Karnataka High Court
Karnataka High Court 
ಸುದ್ದಿಗಳು

ಪೊಲೀಸ್‌ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ: ಮಾನವ ಹಕ್ಕುಗಳ ಆಯೋಗದ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಅಪರಾಧ ಪ್ರಕರಣದಲ್ಲಿ ಆರೋಪಿಗಳನ್ನು ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಆರೋಪದ ಮೇಲೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಮಾನವ ಹಕ್ಕುಗಳ ಆಯೋಗವು 2015ರ ಜೂನ್‌ 20ರಂದು ಹೊರಡಿಸಿದ ಆದೇಶ ರದ್ದು ಕೋರಿ ಪೊಲೀಸ್ ಅಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿ ಕಾನೂನು ಪ್ರಕಾರ ಆದೇಶ ಮಾಡುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಒಂದೊಮ್ಮೆ ಖುಲಾಸೆ ಆದೇಶವು ತೃಪ್ತಿದಾಯಕವಾಗಿರದಿದ್ದರೆ, ಅದನ್ನು ದೂರುದಾರರು ಕಾನೂನು ಪ್ರಕಾರ ಸೂಕ್ತ ವೇದಿಕೆಯಲ್ಲಿ ಪ್ರಶ್ನೆ ಮಾಡಬಹುದಿತ್ತು. ಅರ್ಜಿದಾರರು ಹಿರಿಯ ಶ್ರೇಣಿ ಅಧಿಕಾರಿಯಾಗಿದ್ದು, ತಮ್ಮ ಅಧೀನದ ಅಧಿಕಾರಿಗೆ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಹೀಗಾಗಿ, ದೂರುದಾರರು ಆರೋಪಿಸಿದಂತೆ ಅರ್ಜಿದಾರರು ಕರ್ತವ್ಯ ಲೋಪ ಎಸಗಿಲ್ಲ. ಈ ವಿಚಾರವನ್ನು ಕಡೆಗಣಿಸಿ ಅರ್ಜಿದಾರಿಗೆ ದಂಡ ವಿಧಿಸಿದ ಆಯೋಗದ ಕ್ರಮ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2010ರ ಸೆಪ್ಟೆಂಬರ್‌ 26ರಂದು ಚಿಕ್ಕಬಳ್ಳಾಪುರದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಅರ್ಜಿದಾರ ಸಿದ್ದಲಿಂಗಪ್ಪಗೆ ಕರೆ ಮಾಡಿದ್ದ ಅಪ್ಪಣ್ಣ ಎಂಬುವರು ಸೆಪ್ಟೆಂಬರ್‌ 19ರಂದು ಲಕ್ಷ್ಮೀಕಾಂತ್ ಹಾಗೂ ಇತರೆ 15 ಮಂದಿ ಜಮೀನು ಖರೀದಿಯ ಕಮೀಷನ್ ಸಂಬಂಧ ಜಗಳ ಮಾಡಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಬೇಕು ಎಂದು ಕೋರಿದ್ದರು.

ಇದರಿಂದ ಅರ್ಜಿದಾರರು ಪಿಎಸ್‌ಐ ರಾಜೇಂದ್ರ ಕುಮಾರ್‌ಗ ಕರೆ ಮಾಡಿ ಪ್ರಕರಣ ಸಂಬಂಧ ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಲಕ್ಷ್ಮೀಕಾಂತ್ ಮತ್ತು ಇತರೆ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ರಾಜೇಂದ್ರ ಕುಮಾರ್ ಅವರು ತನಿಖೆ ಪೂರ್ಣಗೊಳಿಸಿ ವಿವಿಧ ಅಪರಾಧ ಕೃತ್ಯಗಳಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೊಡ್ಡಬಳ್ಳಾಪುರ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು (ವಿಚಾರಣಾಧೀನ ನ್ಯಾಯಾಲಯ) ಆರೋಪಿಗಳನ್ನು ಖುಲಾಸೆಗೊಳಿಸಿ 2013ರ ಜುಲೈ 15ರಂದು ಆದೇಶಿಸಿದ್ದರು.

ಇದರಿಂದ ಅಪ್ಪಣ್ಣ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ, ರಾಜೇಂದ್ರ ಕುಮಾರ್ ವಿರುದ್ಧ ಕರ್ತವ್ಯ ಲೋಪದ ಆರೋಪ ಮಾಡಿದ್ದರು. ಆ ದೂರಿನ ಕುರಿತು ಐಜಿಪಿಯಿಂದ ವಿಚಾರಣೆ ವರದಿ ತರಿಸಿಕೊಂಡಿದ್ದ ಆಯೋಗವು ರಾಜೇಂದ್ರ ಕುಮಾರ್ ಮತ್ತು ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಇದರಿಂದ ಸಿದ್ದಲಿಂಗಪ್ಪ ಹೈಕೋರ್ಟ್ ಮೆಟ್ಟಿಲೇರಿ, ದೂರುದಾರರಿಂದ ಕರೆ ಸ್ವೀಕರಿಸಿದ ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಲು ತಮ್ಮ ಅಧೀನದ ಪಿಎಸ್‌ಐಗೆ ಸೂಚಿಸಿದ್ದೇನೆ. ಆ ಮೂಲಕ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಯಾವುದೇ ಕರ್ತವ್ಯ ಲೋಪ ಎಸಗಿಲ್ಲ. ಆದ್ದರಿಂದ, ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.