Supreme Court 
ಸುದ್ದಿಗಳು

ʼಜುಡಿಷಿಯಲ್ ವಿಸ್ಟಾʼ ಬೇಡಿಕೆ ತರ್ಕಬದ್ಧವಾಗಿದೆ: ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸೂಕ್ತ ಮೂಲಸೌಕರ್ಯ ಅಗತ್ಯ: ಸುಪ್ರೀಂ

ಸುಪ್ರೀಂ ಕೋರ್ಟ್‌ನ ಈಗಿನ ಆವರಣದ ಸುತ್ತಲೂ ʼಜುಡಿಷಿಯಲ್ ವಿಸ್ಟಾʼ ನಿರ್ಮಾಣ ಮಾಡಬೇಕು ಹಾಗೆಯೇ ನ್ಯಾಯಾಂಗ ಮೂಲಸೌಕರ್ಯಕ್ಕೆ ಧನಸಹಾಯ ನೀಡುವ ಕೇಂದ್ರ ಪ್ರಾಧಿಕಾರ ರಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

Bar & Bench

ಸುಪ್ರೀಂ ಕೋರ್ಟ್‌ನ ಈಗಿನ ಆವರಣದ ಸುತ್ತಲೂ ಜುಡಿಷಿಯಲ್‌ ವಿಸ್ಟಾ ನಿರ್ಮಿಸಬೇಕು ಎಂಬ ಬೇಡಿಕೆ ತರ್ಕಬದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ.

ಸುಪ್ರೀಂ ಕೋರ್ಟ್ ತನ್ನ ನ್ಯಾಯಾಂಗ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಿಯಾದ ಮೂಲಸೌಕರ್ಯ ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಹಾಗೂ ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

“ಇಂತಹ ಪ್ರಕರಣಗಳನ್ನು ಸಾಮಾನ್ಯವಾಗಿ ಪುರಸ್ಕರಿಸುವುದಿಲ್ಲ ಬದಲಿಗೆ ಇಂತಹವನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೇಳುತ್ತೇವೆ. ಯೋಜನಾಬದ್ಧವಾಗಿ ಮಾಡುವ ಜುಡಿಷಿಯಲ್‌ ವಿಸ್ಟಾ ತರ್ಕಬದ್ಧವಾಗಿದ್ದು ಸೂಕ್ತ ಸಂಗತಿಯಾಗಿದೆ” ಎಂದು ಪೀಠ ಹೇಳಿತು. “ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಸುಪ್ರೀಂ ಕೋರ್ಟ್‌ಗೆ ಸೂಕ್ತ ರೀತಿಯ ಕಟ್ಟಡ ಅಗತ್ಯ” ಎಂದು ಕೂಡ ಅದು ಹೇಳಿತು.

ಸುಪ್ರೀಂ ಕೋರ್ಟ್‌ನ ಈಗಿನ ಆವರಣದ ಸುತ್ತಲೂ ಜುಡಿಷಿಯಲ್‌ ವಿಸ್ಟಾ ನಿರ್ಮಾಣ ಮಾಡಬೇಕು ಹಾಗೆಯೇ ನ್ಯಾಯಾಂಗ ಮೂಲಸೌಕರ್ಯಕ್ಕೆ ಧನಸಹಾಯ ನೀಡುವ ಕೇಂದ್ರ ಪ್ರಾಧಿಕಾರ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲ ಅರ್ಧೇಂದುಮೌಳಿ ಕುಮಾರ್ ಪ್ರಸಾದ್ ಅರ್ಜಿ ಸಲ್ಲಿಸಿದ್ದರು. ಸಾಲಿಸಿಟರ್ ಜನರಲ್ ಮೂಲಕ ತನ್ನ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠ ನಾಳೆಗೆ (ಮಂಗಳವಾರ) ಪ್ರಕರಣ ಮುಂದೂಡಿತು.