ನ್ಯಾಯಾಲಯಕ್ಕೆ ರಜೆ ಇದ್ದು ವಿಚಾರಣೆ ನಡೆಸದ ಸಂದರ್ಭಗಲ್ಲಿ ಸಂಬಳ ಪಡೆಯುವುದಕ್ಕೆ ಪಾಪಪ್ರಜ್ಞೆ ಕಾಡುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಮಂಗಳವಾರ ಹೇಳಿದರು.
ಸರ್ಕಾರಿ ಸೇವೆಯಿಂದ ವಜಾಗೊಂಡು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಮರುನೇಮಕಗೊಂಡಿದ್ದ ಮಧ್ಯಪ್ರದೇಶದ ಸಿವಿಲ್ ನ್ಯಾಯಾಧೀಶರಿಗೆ ವೇತನ ಮರಳಿಸಲು ನಿರಾಕರಿಸಿದ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನಾಗರತ್ನ ಈ ಹೇಳಿಕೆ ನೀಡಿದರು.
"ಬೇಸಿಗೆ ರಜೆಯಲ್ಲಿ ಸಂಬಳ ಪಡೆಯಲು ನನಗೆ ತುಂಬಾ ಬೇಸರವಾಗುತ್ತದೆ. ಏಕೆಂದರೆ ನಾವು ಆಗ ಕೆಲಸ ಮಾಡಿರುವುದಿಲ್ಲ" ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಸೇವೆಯಲ್ಲಿಲ್ಲದ ಅವಧಿಗೆ ವೇತನ ನೀಡುವಂತೆ ನಿರ್ದೇಶಿಸಬೇಕು ಎಂದು ಹಿರಿಯ ವಕೀಲ ಆರ್ ಬಸಂತ್ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಆದರೆ ಅವರು ವಜಾಗೊಂಡಿದ್ದ ವೇಳೆ ಕೆಲಸ ಮಾಡಿರದ ಕಾರಣ ಹಿಂಬಾಕಿ ವೇತನಕ್ಕೆ ಆದೇಶಿಸಲಾಗದು ಎಂದು ನ್ಯಾ. ನಾಗರತ್ನ ಸ್ಪಷ್ಟಪಡಿಸಿದರು.
“ಒಬ್ಬರನ್ನು ಕೆಲಸಕ್ಕೆ ಮರುಸೇರ್ಪಡೆ ಮಾಡಿಕೊಂಡಾಗ ಅವರು ಕೆಲಸ ಮಾಡದ ಅವಧಿಗೆ ವೇತನ ನಿರೀಕ್ಷಿಸುವಂತಿಲ್ಲ ಎಂದು ನಿಮಗೆ ತಿಳಿದಿದೆ. ಅವರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸದೇ ಇರುವಾಗ ವೇತನ ಮರಳಿಸಲಾಗದು. ಇದಕ್ಕೆ ನಮ್ಮ ಆತ್ಮಸಾಕ್ಷಿ ಅನುಮತಿಸದು” ಎಂದು ಅವರು ಹೇಳಿದರು.
ನಾಲ್ವರು ಅಧಿಕಾರಿಗಳು ಆದಷ್ಟು ಬೇಗ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಡಲು ತ್ವರಿತ ಆದೇಶ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಹೈಕೋರ್ಟ್‌ಗೆ ಸೂಚಿಸಿತು.