A1
ಸುದ್ದಿಗಳು

ಪ್ರಜಾಪ್ರಭುತ್ವವು ಸಂವಿಧಾನದ ಅಗತ್ಯ ಲಕ್ಷಣವಾಗಿದ್ದರೂ ಮತದಾನ ಇನ್ನೂ ಮೂಲಭೂತ ಹಕ್ಕಾಗಿ ಪರಿಗಣಿತವಾಗಿಲ್ಲ: ಸುಪ್ರೀಂ

ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ಮತದಾರರ ಹಕ್ಕು ನಮ್ಮ ಸಾಂವಿಧಾನಿಕ ನ್ಯಾಯಶಾಸ್ತ್ರದ ಮುಕುಟಕ್ಕೆ ಇರಿಸಿದ ಮತ್ತೊಂದು ಗರಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಪ್ರಜಾಪ್ರಭುತ್ವ ಎಂಬುದು ಸಂವಿಧಾನದ ಅಗತ್ಯ ಅಂಶವಾಗಿದ್ದರೂ ಭಾರತದಲ್ಲಿ ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸದಿರುವುದು ವಿರೋಧಾಭಾಸದ ಸಂಗತಿ ಎಂಬುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ (ಭೀಮ್ ರಾವ್ ಬಸವಂತ್ ರಾವ್ ಪಾಟೀಲ್ ಮತ್ತು ಕೆ ಮದನ್ ಮೋಹನ್ ರಾವ್ ಇನ್ನಿತರರ ನಡುವಣ ಪ್ರಕರಣ).

"(ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆ) ತಿಳಿಯುವ ಆಯ್ಕೆ ಆಧಾರದ ಮೇಲೆ ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದೆ. ಈ ಹಕ್ಕು ಅಮೂಲ್ಯವಾದುದಾಗಿದ್ದು ಸ್ವಾತಂತ್ರ್ಯ, ಸ್ವರಾಜ್ಯಕ್ಕಾಗಿ ನಡೆದ ಸುದೀರ್ಘ ಪ್ರಯಾಸಕರ ಹೋರಾಟದ ಫಲಿತಾಂಶವಾಗಿದೆ. ಸ್ವರಾಜ್ಯದ ಪರಿಕಲ್ಪನೆಯಲ್ಲಿ ಪ್ರಜೆ ಮತ ಚಲಾಯಿಸುವ ತನ್ನ ಅವಿನಾಭಾವ ಹಕ್ಕನ್ನು ಹೊಂದಿರುತ್ತಾನೆ… ಪ್ರಜಾಪ್ರಭುತ್ವವು ಸಂವಿಧಾನದ ಅತ್ಯಗತ್ಯ ಲಕ್ಷಣಗಳ ಒಂದು ಭಾಗವೆಂದು ಪರಿಗಣಿಸಲಾಗಿದೆ. ಆದರೂ, ಸ್ವಲ್ಪ ವಿರೋಧಾಭಾಸ ಎಂಬಂತೆ, ಮತದಾನದ ಹಕ್ಕನ್ನು ಇನ್ನೂ ಮೂಲಭೂತ ಹಕ್ಕು ಎಂದು ಗುರುತಿಸಲಾಗಿಲ್ಲ; ಇದನ್ನು "ಕೇವಲ" ಶಾಸನಬದ್ಧ ಹಕ್ಕು ಎಂದು ಕರೆಯಲಾಗಿದೆ" ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ತಿಳಿಸಿದೆ.

ಜಹೀರಾಬಾದ್‌ನಿಂದ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಭೀಮ್ ರಾವ್ ಪಾಟೀಲ್ ವಿರುದ್ಧ 6,299 ಮತಗಳಿಂದ ಸೋತ ಕಾಂಗ್ರೆಸ್ ನಾಯಕ ಕೆ ಮದನ್ ಮೋಹನ್ ರಾವ್ ಅವರು ಚುನಾವಣಾ ಅರ್ಜಿ ಸಲ್ಲಿಸಿರುವುದನ್ನು ಎತ್ತಿಹಿಡಿದ ತೀರ್ಪಿನಲ್ಲಿ ಈ ಅವಲೋಕನಗಳು ವ್ಯಕ್ತವಾಗಿವೆ.

ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಪಾಟೀಲ್ ಅವರು ಚುನಾವಣಾ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ನಿಯಮ ಉಲ್ಲಂಘಿಸಿದ್ದಾರೆ ಎಂದು ರಾವ್ ಆರೋಪಿಸಿದ್ದರು.

ಮೊದಲ ಸುತ್ತಿನ ವ್ಯಾಜ್ಯದಲ್ಲಿ ತೆಲಗಾಣ ಹೈಕೋರ್ಟ್ ಜೂನ್ 15, 2022 ರಂದು ಚುನಾವಣಾ ಅರ್ಜಿಯನ್ನು ರದ್ದುಗೊಳಿಸಿತ್ತು. ಕಡೆಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌, ಪ್ರಕರಣವನ್ನು ಹೊಸದಾಗಿ ನಿರ್ಧರಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.

ಈ ವರ್ಷದ ಮಾರ್ಚ್‌ನಲ್ಲಿ ಹೈಕೋರ್ಟ್ ಚುನಾವಣಾ ಅರ್ಜಿಯನ್ನು ಸಲ್ಲಿಸಲು ಅನುಮತಿ ನೀಡಿತಾದರೂ ವಿಚಾರಣೆಯ ಸಮಯದಲ್ಲಿ ಎಲ್ಲಾ ವಿವಾದಗಳನ್ನು ಮುಕ್ತವಾಗಿರಿಸಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದ ಸುಪ್ರೀಂ ಕೋರ್ಟ್‌ಗೆ ಪಾಟೀಲ್ ಅವರು ಪ್ರಸ್ತುತ ಮೇಲ್ಮನವಿ ಸಲ್ಲಿಸುವಂತಾಗಿತ್ತು.

ಮೇಲ್ಮನವಿದಾರ ಪಾಟೀಲ್‌ ಅವರು ರಾವ್‌ ಅವರು ಮಾಡಿದ್ದ ಯಾವುದೇ ಆರೋಪಗಳನ್ನು ಅಥವಾ ಹಿಂದಿನ ಅಪರಾಧ ಕೃತ್ಯಗಳನ್ನು ನಿರಾಕರಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಪಾಟೀಲ್ ಅವರು ಆರೋಪಗಳನ್ನು ಎದುರಿಸಲು ತಂದಿರುವ ದಾಖಲೆಗಳ ಆಧಾರದ ಮೇಲೆ ಚುನಾವಣಾ ಅರ್ಜಿಯನ್ನು ರದ್ದುಗೊಳಿಸದಿರುವುದು ಸೂಕ್ತ ಎಂದಿತು.

ಸಿಆರ್‌ಪಿಸಿ ಆದೇಶ VII ನಿಯಮ 11ರ ಅಡಿಯಲ್ಲಿ ಅಧಿಕಾರ ಚಲಾಯಿಸುವಾಗ ಅರ್ಜಿಯನ್ನು ಭಾಗಶಃ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು. ಇದಲ್ಲದೆ, ದೋಷಾರೋಪಣೆ ಸ್ವರೂಪದ ಬಗ್ಗೆ ಪಾಟೀಲ್ ಅವರ ವಾದವನ್ನು ವಿಚಾರಣೆಯ ಹಂತದಲ್ಲಿ ಪರಿಗಣಿಸಬೇಕೇ ಹೊರತು ಆರಂಭದಲ್ಲಿ ಅಲ್ಲ ಎಂದು ಹೇಳಿತು.

ಈ ಹಿಂದೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಆಧರಿಸಿ ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ಮತದಾರರ ಹಕ್ಕು ನಮ್ಮ ಸಾಂವಿಧಾನಿಕ ನ್ಯಾಯಶಾಸ್ತ್ರದ ಮುಕುಟಕ್ಕೆ ಇರಿಸುವ ಹೊಸದೊಂದು ಗರಿ ಎಂದು ಒತ್ತಿಹೇಳಿದ ಅದು ಹೈಕೋರ್ಟ್‌ ಆದೇಶ  ಎತ್ತಿ ಹಿಡಿದು, ಮೇಲ್ಮನವಿಯನ್ನು ವಜಾಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Bhim_Rao_Baswanth_Rao_Patil_vs_K_Madan_Mohan_Rao_and_ors.pdf
Preview