
ತಮ್ಮನ್ನು ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲು ಅನುಮತಿ ಕೋರಿ ಬೆಂಗಳೂರು ಜೈಲು ಅಧೀಕ್ಷಕರು ಸಲ್ಲಿಸಿರುವ ಮನವಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದರ್ಶನ್ ಪರ ವಕೀಲರು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯಲ್ಲಿ ಬಳ್ಳಾರಿ ಜೈಲಿಗೆ ಪ್ರಕರಣದ ಎರಡನೇ ಆರೋಪಿಯಾದ ದರ್ಶನ್ ಅವರನ್ನು ವರ್ಗಾವಣೆ ಮಾಡಬೇಕು ಎನ್ನುವ ಕೋರಿಕೆ ಮನಸೋ ಇಚ್ಛೆಯಿಂದ ಕೂಡಿದ್ದು ಅದಕ್ಕೆ ಕಾನೂನಿನಲ್ಲಿ ಸಮರ್ಥನೆ ಇಲ್ಲ. ಅಲ್ಲದೆ ಆರೋಪಿಯ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದಾರೆ.
ವರ್ಗಾವಣೆ ಕೋರಿಕೆ ಅಮಾನ್ಯವಾದುದು, ಅಪ್ರಾಯೋಗಿಕ ಹಾಗೂ ಆರೋಪಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ಕುಟುಂಬದ ಸಂಪರ್ಕದಲ್ಲಿರುವುದಕ್ಕೆ ಮಾರಕವಾಗಿದೆ ಎಂದು ಆಕ್ಷೇಪಣಾ ಹೇಳಿಕೆ ತಿಳಿಸಿದೆ.
ಜೈಲು ಅಧೀಕ್ಷಕರು ಮಾಡಿರುವ ಮನವಿ 2024 ರ ಹಳೆಯ ಆದೇಶವನ್ನು ಆಧರಿಸಿದ್ದು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ನಂತರ ಇದು ಅಪ್ರಸ್ತುತವಾಗಿದೆ. ಈ ವಿನಂತಿಗೆ ಕಾನೂನು ಬೆಂಬಲ ಇಲ್ಲ ಮತ್ತು ಆರೋಪಿಯ ಹಕ್ಕುಗಳಿಗೆ ವಿರುದ್ಧ ಎಂದು ತಿಳಿಸಲಾಗಿದೆ.
ಕೈದಿಗಳನ್ನು ವರ್ಗಾಯಿಸಲು ವೈದ್ಯಕೀಯ ಕಾರಣಗಳು, ನ್ಯಾಯಾಲಯದ ಹಾಜರಾತಿ ಅಥವಾ ಭದ್ರತಾ ಕಾಳಜಿಗಳಂತಹ ಮಾನ್ಯ ಕಾರಣಗಳು ಇರಬೇಕು ಎಂದು ಕರ್ನಾಟಕ ಕೈದಿಗಳ ಕಾಯಿದೆ- 1963 ಮತ್ತು ಸಂಬಂಧಿತ ನಿಯಮಗಳು ಹೇಳುತ್ತವೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಜೈಲು ಅಧಿಕಾರಿಗಳು ಉಲ್ಲೇಖಿಸಿರುವ ಕಾರಣಗಳು ಈ ಸೆಕ್ಷನ್‌ಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅದು ವಿವರಿಸಿದೆ.
ಆರೋಪಿಯ ವಿಚಾರಣೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದರೆ ವಿಚಾರಣೆಗೆ ಅಡ್ಡಿಯಾಗುತ್ತದೆ. ಕಾನೂನು ಪ್ರಕಾರ ಅಗತ್ಯವಾಗಿ ನಡೆಯಬೇಕಾದ ವಕೀಲರೊಡನೆ ಸಮಾಲೋಚನೆ, ನ್ಯಾಯಾಲಯ ಹಾಜರಿಯಂತಹ ಕಾರ್ಯ ಕಷ್ಟಕರವಾಗುತ್ತದೆ. ಆರೋಪಿ ದರ್ಶನ್ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಅವರ ತಾಯಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನನ್ನು ಬಳ್ಳಾರಿಗೆ ವರ್ಗಾಯಿಸುವುದರಿಂದ ಆತನ ಕುಟುಂಬ ಆರೋಪಿಯನ್ನು ಭೇಟಿ ಮಾಡುವುದಕ್ಕೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಲಾಗಿದೆ.
ಯಾವುದೇ ಆರೋಪಿ ಕೈದಿಯಾಗಿದ್ದಾಗಲೂ ಆತನಿಗೆ ಮೂಲಭೂತ ಹಕ್ಕುಗಳು ಇರುತ್ತವೆ. ಹೀಗಾಗಿ ವರ್ಗಾವಣೆ ವಿನಂತಿ ಶಿಕ್ಷೆ ನೀಡುವಂತಿದ್ದು ನಿರಂಕುಶವಾದುದಾಗಿದೆ. ಅಲ್ಲದೆ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿದೆ.
ಆರೋಪಿ ಪ್ರಸ್ತುತ ಬೆಂಗಳೂರಿನಲ್ಲಿ ಸುರಕ್ಷಿತ ಕ್ವಾರಂಟೈನ್ ಸೌಲಭ್ಯದಲ್ಲಿದ್ದು ಭದ್ರತಾ ಅಪಾಯ ಇದೆ ಎಂದು ಜೈಲು ಅಧಿಕಾರಿಗಳು ನೀಡಿರುವ ಹೇಳಿಕೆ ಕಪೋಲಕಲ್ಪಿತವೆಂದು ಪರಿಗಣಿಸಬೇಕು ಎಂದು ಕೋರಲಾಗಿದೆ.
ಜೈಲಿನಲ್ಲಿದ್ದಾಗಲೇ ರಾಜಾತಿಥ್ಯ ಪಡೆದಿದ್ದ ದರ್ಶನ್ ಪ್ರಭಾವ, ಜನಪ್ರಿಯತೆ, ರಾಜಕೀಯ, ಹಣಕಾಸಿನ ಬಲದ ಬಗ್ಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಆತಿಥ್ಯ ಒದಗಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿತ್ತು. ಜೈಲಿನಲ್ಲಿ ದರ್ಶನ್ ಅವರನ್ನು ಇರಿಸಿಕೊಳ್ಳಲು ಜೈಲು ಅಧಿಕಾರಿಗಳು ಹಿಂಜರಿಯುತ್ತಿರುವ ಬಗ್ಗೆ ವರದಿಯಾಗಿತ್ತು. ಇದೆಲ್ಲದರ ನಡುವೆಯೇ ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರು ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.