Age of Marriage 
ಸುದ್ದಿಗಳು

ಸ್ತ್ರೀ- ಪುರುಷರ ವಿವಾಹದ ಕಾನೂನುಬದ್ಧ ವಯೋಮಿತಿ ನಡುವೆ ಇರುವ ಅಂತರ ಪುರುಷ ಪ್ರಧಾನತೆಯ ಕುರುಹು: ಅಲಾಹಾಬಾದ್ ಹೈಕೋರ್ಟ್

ಬಾಲ್ಯವಿವಾಹ ರದ್ದುಗೊಳಿಸುವ ಮಿತಿಯನ್ನು ಲೆಕ್ಕ ಹಾಕುವ ಉದ್ದೇಶದಿಂದ ಪುರುಷನ ಪ್ರೌಢಾವಸ್ಥೆಯ ವಯಸ್ಸನ್ನು 18 ವರ್ಷದಿಂದ ಪರಿಗಣಿಸಬೇಕೇ ಅಥವಾ 21 ವರ್ಷದಿಂದ ಪರಿಗಣಿಸಬೇಕೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿತ್ತು.

Bar & Bench

ಪುರುಷ ಮತ್ತು ಮಹಿಳೆಯರ ನಡುವಿನ ವಿವಾಹದ ಕಾನೂನುಬದ್ಧ ವಯೋಮಿತಿಗೆ ಇರುವ ಅಂತರ ಪಿತೃಪ್ರಭುತ್ವದ ಕುರುಹೇ ವಿನಾ ಬೇರೇನೂ ಅಲ್ಲ‌ ಎಂದು ಅಲಾಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಂಜಯ್ ಚೌಧರಿ ಮತ್ತು ಗುಡ್ಡನ್‌ ಅಲಿಯಾಸ್‌ ಉಷಾ ನಡುವಣ ಪ್ರಕರಣ].

ಭಾರತದಲ್ಲಿ ಪ್ರಸ್ತುತ ಪುರುಷರಿಗೆ ಮದುವೆಯ ವಯೋಮಿತಿ 21 ವರ್ಷ ಇದ್ದರೆ ಮಹಿಳೆಯರಿಗೆ 18 ವರ್ಷ.

ಪುರುಷರು ಶಿಕ್ಷಣ ಪೂರ್ಣಗೊಳಿಸುವುದಕ್ಕಾಗಿ ಮತ್ತು ಕುಟುಂಬಕ್ಕೆ ನೆರವಾಗುವ ಆರ್ಥಿಕ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೆಚ್ಚುವರಿ ಮೂರು ವರ್ಷಗಳನ್ನು ಅನುಮತಿಸಿರುವುದು ಕಾನೂನು ರೂಪಿಸಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ನ್ಯಾಯಮೂರ್ತಿಗಳಾದ ಸೌಮಿತ್ರಾ ದಯಾಳ್ ಸಿಂಗ್ ಮತ್ತು ಡೊನಾಡಿ ರಮೇಶ್ ಅವರಿದ್ದ ಪೀಠ ಹೇಳಿದೆ.

ಆದರೆ ಇದರಿಂದಾಗಿ ಇದೇ ಅವಕಾಶವನ್ನು ಮಹಿಳೆಯರಿಗೆ ನಿರಾಕರಿಸಿದಂತಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

“ಆದರೂ, ಆ ಅವಕಾಶವನ್ನು ಪುರುಷರಿಗೆ ಮಾತ್ರ ಸೀಮಿತಗೊಳಿಸುವ ಮೂಲಕ ಮತ್ತು ಸ್ತ್ರೀಯರಿಗೆ ಸಮಾನ ಅವಕಾಶ ನೀಡುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ, ಸಮಾಜದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಪುರುಷ ಪ್ರಧಾನ ಪಕ್ಷಪಾತ ಬೇರೂರಿದ್ದು  ಶಾಸನಬದ್ಧ ಕಾನೂನು ಇದನ್ನು ಎತ್ತಿ ಹಿಡಿದಿದೆ. ಹೀಗಾಗಿ, ವೈವಾಹಿಕ ಸಂಬಂಧದಲ್ಲಿ, ಇಬ್ಬರು ಸಂಗಾತಿಗಳಲ್ಲಿ ಪುರುಷನೇ ಹಿರಿಯನಾಗಿರುತ್ತಾನೆ ಮತ್ತು ಕುಟುಂಬದ ವೆಚ್ಚವನ್ನು ನಿರ್ವಹಿಸುವ ಆರ್ಥಿಕ ಹೊರೆ ಭರಿಸುತ್ತಾನೆ. ಇತ್ತ ಆತನ ಸ್ತ್ರೀ ಸಂಗಾತಿ  ಮಗುವನ್ನು ಸಲಹುವ ಅಥವಾ ಎರಡನೇ ಸ್ಥಾನದಲ್ಲಿ ಉಳಿಯುತ್ತಾಳೆಯೇ ಹೊರತು ಮೊದಲ ಸ್ಥಾನದಲ್ಲಿ ಅಲ್ಲ ಎಂಬ ಶಾಸನಬದ್ಧ ಊಹೆ ಅಸ್ತಿತ್ವದಲ್ಲಿದ್ದು ಇದು ಪುರುಷನಿಗೆ ಎಲ್ಲಾ ರೀತಿಯಲ್ಲೂ ಸರಿಸಮನಲ್ಲ ಎನ್ನುವಂತಿದೆ" ಎಂದು ನ್ಯಾಯಾಲಯ ಹೇಳಿದೆ.

ಕೌಟುಂಬಿಕ ನ್ಯಾಯಾಲಯ ತನ್ನ ಮದುವೆ ರದ್ದಾಗಿದೆ ಎಂದು ಘೋಷಿಸಲು ನಿರಾಕರಿಸಿದೆ ಎಂಬುದಾಗಿ ಆಕ್ಷೇಪಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯ  ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಪ್ರಸಕ್ತ ಪ್ರಕರಣ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ್ದಾಗಿದ್ದು, 12 ವರ್ಷದ ವರ ಹಾಗೂ 9 ವರ್ಷದ ವಧುವಿನೊಂದಿಗೆ ಈ ವಿವಾಹ ನೆರವೇರಿತ್ತು. ಮದುವೆಯ ವಯೋಮಾನ ತಲುಪದ ಹಿನ್ನೆಲೆಯಲ್ಲಿ ತನ್ನ ಮದುವೆ ನೆರೆವೇರಿಸಿದ್ದರಿಂದ ಅದನ್ನು ರದ್ದುಪಡಿಸುವಂತೆ ಕೋರಿ ವ್ಯಕ್ತಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ.

ಬಾಲ್ಯವಿವಾಹ ರದ್ದುಗೊಳಿಸುವ ಮಿತಿಯನ್ನು ಲೆಕ್ಕ ಹಾಕುವ ಉದ್ದೇಶದಿಂದ ಪುರುಷನ ಪ್ರೌಢಾವಸ್ಥೆಯ ವಯಸ್ಸನ್ನು 18 ವರ್ಷದಿಂದ ಪರಿಗಣಿಸಬೇಕೇ ಅಥವಾ 21 ವರ್ಷದಿಂದ ಪರಿಗಣಿಸಬೇಕೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿತ್ತು.

ಬಾಲ್ಯವಿವಾಹ ರದ್ದತಿ ಕಾಯಿದೆಯ ಉದ್ದೇಶಗಳಿಗಾಗಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯನ್ನು "ಮಕ್ಕಳು" ಎಂದೇ ಪರಿಗಣಿಸಲಾಗುತ್ತದೆ. ಕಾಯಿದೆಯಡಿ 'ಪ್ರೌಢವಯಸ್ಸು' ಎಂಬ ಪದವನ್ನು ವ್ಯಾಖ್ಯಾನಿಸಲಾಗಿಲ್ಲ ಎಂದು ಅದು ತಿಳಿಸಿತು. ಅಲ್ಲದೆ, ಕಾನೂನಾತ್ಮಕವಾಗಿ ಪ್ರೌಢ ವಯಸ್ಸು ಎಂಬುದು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ ಎನ್ನುವುದನ್ನು ವಿಷದಪಡಿಸಿತು.

ಜೊತೆಗೆ ದಂಪತಿ ನಡುವೆ ಬಾಲ್ಯ ವಿವಾಹ ನಡೆದಿರುವುದು ವಿವಾದಾತೀತವಾಗಿರುವ ಕಾರಣ, ನ್ಯಾಯಾಲಯ  ವಿವಾಹವನ್ನು ಅಸಿಂಧು ಎಂದು ಘೋಷಿಸಿತು.

ಪತ್ನಿ ₹ 50 ಲಕ್ಷ ಶಾಶ್ವತ ಜೀವನಾಂಶ ಕೇಳಿದರಾದರೂ, ಪತಿ ₹ 25 ಲಕ್ಷವನ್ನು ಜೀವನಾಂಶವಾಗಿ ನೀಡಲು ನ್ಯಾಯಾಲಯ ಆದೇಶಿಸಿತು.