D K Shivakumar with Delhi's Rouse Avenue Court
D K Shivakumar with Delhi's Rouse Avenue Court Facebook
ಸುದ್ದಿಗಳು

ದುಬೈ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಅನುಮತಿಸಿದ ದೆಹಲಿ ವಿಶೇಷ ನ್ಯಾಯಾಲಯ

Bar & Bench

ದುಬೈನಲ್ಲಿ ನಡೆಯಲಿರುವ ವಾಣಿಜ್ಯೋದ್ಯಮ ಸಭೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ಶನಿವಾರ ದೆಹಲಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅನುಮತಿಸಿದೆ.

ಡಿಸೆಂಬರ್‌ 1ರಿಂದ 8ರವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸುವಂತೆ ಕೋರಿ ಶಿವಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಷರತ್ತಿಗೆ ಒಳಪಟ್ಟು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಕಾಸ್‌ ಧಲ್‌ ಅವರು ಮಾನ್ಯ ಮಾಡಿದ್ದಾರೆ.

“ಪ್ರವಾಸ ಆರಂಭಿಸುವುದಕ್ಕೂ ಮುನ್ನ ಅರ್ಜಿದಾರ ಶಿವಕುಮಾರ್‌ ಅವರು ರೂ. ಐದು ಲಕ್ಷ ಭದ್ರತಾ ಠೇವಣಿಯನ್ನು ನ್ಯಾಯಾಲಯಕ್ಕೆ ನೀಡಬೇಕು. ಅರ್ಜಿದಾರರು ದುಬೈಗೆ ತೆರಳುವ ಮತ್ತು ಮರಳುವ ದಿನಾಂಕ, ಅಲ್ಲಿ ಉಳಿದುಕೊಳ್ಳುವ ವಿಳಾಸ, ಸಂಪರ್ಕ ಸಂಖ್ಯೆ ನೀಡಬೇಕು. ಸಹ ಆರೋಪಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು. ವಿದೇಶ ಪ್ರವಾಸದಲ್ಲಿರುವಾಗ ಪ್ರಕರಣದಲ್ಲಿನ ಸಾಕ್ಷಿಗಳನ್ನು ಸಂಪರ್ಕಿಸುವ ಯತ್ನ ಮಾಡಬಾರದು. ವಿದೇಶದಿಂದ ಮರಳಿದ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು” ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಅರ್ಜಿದಾರ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ಮಯಾಂಕ್‌ ಜೈನ್‌ ಅವರು “ಶಿವಕುಮಾರ್‌ ಅವರನ್ನು ಯುಎಇಯ 51ನೇ ರಾಷ್ಟ್ರೀಯ ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಡಿಸೆಂಬರ್‌ 1ರಿಂದ 10ರವರೆಗೆ ನಡೆಯುವ ವಾಣಿಜೋದ್ಯಮ ಸಭೆಗೆ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಕಳೆದ ನವೆಂಬರ್‌ 19ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಡಿಸೆಂಬರ್‌ 1ರಿಂದ 8ವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸಿದೆ” ಎಂದು ಪೀಠದ ಗಮನ ಸೆಳೆದಿದ್ದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಕೀಲರು “ಶಿವಕುಮಾರ್‌ ಅವರು ಗಂಭೀರವಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಅವರಿಗೆ ವಿದೇಶ ಪ್ರಯಾಣಕ್ಕೆ ಅನುಮತಿಸಬಾರದು” ಎಂದು ಆಕ್ಷೇಪಿಸಿದರು.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಜಪ್ತಿ ಮಾಡಲಾಗಿದ್ದ 8.59 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದು, ಶಿವಕುಮಾರ್‌ ಸದ್ಯ ಜಾಮೀನಿನ ಮೇಲೆ ಇದ್ದಾರೆ.