ತನ್ನ ಬ್ಯಾಂಕ್ ಖಾತೆಗಳಿಂದ ರೂ. 60 ಲಕ್ಷ ಪಡೆಯಲು ಅಮ್ನೆಸ್ಟಿ ಇಂಟರ್ನ್ಯಾಷನಲ್‌ಗೆ ಅವಕಾಶವಿತ್ತ ಕರ್ನಾಟಕ ಹೈಕೋರ್ಟ್

ಅಮ್ನೆಸ್ಟಿ ಟ್ರಸ್ಟ್‌ನ ಖಾತೆಗಳನ್ನು ತಡೆ ಹಿಡಿಯುವಂತೆ ಜಾರಿ ನಿರ್ದೇಶನಾಲಯ ಬ್ಯಾಂಕ್‌ಗಳಿಗೆ ಸೂಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ತನ್ನ ಬ್ಯಾಂಕ್ ಖಾತೆಗಳಿಂದ ರೂ. 60 ಲಕ್ಷ ಪಡೆಯಲು ಅಮ್ನೆಸ್ಟಿ ಇಂಟರ್ನ್ಯಾಷನಲ್‌ಗೆ ಅವಕಾಶವಿತ್ತ ಕರ್ನಾಟಕ ಹೈಕೋರ್ಟ್
Amnesty International, Karnataka High Court

ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭಾರತೀಯ ಕಚೇರಿ ತನ್ನ ವಿವಿಧ ಬ್ಯಾಂಕ್‌ ಖಾತೆಗಳಿಂದ ರೂ 60 ಲಕ್ಷ ಹಣ ಪಡೆಯಲು ಕರ್ನಾಟಕ ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಸಂಸ್ಥೆಯ ಮನವಿಗೆ ಭಾಗಶಃ ಸ್ಪಂದಿಸಿದೆ.

ಅಮ್ನೆಸ್ಟಿ ಟ್ರಸ್ಟ್‌ನ ಖಾತೆಗಳನ್ನು ತಡೆ ಹಿಡಿಯುವಂತೆ ಜಾರಿ ನಿರ್ದೇಶನಾಲಯ ಬ್ಯಾಂಕ್‌ಗಳ ಜೊತೆ ಮಾತುಕತೆ ಆಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಆದೇಶ ಜಾರಿ ಮಾಡಿದೆ.

"ಮನವಿಗೆ ಭಾಗಶಃ ಅನುಮತಿ ನೀಡಲಾಗಿದ್ದು, ಬ್ಯಾಂಕ್ ಖಾತೆಗಳಿಂದ 60 ಲಕ್ಷ ರೂಪಾಯಿಗಳನ್ನು ಮರಳಿ ಪಡೆಯಲು ಅರ್ಜಿದಾರರಿಗೆ ಅವಕಾಶವಿದೆ" ಎಂದು ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶವನ್ನು ಡಿಸೆಂಬರ್ 9ರಂದು ನ್ಯಾಯಾಲಯ ಕಾಯ್ದಿರಿಸಿತ್ತು.

Also Read
ಅಮ್ನೆಸ್ಟಿ ಬ್ಯಾಂಕ್ ಖಾತೆಗಳನ್ನು ಇ ಡಿ ತಡೆಹಿಡಿದಿರುವ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಸಂಬಳ, ತೆರಿಗೆ ಮುಂತಾದ ಕಾನೂನುಬದ್ಧ ಬಾಕಿಮೊತ್ತವನ್ನು ಸಂಸ್ಥೆಯು ಪಾವತಿಸಲು ಅನುಕೂಲ ಕಲ್ಪಿಸಿ ಸ್ಥಗಿತಗೊಂಡ ಬ್ಯಾಂಕ್‌ ಖಾತೆಗಳಿಂದ ಪ್ರತಿ ತಿಂಗಳು 40 ಲಕ್ಷ ರೂಪಾಯಿಯವರೆಗೆ ಹಣ ಪಡೆಯುವುದಕ್ಕೆ ಅನುಮತಿಸಲು ಜಾರಿ ನಿರ್ದೇಶನಾಲಯ ಬಯಸಿದೆಯೇ ಎಂದು ನ್ಯಾಯಾಲಯ ಕೇಳಿತ್ತು.

ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಅಮ್ನೆಸ್ಟಿ ಟ್ರಸ್ಟ್‌ ನಡುವೆ ಸಮತೋಲನ ಸಾಧಿಸಲು ನ್ಯಾಯಾಲಯ ಯತ್ನಿಸಿತ್ತು. “ನಿಮ್ಮ ಅಧಿಕಾರಿಯನ್ನು (ಇ ಡಿ) ಕರೆಯಿರಿ, (ಎಎಸ್‌ಜಿ) ಸಲಹೆ ಪಡೆಯಿರಿ. ನೀವುಗಳು ಸಮತೋಲನ ಸಾಧಿಸಲು ಒಲವು ತೋರಿದರೆ, ಅದರಂತೆ ಮರುದಿನವೇ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು” ಎಂದು ಪೀಠ ಹೇಳಿತ್ತು.

ಅರ್ಜಿದಾರ ಟ್ರಸ್ಟ್‌ಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದಕ್ಕೂ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ, ಪ್ರೊಫೆಸರ್‌ ರವಿವರ್ಮ ಕುಮಾರ್‌ ವಾದಿಸಿದ್ದರು. ಮಾನವ ಹಕ್ಕುಗಳ ಕುರಿತಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕೆಲಸ ಮಾಡುತ್ತಿದ್ದು, ಅದರ ಖಾತೆಗಳನ್ನು ತಡೆ ಹಿಡಿಯುವ ಸಂಬಂಧ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ. ಇದಕ್ಕೂ ಮಿಗಿಲಾಗಿ ಕಾನೂನಿನ ಅನ್ವಯ 30 ದಿನಗಳ ಒಳಗೆ ಸೂಕ್ತ ಪ್ರಾಧಿಕಾರದ ಮುಂದೆ ತೆಗೆದುಕೊಂಡು ಹೋಗಲಾಗಿಲ್ಲ. ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸುವುದು ಹವಾಲ ಹಣ ನಿಯಂತ್ರಣ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 17(1)(A)ರ ಅಡಿ ಮತ್ತು ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ (ಎಫ್‌ಸಿಆರ್‌ಎ) -2010ರ ಅಡಿ ಕಾನೂನು ಬಾಹಿರವಾಗಿದೆ ಎಂದು ರವಿವರ್ಮ ಕುಮಾರ್‌ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com