ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಇತ್ತೀಚೆಗೆ ರೂಪುಗೊಂಡ ಕಾಯಿದೆಯನ್ನು 2024ರ ಸಾರ್ವತ್ರಿಕ ಚುನಾವಣೆಗೆ ಮೊದಲು ಜಾರಿಗೆ ತರಬೇಕೆಂದು ಪ್ರಾರ್ಥಿಸಿದ್ದ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ಡಾ. ಜಯಾ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅಂತಹ ನಿರ್ದೇಶನ ನೀಡುವ ಮೂಲಕ ಸುಪ್ರೀಂ ಕೋರ್ಟ್ ಶಾಸಕಾಂಗ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರಿದ್ದ ಪೀಠ ಹೇಳಿದೆ.
ಅರ್ಜಿಯನ್ನು ಪುರಸ್ಕರಿಸಿದರೆ ಶಾಸನ ರೂಪಿಸಿದಂತಾಗುತ್ತದೆ. ಹಾಗೆ ಮಾಡಲು ನ್ಯಾಯಾಲಯಕ್ಕೆ ತುಂಬಾ ಕಷ್ಟವಾಗುತ್ತದೆ. ಇದು (ಮಹಿಳಾ ಮೀಸಲಾತಿ ಜಾರಿಗೆ ತಂದಿರುವುದು) ಉತ್ತಮ ಹೆಜ್ಜೆಯಾಗಿದೆ. ಬಹಳಷ್ಟು ಸಮಸ್ಯೆಗಳಿವೆ. ಮೀಸಲಾತಿಯನ್ನು ಮೊದಲು ಕಲ್ಪಿಸಬೇಕಾಗುತ್ತದೆ. ಅದರ ಆಧಾರದ ಮೇಲೆ ಕೋಟಾ ನಿಗದಿಪಡಿಸಬೇಕಾಗುತ್ತದೆ. ಇದನ್ನು ನಿಯಮಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ ಎಂದು ನ್ಯಾ. ಖನ್ನಾ ಮೌಖಿಕವಾಗಿ ವಿವರಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ನಾಯಕ ಡಾ. ಜಯಾ ಠಾಕೂರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನಗಣತಿ, ಅಥವಾ ಕ್ಷೇತ್ರ ಪುನರ್‌ವಿಂಗಡಣೆಗಾಗಿ ಕಾಯದೆ, 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಈಚೆಗೆ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಡಾ. ಜಯಾ ಕೋರಿದ್ದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಸೆಪ್ಟೆಂಬರ್ 20 ರಂದು ಲೋಕಸಭೆ ಮತ್ತು ಸೆಪ್ಟೆಂಬರ್ 21 ರಂದು ರಾಜ್ಯಸಭೆ ಅಂಗೀಕರಿಸಿದ್ದವು. ಮಸೂದೆಗೆ ಸೆಪ್ಟೆಂಬರ್ 28ರಂದು ರಾಷ್ಟ್ರಪತಿಗಳ ಒಪ್ಪಿಗೆ ದೊರೆತಿತ್ತು.