರುವವರು ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು. ಪ್ರತಿವಾದಿ ಪಕ್ಷಕಾರರು ತಮ್ಮನ್ನು ಪಕ್ಷಕಾರರನ್ನಾಗ ಮಾಡಿಕೊಂಡಿರುವುದಕ್ಕೆ ಆಕ್ಷೇಪಣೆಗಳನ್ನು ಹೊಂದಿಲ್ಲ; ಆದರೆ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ಅದನ್ನು ನಿರೂಪಿಸಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಾಮಾಜಿಕ ಹೋರಾಟಗಗಾರ ಹರ್ಷ್ ಮಂದರ್, ನಟಿ ಸ್ವರಾ ಭಾಸ್ಕರ್ ಮತ್ತು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್ ಅವರನ್ನೂ ಪ್ರಕರಣದಲ್ಲಿ ಪಕ್ಷಕಕಾರನ್ನಾಗಿ ಮಾಡಿಕೊಳ್ಳಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗಳಿಗೆ ಪ್ರಚೋದನೆ ನೀಡುವಂತೆ ಪ್ರತಿವಾದಿಗಳು ದ್ವೇಷಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಮಾರು ಅರ್ಧ ಡಜನ್ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಪ್ರತಿವಾದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. 50 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಗಲಭೆ ನಿಯಂತ್ರಿಸುವಲ್ಲಿ ದೆಹಲಿ ಪೊಲೀಸರ ಪಾತ್ರದ ಬಗ್ಗೆಯೂ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಅರ್ಜಿಗಳು ಒತ್ತಾಯಿಸಿದ್ದವು.