ಬಾಲ್ಯ ವಿವಾಹ ನಿಷೇಧ ಕಾಯಿದೆ- 2006ರ ಗುರಿ ಸಾಧನೆಗಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ [ಸೊಸೈಟಿ ಫಾರ್ ಎನ್ಲೈಟನ್ಮೆಂಟ್ ಅಂಡ್ ವಾಲೆಂಟರಿ ಆಕ್ಷನ್ ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ವಿವಿಧ ಸಮುದಾಯಗಳಿಗೆ ಅನುಗುಣವಾಗಿ ಕಾಯಿದೆಯನ್ನು ರೂಪಿಸಬೇಕು ಮತ್ತು ಕಾಯಿದೆ ಜಾರಿಗೆ ಸಮುದಾಯ ಪ್ರೇರಿತ ವಿಧಾನ ಇರಬೇಕು ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ. ಅಂತೆಯೇ ಬಾಲ್ಯ ವಿವಾಹ ನಿರ್ಮೂಲನೆ ಸಂಬಂಧ ಅದು ಬಹುಮುಖ್ಯವಾದ ಮಾರ್ಗಸೂಚಿಗಳನ್ನೂ ನೀಡಿದೆ.
ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧಿಸಿದಂತೆ ನಿನ್ನೆ (ಶುಕ್ರವಾರ) ನೀಡಲಾದ ತೀರ್ಪಿನಲ್ಲಿ ಮಾರ್ಗಸೂಚಿಯ ವಿವರಗಳಿವೆ.
ಕಾಯಿದೆ ಯಥಾವತ್ ಜಾರಿಯಾಗುತ್ತಿಲ್ಲ ಎಂದು ಸೊಸೈಟಿ ಫಾರ್ ಎನ್ಲೈಟನ್ಮೆಂಟ್ ಅಂಡ್ ವಾಲೆಂಟರಿ ಆಕ್ಷನ್ ಹೆಸರಿನ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಏಪ್ರಿಲ್ 2018 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದ ಪ್ರತಿಕ್ರಿಯೆ ಕೇಳಿತ್ತು. ಬಳಿಕ ಕಳೆದ ಜುಲೈನಲ್ಲಿ ಪ್ರಕರಣದ ತೀರ್ಪು ಕಾಯ್ದಿರಿಸಿತ್ತು.
ಕಾನೂನು ಜಾರಿಗೆ ಪರಿಣಾಮಕಾರಿ ಕ್ರಮಗಳು
ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಬಾಲ್ಯ ವಿವಾಹ ಕರ್ತವ್ಯಗಳತ್ತ ಮಾತ್ರವೇ ಗಮನಹರಿಸಬೇಕು. ಅವರ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಬೇರಾವುದೇ ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸಬಾರದು.
ಜಿಲ್ಲಾ ಮಟ್ಟದ ಜವಾಬ್ದಾರಿ: ಜಿಲ್ಲಾಧಿಕಾರಿಗಳು, ಮತ್ತು ದಂಡಾಧಿಕಾರಿಗಳುಯ ಬಾಲ್ಯವಿವಾಹ ತಡೆಯ ಮುಂದಾಳತ್ವ ವಹಿಸಬೇಕು, ಬಾಲ್ಯ ವಿವಾಹ ಪ್ರಕರಣಗಳ ಮೇಲೆ ತ್ವರಿತ ಕ್ರಮ ಮತ್ತು ಕಾರ್ಯ ನಿರ್ವಹಣೆಗೆ ಮುಂದಾಗಬೇಕು. ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನು ಹೊಣೆಗಾರಿಕೆಯೆಡೆಗೆ ಗಮನಹರಿಸಬೇಕು.
ವಿಶೇಷ ಪೊಲೀಸ್ ಘಟಕ: ಬಾಲ್ಯ ವಿವಾಹ ಪ್ರಕರಣಗಳನ್ನು ನಿರ್ವಹಿಸಲೆಂದೇ ಪ್ರತ್ಯೇಕವಾದ ಪೊಲೀಸ್ ಘಟಕ ಇರಬೇಕು. ವಿವಾಹ ತಡೆಗೆ ಹಾಗೂ ಸಕಾಲಿಕ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳೊಂದಿಗೆ ನಿಕಟವಾಗಿ ಈ ಘಟಕ ಕೆಲಸ ಮಾಡಬೇಕು.
ವಿಶೇಷ ಬಾಲ್ಯವಿವಾಹ ನಿಷೇಧ ಘಟಕ: ಬಾಲ್ಯ ವಿವಾಹದ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ, ವಿಶೇಷ ಘಟಕಗಳನ್ನು ಸ್ಥಾಪಿಸಿ ಅಂತಹ ಪ್ರಕರಣಗಳ ಮೇಲ್ವಿಚಾರಣೆ, ವರದಿ ಮತ್ತು ಮಧ್ಯಸ್ಥಿಕೆಗೆ ಮುಂದಾಗಬೇಕು., ನೈಜ ಸಮಯದಲ್ಲಿ ಘಟನೆಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಎನ್‌ಜಿಒಗಳು ಮತ್ತು ಸಮುದಾಯದ ಮುಖಂಡರೊಂದಿಗೆ ಈ ಘಟಕಗಳು ಸಹಕರಿಸಬೇಕು.
ನೀತಿ ಸಂಹಿತೆ: ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಮತ್ತು ಪೊಲೀಸರು ಸೇರಿದಂತೆ ಸ್ಥಳೀಯ ಅಧಿಕಾರಿಗಳ ಜವಾಬ್ದಾರಿ ತಿಳಿಸುವಂತಹ ಸಂಹಿತೆಯೊಂದನ್ನು ಜಾರಿಗೆ ತರಬೇಕು.
ನ್ಯಾಯಾಂಗ ಕ್ರಮಗಳು
ಮ್ಯಾಜಿಸ್ಟ್ರೇಟ್‌ಗಳಿಗೆ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲು ಮತ್ತು ಬಾಲ್ಯ ವಿವಾಹ ತಡೆ ಆದೇಶ ನೀಡಲು ಹೆಚ್ಚಿನ ಅಧಿಕಾರ ನೀಡಬೇಕು. ಬಾಲ್ಯವಿವಾಹಗಳು ಸಿಂಧುವಾಗದಂತೆ ಮ್ಯಾಜಿಸ್ಟ್ರೇಟ್‌ಗಳು ನಿರ್ಬಂಧಕ ಆದೇಶ ಹೊರಡಿಸಬೇಕು.
ವಿಶೇಷ ಬಾಲ್ಯ ವಿವಾಹ ನ್ಯಾಯಾಲಯಗಳ ಸ್ಥಾಪನೆ: ಬಾಲ್ಯ ವಿವಾಹ ಪ್ರಕರಣಗಳ ವಿಚಾರಣೆಗೆ ಮೀಸಲಾದ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಈ ನ್ಯಾಯಾಲಯಗಳು ಅಪ್ರಾಪ್ತ ವಯಸ್ಕರಿಗೆ ಮತ್ತಷ್ಟು ಹಾನಿಯುಂಟುಮಾಡುವ ವಿಳಂಬಗಳನ್ನು ಕಡಿಮೆ ಮಾಡಲು ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಬೇಕು ಮತ್ತು ತ್ವರಿತ ವಿಚಾರಣೆ ನಡೆಸಬೇಕು.
ನಿರ್ಲಕ್ಷ್ಯ ವಹಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಡ್ಡಾಯ ಕ್ರಮ: ತಮ್ಮ ವ್ಯಾಪ್ತಿಯಲ್ಲಿರುವ ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಕರ್ತವ್ಯ ನಿರ್ಲಕ್ಷ್ಯ ತೋರುವ ಯಾವುದೇ ಸಾರ್ವಜನಿಕ ನೌಕರನ ವಿರುದ್ಧ ಕಠಿಣ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು.
ಸಮುದಾಯದ ಒಳಗೊಳ್ಳುವಿಕೆ
ವಾರ್ಷಿಕ ಕ್ರಿಯಾ ಯೋಜನೆಗಳು ಮತ್ತು ಸಮುದಾಯ-ಕೇಂದ್ರಿತ ಕಾರ್ಯಕ್ಷಮತೆಯ ಸೃಷ್ಟಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳನ್ನು ಪರಿಗಣಿಸುವ ಪ್ರಮುಖ ಕಾರ್ಯಕ್ಷಮತೆ ಸೂಚಕಗಳೊಂದಿಗೆ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಬೇಕು. ಈ ಯೋಜನೆಗಳು ನಿರ್ದಿಷ್ಟ ಸಮುದಾಯದ ನಂಬಿಕೆಗಳು ಮತ್ತು ಬಾಲ್ಯವಿವಾಹಕ್ಕೆ ಸಂಬಂಧಿಸಿರುವ ಆಚರಣೆಗಳನ್ನು ಗಮನಿಸಿ ಮಾಪನೀಯ ಗುರಿಗಳನ್ನು ನೀಡಬೇಕು.
ಅಲ್ಲದೆ, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಸಹಯೋಗ ಹೆಚ್ಚಿಸಲು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ಸ್ಥಳೀಯ ಸರ್ಕಾರದ ಪ್ರತಿನಿಧಿಗಳು, ಎನ್‌ಜಿಒಗಳು ಹಾಗೂ ಶಿಕ್ಷಕರು ಸೇರಿದಂತೆ ಭಾಗೀದಾರರಿಗೆ ನಿಯಮಿತ ದೃಷ್ಟಿಕೋನ ಕಾರ್ಯಕ್ರಮ, ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಬೇಕು.
ಬಾಲ್ಯವಿವಾಹ ಮುಕ್ತ ಗ್ರಾಮ ಯೋಜನೆ ಜಾರಿ: ಸ್ವಚ್ಛ ಭಾರತ್ ಅಭಿಯಾನದಡಿ ಯಶಸ್ವಿಯಾದ "ಬಯಲು ಮಲವಿಸರ್ಜನೆ ಮುಕ್ತ ಗ್ರಾಮ" ಯೋಜನೆಯಂತೆಯೇ, "ಬಾಲ್ಯ ವಿವಾಹ ಮುಕ್ತ ಗ್ರಾಮ" ಯೋಜನೆ ಜಾರಿಯಾಗಬೇಕು.
ಜಾಗೃತಿ ಅಭಿಯಾನಗಳು
ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಖ್ಯವಾಗಿ ಗಮನಹರಿಸಬೇಕು. ಬಾಲಕಿಯರ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳು ಮತ್ತು ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಸಂಸ್ಥೆಗಳು ಎನ್‌ಜಿಒಗಳು ಮತ್ತು ಮಾಧ್ಯಮಗಳೊಂದಿಗೆ ಕೆಲಸ ಮಾಡಬೇಕು. ಈ ಅಭಿಯಾನಗಳು ವಿಶೇಷವಾಗಿ ಬಾಲ್ಯವಿವಾಹ ಹೆಚ್ಚು ಪ್ರಚಲಿತದಲ್ಲಿರುವ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ತರಬೇತಿ/ಸಾಮರ್ಥ್ಯ ವೃದ್ಧಿ
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕ ಶುಶ್ರೂಷಕ-ಶುಶ್ರೂಷಕಿಯರು, ಮತ್ತು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡುವ ಮೂಲಕ ಬಾಲ್ಯ ವಿವಾಹ ತಡೆಗೆ ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಲ್ಲಿನ ಅವರ ಪಾತ್ರವನ್ನು ಪರಿಣಾಮಕಾರಿಯಾಗಿಸಬೇಕು.
ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ: ಪಿಸಿಎಂಎ, ಮಕ್ಕಳ ಹಕ್ಕುಗಳು ಮತ್ತು ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಪ್ರಕರಣಗಳಲ್ಲಿನ ಸೂಕ್ಷ್ಮ ಕಾನೂನು ಅಂಶಗಳ ಕುರಿತು ಪೊಲೀಸ್ ಅಧಿಕಾರಿಗಳು, ವಿಶೇಷವಾಗಿ ವಿಶೇಷ ಬಾಲಾಪರಾಧ ಪೊಲೀಸ್ ಘಟಕಗಳಿಗೆ ತರಬೇತಿ ನೀಡಬೇಕು.
ಶಿಕ್ಷಕರು ಮತ್ತು ಶಾಲಾ ನಿರ್ವಾಹಕರ ಸಾಮರ್ಥ್ಯ ವೃದ್ಧಿ: ಬಾಲ್ಯ ವಿವಾಹದ ಸುಳಿವು ಪತ್ತೆಗಾಗಿ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲು ಶಿಕ್ಷಕರು ಮತ್ತು ಶಾಲಾ ನಿರ್ವಾಹಕರಿಗೆ ತರಬೇತಿ ನೀಡಬೇಕು.
ಸ್ಥಳೀಯ ನಾಯಕರು ಮತ್ತು ಸಮುದಾಯದ ಪ್ರಭಾವಿಗಳ ಸಬಲೀಕರಣ: ಬಾಲ್ಯವಿವಾಹ ತಡೆಗಟ್ಟುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರು ಮತ್ತು ಸಮುದಾಯದ ಪ್ರಭಾವಿಗಳು ಸೇರಿದಂತೆ ಸ್ಥಳೀಯ ನಾಯಕರ ನಿರ್ಣಾಯಕ ಪಾತ್ರವನ್ನು ಕೇಂದ್ರೀಕರಿಸಿ ತರಬೇತಿ ಕಾರ್ಯಕ್ರಮ ವಿನ್ಯಾಸಗೊಳಿಸಬೇಕು.
ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಭಾಗಿಯಾಗುವಿಕೆ: ಸ್ವಯಂಸೇವಕರು ಮತ್ತು ಸಿಬ್ಬಂದಿಯ ಬಾಲ್ಯ ವಿವಾಹ ತಡೆಗೆ ತರಬೇತಿ ನೀಡಲು ಮಹಿಳಾ ಹಕ್ಕು ಮತ್ತು ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುವ ಎನ್‌ಜಿಒಗಳೊಂದಿಗೆ ತೊಡಗಿಕೊಳ್ಳಬೇಕು.
ಆರೋಗ್ಯ ರಕ್ಷಣೆ ಒದಗಿಸುವವರಿಗೆ ತರಬೇತಿ: ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿರ್ದಿಷ್ಟ ಆರೋಗ್ಯ ಅಪಾಯಗಳನ್ನು ಪರಿಹರಿಸಲು ವೈದ್ಯರು ಮತ್ತು ಸಲಹೆಗಾರರನ್ನು ಒಳಗೊಂಡ ಆರೋಗ್ಯ ರಕ್ಷಣೆದಾತರಿಗೆ ತರಬೇತಿ ನೀಡಬೇಕು.
ಅಲ್ಲದೆ ಶೈಕ್ಷಣಿಕ ಪ್ರೋತ್ಸಾಹ ಮತ್ತು ವಿದ್ಯಾರ್ಥಿವೇತನ ಒದಗಿಸಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ಸರ್ಕಾರಿ ಇಲಾಖೆಗಳು ಸಹಯೋಗದಲ್ಲಿ ಒಮ್ಮುಖ ಸೇವೆಯನ್ನು ನಿರಂತರವಾಗಿ ಒದಗಿಸಬೇಕು.
ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದಂತೆ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನ ಅಭಿವೃದ್ಧಿ, ಪಂಚಾಯಿತಿಗಳು ಮತ್ತು ಸ್ಥಳೀಯ ಮುಖಂಡರಿಗೆ ತರಬೇತಿ, ಅಪಾಯದಲ್ಲಿರುವ ಬಾಲಕಿಯರಿಗಾಗಿ ವೈಯಕ್ತಿಕ ಆರೈಕೆಗಾಗಿ ಯೋಜನೆ ಹಮ್ಮಿಕೊಳ್ಳಬೇಕು
ಬಾಲ್ಯ ವಿವಾಹವನ್ನು ವರದಿ ಮಾಡುವುದಕ್ಕಾಗಿ, ಕೇಂದ್ರೀಕೃತ ವರದಿ ಪೋರ್ಟಲ್ ರಚನೆ ಹಾಗೂ ತಂತ್ರಜ್ಞಾನ-ಚಾಲಿತ ಉಪಕ್ರಮಗಳಿಗೆ ಮುಂದಾಗಬೇಕು. ತಂತ್ರಜ್ಞಾನ ಚಾಲಿತ ಬೆಂಬಲ ಸೇವೆ ಒದಗಿಸಬೇಕು ಹಾಗೂ ಶಾಲಾ ಹಾಜರಾತಿಗೆ ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ ನಡೆಯಬೇಕು.
ಬಾಲ್ಯ ವಿವಾಹ ತಡೆಯಲು ಅಗತ್ಯವಾದ ನಿಧಿ ಮತ್ತು ಸಂಪನ್ಮೂಲ ಸಂಗ್ರಹಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವುದು, ಬಾಲನ್ಯಾಯ ನಿಧಿಯ ಸಾಂಸ್ಥೀಕರಣಕ್ಕೆ ಮುಂದಾಗಬೇಕು. ಜೊತೆಗೆ ಬಾಲ್ಯ ವಿವಾಹದಿಂದ ಹೊರಬರುವ ಬಾಲಕಿಯರಿಗೆ ಪರಿಹಾರ ನೀಡಬೇಕು. ಅಪಾಯದಲ್ಲಿರುವ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ನೆರವು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿ ತಿಳಿಸಿದೆ.