Darshan, Actor 
ಸುದ್ದಿಗಳು

ಜೈಲಿನಲ್ಲಿ ಕನಿಷ್ಠ ಸೌಲಭ್ಯ ಕೋರಿಕೆ: ಅತ್ಯಾಚಾರಿ ಉಮೇಶ್‌ ರೆಡ್ಡಿಗಿರುವ ಸವಲತ್ತು ದರ್ಶನ್‌ಗಿಲ್ಲ ಎಂದು ವಾದ

“ಈ ಹಿಂದೆ ಸವಲತ್ತು ಕೊಟ್ಟ ಫೋಟೋ ಸೋರಿಕೆಯಾಗಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ಆಗಿದೆ. ಹೀಗಾಗಿ, ಬೇರೆ ಬ್ಯಾರಕ್‌ಗೆ ದರ್ಶನ್ ವರ್ಗಾಯಿಸಲು ಅಧಿಕಾರಿಗಳೇ ಹೆದರುತ್ತಿದ್ದಾರೆ” ಎಂದ ವಕೀಲ ಸುನೀಲ್‌ಕುಮಾರ್.‌

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಕಾರಾಗೃಹ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿ ನ್ಯಾಯಾಲಯ ಹೊರಡಿಸಿರುವ ಆದೇಶ ಪಾಲಿಸದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮಜರುಗಿಸಲು ಶಿಫಾರಸ್ಸು ಮಾಡಬೇಕು ಎಂಬ ಮನವಿ ಕುರಿತ ತೀರ್ಪನ್ನು ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಅಕ್ಟೋಬರ್‌ 9ಕ್ಕೆ ಕಾಯ್ದಿರಿಸಿದೆ.

ನ್ಯಾಯಾಲಯ ಆದೇಶದಂತೆ ತನಗೆ ಕನಿಷ್ಠ ಸೌಲಭ್ಯ ಕಲ್ಪಿಸದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ  ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲು ಕೋರಿ ದರ್ಶನ್‌ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಜೈಲಿನಲ್ಲಿ ಈವರೆಗೆ ಯಾವೆಲ್ಲಾ ಕೈದಿಗಳಿಗೆ ಕ್ವಾರಂಟೇನ್‌ ಸೆಲ್‌ಗೆ ಹಾಕಲಾಗಿದೆ? ಅವರನ್ನು ಆ ಸೆಲ್‌ನಲ್ಲಿ ಎಷ್ಟು ದಿನ ಇರಿಸಲಾಗಿದೆ? ಎಂಬ ಬಗ್ಗೆ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಜೈಲಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ಕುರಿತು ಮಂಗಳವಾರ ದರ್ಶನ್‌ ಪರ ವಕೀಲರ ವಾದ ಮತ್ತು ಜೈಲು ಅಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಪ್ರತಿವಾದ ಆಲಿಸಿದ  ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ಮತ್ತು ಸತ್ರ ನ್ಯಾಯಾಲಯವು ಅಕ್ಟೋಬರ್‌ 9ಕ್ಕೆ ತೀರ್ಪು ಕಾಯ್ದಿರಿಸಿದೆ.

ಇದಕ್ಕೂ ಮುನ್ನ, ನ್ಯಾಯಾಲಯದ ಹಿಂದಿನ ಆದೇಶದಂತೆ ದರ್ಶನ್‌ಗೆ ನೀಡಲಾದ ಸೌಲಭ್ಯಗಳ ಕುರಿತು ವಿವರಣೆ ನೀಡಲು ಜೈಲು ಅಧೀಕ್ಷಕರಾದ ಸುರೇಶ್‌ ಅವರು ನ್ಯಾಯಾಧೀಶರ ಮುಂದೆ ಖುದ್ದು ಹಾಜರಾಗಿ ಲಿಖಿತ ವಿವರಣೆ ಸಲ್ಲಿಸಿದರು.

ನಂತರ ಜೈಲು ಅಧಿಕಾರಿಗಳ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಅವರು “ಜೈಲಿನ ಕೈಪಿಡಿಯಲ್ಲಿ ಏನೆಲ್ಲಾ ಸವಲತ್ತು ನೀಡಬಹುದು ಎಲ್ಲವನ್ನು ಕಲ್ಪಿಸಲಾಗಿದೆ. ಟೆಲಿಫೋನ್, ವಿಡಿಯೋ ಕಾನ್ಫರೆನ್ಸ್‌ಗೆ ಅವಕಾಶ, ಕಂಬಳಿ, ಚಾದರ, ಬೆಡ್‌ಶೀಟ್, ದಿಂಬು, ತಟ್ಟೆ, ಚೊಂಬು ಕೊಡಲಾಗಿದೆ. ಆದರೆ, ಅವರು ಪಲ್ಲಂಗ ಕೇಳಿದರೆ ಕೊಡಲು ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲ. ಓಡಾಡಲು ಅವಕಾಶ ಕೇಳಿದ್ದರು, ಎಷ್ಟು ಜಾಗವಿದೆಯೋ ಅಷ್ಟರಲ್ಲಿ ಬೆಳಗ್ಗೆ ಮತ್ತು ಸಂಜೆ 1 ಗಂಟೆ ಓಡಾಡಲು ಅವಕಾಶ ನೀಡಿದ್ದೇವೆ. ಆದರೆ, ಇಂತಹದ್ದೆ ಬ್ಯಾರಕ್ ಬೇಕು, ಬಿಸಿಲು ಬರಬೇಕು, ಇವೆಲ್ಲವನ್ನು ಮೂಲಭೂತ ಹಕ್ಕಿನಂತೆ ಕೇಳಲಾಗದು. ಜೈಲಿನಲ್ಲಿರುವವರಿಗೆ ಎಲ್ಲ ಮೂಲಭೂತ ಹಕ್ಕುಗಳನ್ನೂ ಕೊಡಲಾಗುವುದಿಲ್ಲ” ಎಂದು ವಾದಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಸುನೀಲ್‌ಕುಮಾರ್‌ ಅವರು “ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ನೀಡಿದ ನಿರ್ದೇಶನ ಅರ್ಥವಾಗಿಲ್ಲ ಎಂದು ತೋರುತ್ತಿದೆ. ಅಧಿಕಾರಿಗಳಿಗೆ ಇಂಗ್ಲಿಷ್ ಬರುವುದಿಲ್ಲ ಎಂದು ಕಾಣುತ್ತದೆ” ಎಂದರು.

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಸನ್ನ ಕುಮಾರ್ ಅವರು “ಅಧಿಕಾರಿಗಳಿಗೆ ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂದೆಲ್ಲಾ ವಾದಿಸುವಂತಿಲ್ಲ. ಘನತೆಯಿಂದ ವಾದಿಸಲು ಸೂಚಿಸಬೇಕು” ಎಂದು ಕೋರಿದರು. ಅದಕ್ಕೆ ನ್ಯಾಯಾಲಯವು ಸೌಮ್ಯ ಭಾಷೆಯಲ್ಲಿ ವಾದ ಮಂಡಿಸಿ, ಸಮಸ್ಯೆ ಏನಾಗಿದೆ ಎಂಬುದನ್ನು ಹೇಳಿ ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿತು.

ಬಳಿಕ ಸುನೀಲ್‌ಕುಮಾರ್‌ ಅವರು “ದರ್ಶನ್‌ ಚಿನ್ನದ ಮಂಚ ಕೇಳುತ್ತಿಲ್ಲ. ಕೇವಲ ಹಾಸಿಗೆ, ದಿಂಬು ಕೇಳಿದ್ದಾರೆ. ಚೊಂಬು, ಲೋಟ, ಚಾಪೆ ಇವೆಲ್ಲವನ್ನು ಮೊದಲೇ ಕೊಟ್ಟಿದ್ದರು. ನ್ಯಾಯಾಲಯದ ಆದೇಶದ ಬಳಿಕ ಕಂಬಳಿ ಮಾತ್ರ ಕೊಟ್ಟಿದ್ದಾರೆ. ನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಬ್ಯಾರಕ್ ಒಳಗೆ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ ಹೊರಗೆ ಬಿಟ್ಟಿಲ್ಲ” ಎಂದು ವಾದಿಸಿದರು.

ಮುಂದುವರಿದು, “ದರ್ಶನ್‌ಗೆ ಪ್ರತ್ಯೇಕ ರೆಜಿಸ್ಟಾರ್‌ ಇಟ್ಟು, ಯಾರು ನೋಡಲು ಬರುತ್ತಾರೋ ಅವರ ಹೆಸರು ನಮೂದಿಸಬೇಕಿದೆ. ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆ. ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿಲ್ಲ. ಸೆಲಿಬ್ರಿಟಿ ರಕ್ಷಣೆಗೆ ಕ್ರಮ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ, ಉಗ್ರರನ್ನು ಇರಿಸಿದ್ದ ಸೆಲ್ ಪಕ್ಕದಲ್ಲೇ ದರ್ಶನ್‌ರನ್ನು ಇರಿಸಿದ್ದಾರೆ. ಯಾವ ಕೈದಿಗೆ ಯಾವ ಸೆಲ್ ಎಂಬ ನಿಯಮವಿದೆ. ಕೇಂದ್ರದ ಜೈಲು ಮಾರ್ಗಸೂಚಿಯನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಏನೂ ಕೊಡದಿದ್ದರೂ ಪರವಾಗಿಲ್ಲ, ಏನಾಗುತ್ತದೋ ಆಗಲಿ, ಟ್ರಯಲ್ ನಡೆದು ಬಿಡುಗಡೆಯಾಗುತ್ತದೆ ಎಂದು ನಂಬಿದ್ದೇವೆ. ಇಡೀ ದೇಶದಲ್ಲೇ ಪಾಲನೆಯಾಗದ ನಿಯಮವನ್ನು ದರ್ಶನ್ ಮೇಲೆ ಹೇರಿದ್ದಾರೆ. ಇವರಿಗೊಂಥರಾ, ಅವರಿಗೊಂಥರಾ ವ್ಯವಸ್ಥೆ ಇದೆ. ರೇಪಿಸ್ಟ್ ಉಮೇಶ್ ರೆಡ್ಡಿಗೆ ಕಲರ್ ಟಿವಿ ಇರುವ ರೂಮ್ ನೀಡಿ ಸವಲತ್ತುಗಳನ್ನು ಒದಗಿಸಿದ್ದಾರೆ. ಆದರೆ, ದರ್ಶನ್‌ಗೆ ಯಾವ ಸೌಲಭ್ಯವನ್ನೂ ನೀಡಿಲ್ಲ” ಎಂದು ವಾದಿಸಿದರು.

ಈ ವೇಳೆ ನ್ಯಾಯಾಲಯವು “ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಹೊಣೆಯೂ ಇದೆ. ಅದನ್ನು ಅವರು ನೋಡಬೇಕಲ್ಲವೇ? ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಾಗುವುದಿಲ್ಲ” ಎಂದಿತು.

ಬಳಿಕ ವಾದ ಮುಂದುವರಿಸಿದ ಪ್ರಸನ್ನ ಕುಮಾರ್ ಅವರು “ಕ್ವಾರಂಟೈನ್‌ ಸೆಲ್ ಕೂಡಾ ಜೈಲಿನ ಒಂದು ಭಾಗವೇ. ಜೈಲಿನ ಆಡಳಿತಕ್ಕೆ ಸೂಕ್ತವೆನಿಸುವ ಸೆಲ್ ಒದಗಿಸಲು ಅವಕಾಶವಿದೆ. ದರ್ಶನ್ ವಿಚಾರಣಾಧೀನ ಕೈದಿಯಾಗಿದ್ದು, ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು. ವಿಚಾರಣಾಧೀನ ಕೈದಿಗಳಿಗೆ ವಿಶೇಷ, ಸಾಮಾನ್ಯ ಎಂಬ ವರ್ಗೀಕರಣವಿದೆ. ಅಪರಾಧಿಗಳಿಗೆ ಎ,ಬಿ,ಸಿ ಎಂಬ ವರ್ಗೀಕರಣವಿದೆ. ಕೈದಿಗಳಿಗಿರುವ ಭದ್ರತಾ ಅಪಾಯವನ್ನು ಗಮನಿಸಿ ಸೆಲ್ ನೀಡಲಾಗುತ್ತದೆ. ಈ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್‌ ಸೌಲಭ್ಯ ದುರುಪಯೋಗ ಮಾಡಿದ್ದಾರೆ” ಎಂದು ವಾದಿಸಿದರು.

ಅದಕ್ಕೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಸುನೀಲ್‌ಕುಮಾರ್‌ ಅವರು “14 ದಿನಗಳು ಮಾತ್ರ ಕ್ವಾರಂಟೇನ್‌ ಸೆಲ್‌ನಲ್ಲಿಡಬಹುದು. ಸಿಗರೇಟ್ ಸೇದಿದರು, ಮಗ್‌ನಲ್ಲಿ ಕಾಫಿ ಕುಡಿದರು ಎಂಬ ಕಾರಣ ನೀಡುತ್ತಿದ್ದಾರೆ. ಇತರೆ ಕೈದಿಗಳಿಗೆ ವಿಶೇಷ ಸವಲತ್ತು ನೀಡಿದ್ದಾರೆ. “ಈ ಹಿಂದೆ ಸವಲತ್ತು ಕೊಟ್ಟ ಫೋಟೋ ಸೋರಿಕೆಯಾಗಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ಆಗಿದೆ. ಹೀಗಾಗಿ, ಬೇರೆ ಬ್ಯಾರಕ್‌ಗೆ ದರ್ಶನ್ ವರ್ಗಾಯಿಸಲು ಅಧಿಕಾರಿಗಳೇ ಹೆದರುತ್ತಿದ್ದಾರೆ” ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಕ್ಟೋಬರ್‌ 9ಕ್ಕೆ ಆದೇಶ ಕಾಯ್ದಿರಿಸಿದೆ.