Supreme Court 
ಸುದ್ದಿಗಳು

ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನಾನುಕೂಲ: ಸುಪ್ರೀಂ ಕೋರ್ಟ್

ಸಂತಾನೋತ್ಪತ್ತಿ ಚಿಕಿತ್ಸೆ ವಿಫಲವಾದ ನಂತರ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಹಕ್ಕು ಕೋರಿ ಕೆಲವು ಪೋಷಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

Bar & Bench

ಜನಸಂಖ್ಯೆ ಆಧಾರದ ಮೇಲೆ ಚುನಾವಣಾ ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಜನಸಂಖ್ಯಾ ಬೆಳವಣಿಗೆ ನಿಯಂತ್ರಿಸಿರುವ ದಕ್ಷಿಣ ಭಾರತಕ್ಕೆ ಸಂಸತ್ತಿನಲ್ಲಿ ಸೋಲಾಗಬಹುದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಉತ್ತರ ಭಾರತದಲ್ಲಿ ಕುಟುಂಬಗಳು ದೊಡ್ಡಪ್ರಮಾಣದಲ್ಲಿ ಬೆಳೆಯುತ್ತಿದ್ದು ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.

ಸಂತಾನೋತ್ಪತ್ತಿ ಚಿಕಿತ್ಸೆ ವಿಫಲವಾದ ನಂತರ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಹಕ್ಕು ಕೋರಿ ಕೆಲವು ಪೋಷಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

ಒಂದು ಮಗು ಹೊಂದಿದ್ದ ಪೋಷಕರು ಕೃತಕ ಗರ್ಭಧಾರಣೆ (ಐವಿಎಫ್‌) ಮುಖೇನ ಎರಡನೇ ಮಗುವಿನ ಬಯಕೆ ವ್ಯಕ್ತಪಡಿಸಿದ್ದನ್ನು ನ್ಯಾ. ನಾಗರತ್ನ ಪ್ರಶ್ನಿಸಿದರು. ಈ ಹಂತದಲ್ಲಿ ಅವರು ದಕ್ಷಿಣ ಭಾರತವನ್ನು ನೋಡಿ. ಕುಟುಂಗಳ ಗಾತ್ರ ಕಡಿಮೆಯಾಗುತ್ತಿದೆ. ಕ್ಷೇತ್ರ ಪುನರ್‌ ವಿಂಗಡಣೆ ವಿಚಾರದಲ್ಲಿ ಇದೇ ಸಮಸ್ಯೆ ಆಗಿರುವುದು. ದಕ್ಷಿಣ ಭಾರತದ ಜನಸಂಖ್ಯೆ ಇದೀಗ ಕಡಿಮೆಯಾಗುತ್ತಿದೆ. ಉತ್ತರ ಭಾರತದ ಕುಟುಂಬಗಳು ದೊಡ್ಡದಾಗಿ ಬೆಳೆಯುತ್ತಿವೆ ಎಂದರು.  

 ಈ ಮಧ್ಯೆ ಅರ್ಜಿದಾರರ ಪರ ಹಾಜರಾದ ವಕೀಲರು ಕೃತಕ ಗರ್ಭಧಾರಣೆ ವಿಚಾರವಾಗಿ ನಿರ್ಬಂಧ ಇಲ್ಲದಿದ್ದರೂ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಕಡಿವಾಣಗಳಿವೆ ಎಂದರು.

ಆದರೆ ಸಿನಿಮಾ ಮಂದಿಯಿಂದಾಗಿ ಬಾಡಿಗೆ ತಾಯ್ತನ ಫ್ಯಾಷನ್‌ ಆಗಿ ಮಾರ್ಪಟ್ಟಿದೆ ಎಂದು ನ್ಯಾಯಾಲಯ ನುಡಿಯಿತು.

 "ಸಂವಿಧಾನದ 21ನೇ ವಿಧಿ ಕೂಡ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿದೆ. ಸಿನಿಮಾ ಮಂದಿಯಿಂದಾಗಿ ಇದು (ಬಾಡಿಗೆ ತಾಯ್ತನ) ಫ್ಯಾಷನ್‌ ಆಗಿದೆ. ಎಲ್ಲರೂ ಈಗ ಏಕಾಂಗಿಯಾಗಲು ಬಯಸುತ್ತಾರೆ” ಎಂದು ನ್ಯಾ. ನಾಗರತ್ನ ಹೇಳಿದರು.

ಅಂತಿಮವಾಗಿ ಪೀಠ ಜುಲೈ  22ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಪಡಿಸಿತು.