ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಿಂದ ನಿಂದನಾತ್ಮಕ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ಟ್ವಿಟರ್ ಸೆಲೆಬ್ರಿಟಿ ಸಮೀರ್ ಠಕ್ಕರ್ ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ವಕೀಲರಾದ ಅಭಿನವ್ ಚಂದ್ರಚೂಡ್, ಯಶ್ಪಾಲ್ ದೇಶಮುಖ್ ಮತ್ತು ಎ ಎಸ್ ರೇಣು ಅವರು ಸಮೀರ್ ಪರ ವಾದಿಸಿದರೆ ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಪಿಪಿ) ಜೆ ಪಿ ಯಾಗ್ನಿಕ್ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.
ಆರೋಪಿ ಸಮೀರ್ ಅವರು ಪೊಲೀಸರಿಗೆ ಅಗತ್ಯ ಸಹಕಾರ ನೀಡುವವರೆಗೆ ಸಂಬಂಧಪಟ್ಟ ಮುಂಬೈ ಪೊಲೀಸರು ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಹೇಳಿದ ಎಪಿಪಿ ಹೇಳಿಕೆಯನ್ನು ನ್ಯಾಯಪೀಠವು ಒಪ್ಪಿಕೊಂಡಿತು. ಸಿಆರ್‌ಪಿಸಿ ಸೆಕ್ಷನ್ 161 ಅಡಿ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಗೆ ಅಕ್ಟೋಬರ್ 5ರ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರ ವೇಳೆಗೆ ಹಾಜರಾಗುವಂತೆ ಸಮೀರ್‌ಗೆ ನ್ಯಾಯಾಲಯ ಸೂಚಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ.
ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್ ಗಳ ಅಡಿ ಸಮೀರ್ ವಿರುದ್ಧ ದೂರು ದಾಖಲಿಸಲಾಗಿದೆ.
ಸಾರ್ವಜನಿಕ ಕಚೇರಿಯನ್ನು ಟೀಕಿಸುವುದು ಪ್ರಜೆಯ ಮೂಲಭೂತ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ಹಲವು ಸಂದರ್ಭದಲ್ಲಿ “ಶಕ್ತಿ ಕೇಂದ್ರದಲ್ಲಿ ಕುಳಿತವರು ಟೀಕೆಯನ್ನು ಸಹಿಸುವ ಗಟ್ಟಿ ಚರ್ಮ ಬೆಳೆಸಿಕೊಳ್ಳಬೇಕು” ಎಂದು ಹೇಳಿರುವ ತೀರ್ಪುಗಳನ್ನು ಆರೋಪಿಯ ಪರ ವಕೀಲ ಚಂದ್ರಚೂಡ್ ಉಲ್ಲೇಖಿಸಿದರು. ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಸ್ಥರನ್ನಲ್ಲದೇ ಸಾಮಾನ್ಯ ಜನರನ್ನು ಟೀಕಿಸಲಾಗುವುದಿಲ್ಲ ಎಂದೂ ಅವರು ವಾದಿಸಿದರು.
ಚಂದ್ರಚೂಡ್ ವಾದವನ್ನು ಒಪ್ಪದ ನ್ಯಾಯಾಲಯವು ವ್ಯಕ್ತಿಯ ಮೂಲಭೂತ ಹಕ್ಕು ಮತ್ತೊಬ್ಬ ವ್ಯಕ್ತಿಯ ಹಕ್ಕನ್ನು ಕಸಿಯುವಂತಾಗಬಾರದು ಎಂದಿದ್ದು, "ಟೀಕೆಗೆ ಎಲ್ಲರೂ ಸಮಾನವಾಗಿ ಪ್ರತಿಕ್ರಿಯಿಸುವುದಿಲ್ಲ. ಸಾರ್ವಜನಿಕ ಕಚೇರಿಯಲ್ಲಿರುವ ಕೆಲವರು ಇತರರಿಗಿಂತ ಹೆಚ್ಚು ಸೂಕ್ಷ್ಮರಾಗಿರುತ್ತಾರೆ” ಎಂದು ನ್ಯಾಯಪೀಠವು ಮೌಖಿಕವಾಗಿ ಹೇಳಿತು.
“ಸಾರ್ವಜನಿಕ ಕಚೇರಿಗಳಲ್ಲಿ ಕುಳಿತವರು ಕಚೇರಿಯ ಘನತೆಯನ್ನು ಎತ್ತಿಹಿಡಿಯುವುದಿಲ್ಲ. ಪ್ರಜೆಗಳು ಕಚೇರಿಯ ಘನತೆ ಹೆಚ್ಚಿಸುತ್ತಾರೆ.”ಬಾಂಬೆ ಹೈಕೋರ್ಟ್
ನಾಗ್ಪುರದ ನಿವಾಸಿಯಾದ ಸಮೀರ್ ಅವರು ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಮ್ಮ ಉಪಸ್ಥಿತಿಗೆ ಸೂಚಿಸದಂತೆ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದರು. ಪೊಲೀಸರು ಸಮೀರ್ ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ನ ಮುಖ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ.