ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ ಕೆ ಶಿವಕುಮಾರ್‌ ಸೇರಿದಂತೆ ಐವರಿಗೆ ಸಮನ್ಸ್‌ ಜಾರಿ ಮಾಡಿದ ದೆಹಲಿಯ ವಿಶೇಷ ನ್ಯಾಯಾಲಯ

2017ರ ಆಗಸ್ಟ್‌ 2ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್‌ ಮತ್ತು ಇತರೆ ಆರೋಪಿಗಳ ದೆಹಲಿಯ ಮನೆಯಲ್ಲಿ ಶೋಧ ನಡೆಸಿದಾಗ ರೂ. 8,59,69,100 ಅಕ್ರಮ ಹಣ ಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ.
D K Shivakumar with Delhi's Rouse Avenue Court
D K Shivakumar with Delhi's Rouse Avenue CourtFacebook

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸೇರಿದಂತೆ ಐವರಿಗೆ ದೆಹಲಿಯ ವಿಶೇಷ ನ್ಯಾಯಾಲಯವು ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ (ಜಾರಿ ನಿರ್ದೇಶನಾಲಯ ವರ್ಸಸ್‌ ಡಿ ಕೆ ಶಿವಕುಮಾರ್‌ ಮತ್ತು ಇತರರು).

ದೆಹಲಿಯ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಭ್ರಷ್ಟಾಚಾರ ನಿಯಂತ್ರಣ, ಸಿಬಿಐ ಹಾಗೂ ಹಾಲಿ, ಮಾಜಿ ಶಾಸಕರು ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್‌ ಧುಲ್‌ ಅವರು ಆದೇಶ ಮಾಡಿದ್ದಾರೆ.

“ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಸೆಕ್ಷನ್‌ 3ರ ಜೊತೆಗೆ ಸೆಕ್ಷನ್ 4ರ ಅಡಿ ಅಪರಾಧವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲಾ ಐವರು ಆರೋಪಿಗಳಿಗೆ ಜುಲೈ 1ರಂದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಆರೋಪಿಗಳಾದ ಡಿ ಕೆ ಶಿವಕುಮಾರ್‌, ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ದೆಹಲಿಯ ನಿವಾಸಿಗಳಾದ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್‌ ಅವರ ವಿರುದ್ಧ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್‌ 276, 277, 278ರ ಅಡಿ ಮತ್ತು ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ 2018ರ ಜೂನ್ 18ರ ಆದೇಶದಲ್ಲಿ ನ್ಯಾಯಾಲಯವು ಅದನ್ನು ಪರಿಗಣಿಸಿದೆ ಎಂದು ಹೇಳಲಾಗಿದೆ.

ಸಂಪುಟ ದರ್ಜೆ ಸಚಿವರಾಗಿದ್ದ ಡಿ ಕೆ ಶಿವಕುಮಾರ್‌ ಅವರು ಅಕ್ರಮವಾಗಿ ಭಾರಿ ಮೊತ್ತದ ಹಣ ಸಂಪಾದಿಸಿದ್ದು, ಇದನ್ನು ಬಚ್ಚಿಟ್ಟು ಆದಾಯ ತೆರಿಗೆ ಪಾವತಿಸುವುದರಿಂದ ಪಾರಾಗಲು ಇತರೆ ಆರೋಪಿಗಳ ಜೊತೆಗೂಡಿ ಆ ಹಣವನ್ನು ಬೆಂಗಳೂರಿನಿಂದ ದೆಹಲಿಗೆ ವರ್ಗಾಯಿಸುವ ಮೂಲಕ ಕ್ರಿಮಿನಲ್‌ ಪಿತೂರಿ ನಡೆಸಿದ್ದರು. 2017ರ ಆಗಸ್ಟ್‌ 2ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್‌ ಮತ್ತು ಇತರೆ ಆರೋಪಿಗಳ ದೆಹಲಿಯ ಮನೆಯಲ್ಲಿ ಶೋಧ ನಡೆಸಿದಾಗ ರೂ. 8,59,69,100 ಅಕ್ರಮ ಹಣ ಪತ್ತೆಯಾಗಿತ್ತು. ಐಪಿಸಿ ಸೆಕ್ಷನ್‌ 120-ಬಿ ಅಡಿ ಅಪರಾಧವು ಷೆಡ್ಯೂಲ್ಡ್‌ ಅಪರಾಧವಾಗಿರುವುದರಿಂದ ಜಾರಿ ನಿರ್ದೇಶನಾಲಯವು ಹಾಲಿ ಪ್ರಕರಣ ದಾಖಲಿಸಿ, ವಿಚಾರಣೆ ಕೈಗೊಂಡಿತ್ತು ಎಂದು ವಿವರಿಸಲಾಗಿದೆ.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನ ಕೊಠಡಿಯೊಂದರಲ್ಲಿ ವಶಪಡಿಸಿಕೊಳ್ಳಲಾದ ರೂ. 6,61,26,000 ನಗದು ಆಂಜನೇಯ ಹನುಮಂತಯ್ಯ ಅವರಿಗೆ ಸೇರಿದ್ದು, ಇದೇ ಎನ್‌ಕ್ಲೇವ್‌ನ ಮತ್ತೊಂದು ಕೊಠಡಿಯಲ್ಲಿ ದೊರೆತ ರೂ. 7,58,100 ರಾಜೇಂದ್ರ ಅವರಿಗೆ ಸೇರಿತ್ತು. ಈ ಎರಡೂ ಕೊಠಡಿಗಳ ಕೀ ಗಳನ್ನು ಆಂಜನೇಯ ಮತ್ತು ರಾಜೇಂದ್ರ ಅವರಿಂದ ವಶಕ್ಕೆ ಪಡೆಯಲಾಗಿದೆ ಎಂದು ತನಿಖೆ ನಡೆಸಿ, ದಾಖಲು ಮಾಡಲಾಗಿದೆ.

ಶಿವಕುಮಾರ್‌ ಅವರ ನಿರ್ದೇಶನದಂತೆ 6.6 ಕೋಟಿ ರೂಪಾಯಿಯನ್ನು ಕೊಠಡಿಯಲ್ಲಿ ಇಟ್ಟಿದ್ದು, ಅದನ್ನು ಶಿವಕುಮಾರ್‌ ಮತ್ತು ಮೂರನೇ ಆರೋಪಿಯಾದ ಸುನಿಲ್‌ ಕುಮಾರ್‌ ಶರ್ಮಾ ಅವರು ಬಳಕೆ ಮಾಡುತ್ತಿದ್ದರು. ಈ ಕೊಠಡಿಯನ್ನು ಹಣ ಇಡಲು ಬಳಕೆ ಮಾಡಲಾಗುತ್ತಿತ್ತು. ತಮ್ಮ ಕೊಠಡಿಯು ಸುನಿಲ್‌ ಕುಮಾರ್‌ ಶರ್ಮಾ ಅವರ ಸಹೋದರನಿಗೆ ಸೇರಿದ್ದು ಎಂದು ಆಂಜನೇಯ ಅವರು ಹೇಳಿಕೆ ನೀಡಿದ್ದಾರೆ. ಐದನೇ ಆರೋಪಿಯಾದ ರಾಜೇಂದ್ರ ಅವರು ತಮ್ಮ ಕೊಠಡಿಯನ್ನು ಡಿ ಕೆ ಶಿವಕುಮಾರ್‌ ಅವರು ತಮ್ಮ ಬಳಸುತ್ತಿದ್ದು, ಇವುಗಳ ಕೀಗಳು ಆಂಜನೇಯ ಅವರ ಬಳಿ ಇದ್ದವು ಎಂದು ಹೇಳಿಕೆ ನೀಡಿದ್ದಾರೆ.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನಲ್ಲಿ ಮತ್ತೆ 1,37,36,500 ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಆ ಕೊಠಡಿಯ ಕೀಗಳು ಡಿ ಕೆ ಶಿವಕುಮಾರ್‌ ನಿರ್ದೇಶನದಂತೆ ಆಂಜನೇಯ ಅವರ ಬಳಿ ಇದ್ದವು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಹಣ ವಶಪಡಿಸಿಕೊಳ್ಳಲಾದ ಕೊಠಡಿಗಳು ಎರಡನೇ ಆರೋಪಿಯಾದ ಸಚಿನ್‌ ನಾರಾಯಣ್‌ ಅವರ ಕಂಪೆನಿಯ ಒಡೆತನದಲ್ಲಿವೆ ಎಂದು ಆಂಜನೇಯ ಹೇಳಿಕೆ ನೀಡಿದ್ದಾರೆ ಎಂದು ವಿವರಿಸಲಾಗಿದೆ.

ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನ ಮತ್ತೊಂದು ಕೊಠಡಿಯಲ್ಲಿ ರೂ. 41,03,600 ವಶಪಡಿಸಿಕೊಳ್ಳಲಾಗಿದ್ದು, ಇದು ಡಿ ಕೆ ಶಿವಕುಮಾರ್‌ ಅವರಿಗೆ ಸೇರಿದೆ. ಈ ಕೊಠಡಿಯನ್ನು ತಾನು ನಿರ್ವಹಣೆ ಮಾಡುತ್ತಿದ್ದಾಗಿ ಆಂಜನೇಯ ಹೇಳಿಕೆ ನೀಡಿದ್ದಾರೆ. ದೆಹಲಿಯ ಆರ್‌ ಕೆ ಪುರಂನ ಕರ್ನಾಟಕ ಸರ್ಕಾರದ ಸಿಬ್ಬಂದಿ ಕ್ವಾರ್ಟರ್ಸ್‌ನ ಫ್ಲ್ಯಾಟ್‌ ಒಂದರಲ್ಲಿ ರೂ. 12,44,900 ವಶಪಡಿಸಿಕೊಳ್ಳಲಾಗಿದ್ದು, ಈ ಜಾಗ ಆಂಜನೇಯ ಅವರಿಗೆ ಸೇರಿದ್ದಾಗಿದೆ. ಈ ಎಲ್ಲಾ ಹಣವು ಡಿ ಕೆ ಶಿವಕುಮಾರ್‌ ಅವರಿಗೆ ಸೇರಿದ್ದು, ಶಿವಕುಮಾರ್‌ ಅವರ ಅತಿಥಿಗಳ ಆರೈಕೆಯ ಖರ್ಚಿಗಾಗಿ ಇಡಲಾಗಿದೆ ಎಂದು ಆಂಜನೇಯ ಹೇಳಿಕೆ ನೀಡಿದ್ದಾರೆ. ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಅವರು ಅಕ್ರಮ ಹಣವನ್ನ ತಮ್ಮ ಉದ್ಯಮದ ಭಾಗ ಎಂದು ತೋರಿಸಲು ತಮ್ಮ ಸ್ಥಳಗಳನ್ನು ನೀಡುವ ಮೂಲಕ ಅಕ್ರಮ ಹಣ ವರ್ಗಾವಣೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ಬಹಿರಂಗಪಡಿಸಲಾಗಿದೆ. ಇದರ ಅನ್ವಯ ಕಳೆದ ವಾರ ಎಲ್ಲಾ ಆರೋಪಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ದೂರಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅಧಿಕೃತ ದಾಖಲೆಗಳು ಮತ್ತು ಪಿಎಂಎಲ್‌ ಕಾಯಿದೆ ಸೆಕ್ಷನ್‌ 50ರ ಅಡಿ ಹೇಳಿಕೆಗಳು ಆರೋಪಿಗಳ ವಿರುದ್ಧ ಪಿಎಂಎಲ್‌ ಕಾಯಿದೆ ಸೆಕ್ಷನ್‌ 3 ಜೊತೆಗೆ ಸೆಕ್ಷನ್‌ 4ರ ಅಡಿ ಅಪರಾಧವನ್ನು ಸಂಜ್ಞಾನಕ್ಕೆ ತೆಗೆದುಕೊಳ್ಳಲು ಸಾಕಾಗಿದೆ. ಎಲ್ಲಾ ಆರೋಪಿಗಳು ತಮಗೆ ಅರಿವಿದ್ದೂ ಅಕ್ರಮ ಹಣ ವರ್ಗಾವಣೆಗೆ ಅಪರಾಧಕ್ಕೆ ಸಹಕರಿಸಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ವಿಷದವಾಗಿ ಹೇಳಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿದೆ.

Attachment
PDF
Directorate of Enforcement V. D K Shivakumar and others.pdf
Preview

Related Stories

No stories found.
Kannada Bar & Bench
kannada.barandbench.com