ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಪ್ರತಿಬಂಧಕಾದೇಶ ರದ್ದತಿ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಹರ್ಷೇಂದ್ರ ಹೆಗ್ಗಡೆ

"ಸುಮಾರು 8,000 ಯೂಟ್ಯೂಬ್ ಚಾನೆಲ್‌ಗಳು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅವಹೇಳನಕಾರಿ ವಸ್ತುವಿಷಯ ಪ್ರಸಾರ ಮಾಡುತ್ತಿವೆ" ಎಂದು ಹರ್ಷೇಂದ್ರ ಅವರ ಪರ ವಕೀಲರು ಇಂದು ವಾದಿಸಿದರು.

Bar & Bench

ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿರುವ ಪ್ರಕರಣ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಬೆಂಗಳೂರು ಸಿವಿಲ್‌ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹಾಗೂ ಕ್ಷೇತ್ರದ ದೇವಾಲಯ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಪ್ರಕರಣವನ್ನು ಸಿಜೆಐ ಬಿ ಆರ್‌ ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮ ಹಾಗೂ ವಿನೋದ್‌ ಚಂದ್ರನ್‌ ಅವರಿದ್ದ ಪೀಠದೆದುರು ಗುರುವಾರ ಬೆಳಿಗ್ಗೆ ಪ್ರಸ್ತಾಪಿಸಲಾಯಿತು.

"ಸುಮಾರು 8,000 ಯೂಟ್ಯೂಬ್ ಚಾನೆಲ್‌ಗಳು ಧರ್ಮಸ್ಥಳ ದೇವಸ್ಥಾನದ ವಿರುದ್ಧ ಅವಹೇಳನಕಾರಿ ವಸ್ತುವಿಷಯ ಪ್ರಸಾರ ಮಾಡುತ್ತಿವೆ" ಎಂದು ಹರ್ಷೇಂದ್ರ ಅವರ ಪರ ವಕೀಲರು ಇಂದು ವಾದಿಸಿದರು. ಪ್ರಕಣವನ್ನು ಸುಪ್ರೀಂ ಕೋರ್ಟ್‌ ನಾಳೆ (ಶುಕ್ರವಾರ) ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಧರ್ಮಸ್ಥಳದ ವಿವಿಧ ಕಡೆ ಕೊಲೆ, ಅತ್ಯಾಚಾರಕ್ಕೆ ಒಳಗಾದ ಹಲವು ಮೃತದೇಹಗಳನ್ನು ಹೂತಿರುವುದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕ ಹೇಳಿಕೆ ನೀಡಿದ ಬೆನ್ನಿಗೇ ಮಾಧ್ಯಮಗಳು ವ್ಯಾಪಕ ಪ್ರಚಾರ ಆರಂಭಿಸಿದ್ದವು. ಬಳಿಕ ಹರ್ಷೇಂದ್ರ ಕುಮಾರ್ ಅವರು 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿದಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮೂಲ ದಾವೆ ಹೂಡಿದ್ದರು.

ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ಜುಲೈ 18 ರಂದು ಏಕಪಕ್ಷೀಯ ಪ್ರತಿಬಂಧಕಾದೇಶ  ನೀಡಿದ್ದರು. ಆಗಸ್ಟ್ 5 ರವರೆಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿ ಪ್ರಸಾರ ಮಾಡದಂತೆ ಸಂಪೂರ್ಣ ನಿಷೇಧ ವಿಧಿಸಿದ್ದರು.

ಇದನ್ನು ಪ್ರಶ್ನಿಸಿ ಕುಡ್ಲ ರ‍್ಯಾಂಪೇಜ್‌ ಡಿಜಿಟಲ್‌ ಮಾಧ್ಯಮ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆಗಸ್ಟ್ 1ರಂದು, ಹೈಕೋರ್ಟ್ ಯೂಟ್ಯೂಬ್ ಚಾನೆಲ್ ಮೇಲೆ ವಿಧಿಸಲಾದ ತಡೆಯಾಜ್ಞೆಯನ್ನು ತೆಗೆದುಹಾಕಿತಾದರೂ ಉಳಿದ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಪ್ರತಿಬಂಧಕಾದೇಶ ಜಾರಿಯಲ್ಲಿತ್ತು.

ಈ ಮಧ್ಯೆ, ಬೆಂಗಳೂರು ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಜುಲೈ 18 ರಂದು ಹೊರಡಿಸಿದ್ದ ಪ್ರತಿಬಂಧಕಾದೇಶವನ್ನು ಜುಲೈ 24ರಂದು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.

ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್‌ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ಕೋರಿದ್ದರು.

ಪ್ರಕರಣವನ್ನು ನಿನ್ನೆ (ಬುಧವಾರ) ಆಲಿಸಿದ ಬೆಂಗಳೂರಿನ 16ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಎಂ ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿರುವ ಪ್ರಕರಣದ ಪ್ರಸಾರ/ಪ್ರಕಟಣೆಗೆ ಸಂಬಂಧಿಸಿದ ಏಕಪಕ್ಷೀಯ ಪ್ರತಿಬಂಧಕಾದೇಶ ವಿಸ್ತರಣೆ ಕೋರಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು. ಈ ಹಿನ್ನೆಲೆಯಲ್ಲಿ ಹರ್ಷೇಂದ್ರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.