Marriage, Karnataka High Court
Marriage, Karnataka High Court 
ಸುದ್ದಿಗಳು

ವಿವಾಹಿತ ಪುತ್ರಿಗೆ ಅನುಕಂಪ ಆಧಾರಿತ ನೇಮಕಾತಿ ನಿರಾಕರಿಸುವುದು ಅಸಾಂವಿಧಾನಿಕ: ಕರ್ನಾಟಕ ಹೈಕೋರ್ಟ್‌

Bar & Bench

ವಿವಾಹವು ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಮುಂದುವರಿಕೆ ನಿರ್ಧರಿಸುವುದಿಲ್ಲ ಎಂದು ಈಚೆಗೆ ಹೇಳಿರುವ ಕರ್ನಾಟಕ ಹೈಕೋರ್ಟ್‌, ಅನುಕಂಪದ ಆಧಾರದಲ್ಲಿ ನೀಡಲಾಗುವ ಸರ್ಕಾರಿ ಉದ್ಯೋಗಕ್ಕೆ ವಿವಾಹಿತ ಪುತ್ರಿಯನ್ನು ಪರಿಗಣಿಸುವುದರಿಂದ ಹೊರಗಿಡುವುದು ತಾರತಮ್ಯ ಮತ್ತು ಅಸಾಂವಿಧಾನಿಕ ಎಂದಿದೆ (ಭುವನೇಶ್ವರಿ ಪುರಾಣಿಕ್‌ ವರ್ಸಸ್‌ ಕರ್ನಾಟಕ ಸರ್ಕಾರ ಮತ್ತು ಇತರರು).

ತೀರಿಕೊಂಡ ತನ್ನ ತಂದೆಯ ಉದ್ಯೋಗವನ್ನು ತನಗೆ ಅನುಕುಂಪದ ಆಧಾರದಲ್ಲಿ ನೀಡುವುದಕ್ಕೆ ನಿರಾಕರಿಸಿದ್ದನ್ನು ಪ್ರಶ್ನಿಸಿ ವಿವಾಹಿತ ಪುತ್ರಿ ಸಲ್ಲಿಸಿದ್ದ ರಿಟ್‌ ಮನವಿಯನ್ನು ಪರಿಗಣಿಸಿರುವ ಪೀಠವು ಆದೇಶ ಹೊರಡಿಸಿದೆ.

“ಪುತ್ರ ಅಥವಾ ಪುತ್ರಿಯೇ ಆಗಿರಲಿ, ಪೋಷಕರೊಂದಿಗೆ ಮಕ್ಕಳ ಸಂಬಂಧದ ಮುಂದುವರಿಕೆಯನ್ನು ವಿವಾಹ ನಿರ್ಧರಿಸುವುದಿಲ್ಲ. ವಿವಾಹಕ್ಕೂ ಮುಂಚೆ ಮತ್ತು ಆನಂತರ ಪುತ್ರ, ಪುತ್ರನಾಗಿಯೇ ಇರುತ್ತಾನೆ. ಅಂತೆಯೇ ಪುತ್ರಿಯೂ ಸಹ ಮದುವೆಗೂ ಮುಂಚೆ ಹಾಗೂ ಆನಂತರ ಪುತ್ರಿಯಾಗಿಯೇ ಉಳಿಯಬೇಕು. ವಿವಾಹದಿಂದ ಈ ಸಂಬಂಧದಲ್ಲಿ ಯಾವುದೇ ಬದಲಾವಣೆಯಾಗದು. ಮದುವೆಯು ಪೋಷಕರೊಂದಿಗಿನ ಮಗಳ ಸಂಬಂಧವನ್ನು ತುಂಡರಿಸುವುದಿಲ್ಲ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾನೂನಿನ ವ್ಯಾಪ್ತಿಯಲ್ಲಿ ಅನುಕಂಪದ ಆಧಾರದಲ್ಲಿ ನೇಮಕಾತಿ ಪಡೆಯಲು ಪುತ್ರನ ವೈವಾಹಿಕ ಸ್ಥಾನಮಾನವು ಯಾವುದೇ ವ್ಯತ್ಯಯ ಮಾಡುವುದಿಲ್ಲ ಎಂದಾದರೆ ಅದೇ ಅಂಶವು ಪುತ್ರಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

“… ವಿವಾಹಿತ ಪುತ್ರಿ ಕುಟುಂಬದ ಭಾಗವಾಗುವುದು ನಿಂತು ಹೋಗುವುದಿಲ್ಲ ಮತ್ತು ವಿವಾಹಿತ ಪುತ್ರರು ಮಾತ್ರ ಕುಟುಂಬದ ಭಾಗವಾಗಿ ಮುಂದುವರಿಯುತ್ತಾರೆ ಎಂದು ಕಾನೂನು ಊಹಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಸದರಿ ಪ್ರಕರಣದಲ್ಲಿ ತೀರಿಕೊಂಡ ಸರ್ಕಾರಿ ಉದ್ಯೋಗಿಗೆ (ಅರ್ಜಿದಾರರ ತಂದೆ) ಪುತ್ರ ಮತ್ತು ಪುತ್ರಿ ಇದ್ದಾರೆ. ಅವರ ಪತ್ನಿ ಮತ್ತು ಪುತ್ರ ಸರ್ಕಾರಿ ನೇಮಕಾತಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ರಿಯು ನೇಮಕಾತಿ ಬಯಸಿದ್ದರು. ಆಕೆ ವಿವಾಹಿತೆ ಎಂಬ ಕಾರಣಕ್ಕೆ ಅವರಿಗೆ ನೇಮಕಾತಿ ನಿರಾಕರಿಸಲಾಗಿತ್ತು.

ವಿವಾಹಿತ ಪುತ್ರಿಯ ಮನವಿಯನ್ನು ತಿರಸ್ಕರಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ನಿಯಮವು ಸಂವಿಧಾನದ 14ನೇ ವಿಧಿಗೆ (ಸಮಾನತೆಯ ಹಕ್ಕು) ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲ ಮನಮೋಹನ್‌ ಪಿ ಎನ್‌ ವಾದಿಸಿದರು.

ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳು-1996ರ ಅಡಿ 2(1)(ಎ)(ಐ), 2(1)(ಬಿ) ಮತ್ತು 3(2)(ಐ)(ಸಿ) ನಿಯಮಗಳ ಅಡಿ ತಾರತಮ್ಯ ನೀತಿ ಅನುಸರಿಸಲು ಸಂವಿಧಾನದಲ್ಲಿ ಯಾವುದೇ ಅಧಿಕಾರವಿಲ್ಲ. ಈ ಹಿನ್ನೆಲೆಯಲ್ಲಿ ಮೇಲಿನ ನಿಯಮಗಳನ್ನು ಅಸಾಂವಿಧಾನಿಕ ಎಂದು ಆದೇಶಿಸಬೇಕು ಎಂದು ಕೋರಿದರು.

ಸಹಾನುಭೂತಿಯ ನೇಮಕಾತಿಯು ಹಕ್ಕಿನ ವಿಚಾರವಲ್ಲ. ಮನೆಗೆ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಕುಟುಂಬಕ್ಕೆ ಸರ್ಕಾರ ತೋರುವ ರಿಯಾಯಿತಿಯಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸುಬ್ರಮಣ್ಯ ಆರ್‌ ಪ್ರಬಲವಾಗಿ ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿವಾಹಿತ ಪುತ್ರಿಗೆ ಲಿಂಗದ ಆಧಾರದಲ್ಲಿ ನೇಮಕಾತಿ ನಿರಾಕರಿಸುವುದು ವಿಭಜನೆಯ ನಿಯಮಾವಳಿಯು ತಾರತಮ್ಯದಿಂದ ಕೂಡಿರುವುದಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದೆ.

ಅವಲಂಬನೆ ವಿಚಾರವು ಸಹಾನುಭೂತಿ ನೇಮಕಾತಿ ನೀಡಲು ಅಥವಾ ತಿರಸ್ಕರಿಸಲು ಅತ್ಯಂತ ಮುಖ್ಯವಾಗಿದ್ದು, ಇದು ನಿಯಮಗಳ ಅಡಿಯಲ್ಲಿ 'ಅವಲಂಬಿತರು' ಮತ್ತು 'ಕುಟುಂಬ'ದ ವ್ಯಾಖ್ಯಾನವನ್ನು ಮಾಡುವಾಗ ಪರಿಗಣಿತವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮೇಲಿನ ಉಲ್ಲೇಖಿತ ನಿಯಮಗಳಲ್ಲಿ 'ಕುಟುಂಬ' ಎಂಬ ಅಭಿವ್ಯಕ್ತಿಯ ವ್ಯಾಪ್ತಿಯಿಂದ ವಿವಾಹಿತ ಹೆಣ್ಣುಮಕ್ಕಳನ್ನು ಹೊರಗಿಡುವುದು ಸಂವಿಧಾನದ 14 ಮತ್ತು 15ನೇ ವಿಧಿಯಡಿ ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿದೆ ಎಂದ ನ್ಯಾಯಾಲಯವು "ಅವಿವಾಹಿತ" ಎಂಬ ಪದವನ್ನು ನಿಯಮಗಳಿಂದ ತೆಗೆದು ಹಾಕಿತು.

“ಪ್ರಕೃತಿ ಮಹಿಳೆಯರಿಗೆ ಎಲ್ಲವನ್ನೂ ನೀಡುತ್ತದೆ ಎಂದ ಮೇಲೆ ಕಾನೂನು ತುಂಬಾ ಕಡಿಮೆ ನೀಡಲು ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟ ಪೀಠವು, ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿದಾರರ ಹಕ್ಕನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.