[ಜಿ.ಪಂ-ತಾ.ಪಂ ಚುನಾವಣೆ] ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲಾತಿ ನಿಗದಿ ಮಾಡಲು ಸರ್ಕಾರಕ್ಕೆ ಎರಡೂವರೆ ತಿಂಗಳು ಕಾಲಾವಕಾಶ

ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಮರು ನಿಗದಿ ಮಾಡಬೇಕಾಗಿದೆ. ಆನಂತರ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು 10 ವಾರಗಳ ಕಾಲಾವಕಾಶ ಬೇಕು ಎಂದು ಎಜಿ ಕೋರಿದರು. ಇದಕ್ಕೆ ಅಸ್ತು ಎಂದ ಪೀಠ.
Karnataka HC and election
Karnataka HC and election

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಹತ್ತು ವಾರಗಳಲ್ಲಿ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆಯಾಗಿತ್ತು. ಆದರೆ, ಕೆಲವು ಆಕ್ಷೇಪಣೆಗಳು ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ಮರು ನಿಗದಿ (ರೀಡೂ) ಮಾಡಬೇಕಾಗಿದೆ. ಆನಂತರ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 10 ವಾರಗಳ ಕಾಲಾವಕಾಶ ಬೇಕು ಎಂದು ಕೋರಿದರು.

Also Read
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ: ಒಂದು ತಿಂಗಳು ವಿಚಾರಣೆ ಮುಂದೂಡಿದ ಹೈಕೋರ್ಟ್‌

ಸರ್ಕಾರದ ಮನವಿ ಪುರಸ್ಕರಿಸಿದ ಪೀಠವು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 10 ವಾರಗಳಲ್ಲಿ ಪೂರ್ಣಗೊಳಿಸಿ, ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಅದಾದ ಬಳಿಕ ರಾಜ್ಯ ಚುನಾವಣಾ ಆಯೋಗ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನಿರ್ದೇಶಿಸಿತಲ್ಲದೆ, ಈ ಆದೇಶದ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮೂರು ತಿಂಗಳು ಮುಂದೂಡಿತು.

Kannada Bar & Bench
kannada.barandbench.com