ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ತೀವ್ರ ಗಾಯಗೊಂಡು ಸಾವನ್ನಪ್ಪಿದ 19 ವರ್ಷದ ದಲಿತ ಯುವತಿಯ ಅಂತ್ಯಕ್ರಿಯೆಯನ್ನು ರಾಜ್ಯ ಸರ್ಕಾರದ ಅಧಿಕಾರಶಾಹಿಯು ತರಾತುರಿಯಲ್ಲಿ ರಾತ್ರೋರಾತ್ರಿ ನಡೆಸಿರುವ ಘಟನೆಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ.
“ಗೌರವ ಮತ್ತು ಘನತೆಯಿಂದ ಅಂತಿಮ ಸಂಸಾರದ ಹಕ್ಕು” ಎಂಬ ಹೆಸರಿನಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾಖಲಿಸಿಕೊಳ್ಳುವಂತೆ ಲಖನೌ ಪೀಠದ ಹಿರಿಯ ರಿಜಿಸ್ಟ್ರಾರ್ ಅವರಿಗೆ ನ್ಯಾಯಾಲಯ ಸೂಚಿಸಿದ್ದು, ಇಂಥ ದೂರುಗಳ ವಿಚಾರಣಾ ವ್ಯಾಪ್ತಿ ಹೊಂದಿರುವ ಪೀಠಕ್ಕೆ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಕಾನೂನಿನ ಅನ್ವಯ ತನಿಖೆಯ ಮೇಲೆ ನಿಗಾವಹಿಸಬೇಕೆ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವ ಪ್ರಶ್ನೆಯನ್ನು ಮುಕ್ತವಾಗಿ ಇರಿಸಿರುವುದಾಗಿಯೂ ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಜಸ್ ಪ್ರೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು “ಯುವತಿಯು 29.09.2020ರಂದು ಸಾವನ್ನಪ್ಪಿದ್ದು, ಅಲ್ಲಿಂದ ಆಕೆಯ ಅಂತ್ಯಕ್ರಿಯೆ ವರೆಗೆ ನಡೆದಿರುವ ಆಪಾದಿಸಲ್ಪಟ್ಟಿರುವಂತಹ ಘಟನೆಗಳು ನಮ್ಮ ಆತ್ಮಸಾಕ್ಷಿಯನ್ನು ಕಲಿಕಿದೆ. ಈ ಹಿನ್ನೆಲೆಯಲ್ಲಿ ನಾವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಹೇಳಿದೆ.
ಕುಟುಂಬಸ್ಥರ ಒಪ್ಪಿಗೆ ಪಡೆಯದೇ ಬಲವಂತವಾಗಿ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬ ವರದಿಗಳನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.
"ನಾವು ಸ್ವಯಂಪ್ರೇರಣೆಯಿಂದ ಪರಿಗಣನೆಗೆ ತೆಗೆದುಕೊಂಡಿರುವಂತಹ ನಮ್ಮ ಮುಂದಿರುವ ಈ ಪ್ರಕರಣ ಅತ್ಯಂತ ಮಹತ್ವದ ಸಾರ್ವಜನಿಕ ಪ್ರಕರಣವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವಂಥದ್ದಾಗಿದೆ. ಇದಕ್ಕೆ ಕಾರಣವಾಗಿರುವುದು ಮೃತ ಸಂತ್ರಸ್ತೆಯ ಪ್ರಾಥಮಿಕ ಹಾಗೂ ಮೂಲಭೂತ ಮಾನವ ಹಕ್ಕುಗಳನ್ನು ಮಾತ್ರವೇ ಅಲ್ಲದೆ ಅವರ ಕುಟುಂಬದ ಸದಸ್ಯರ ಹಕ್ಕುಗಳನ್ನೂ ಸಹ ರಾಜ್ಯ ಸರ್ಕಾರದ ಅಧಿಕಾರಿಗಳು ಬಲಪ್ರಯೋಗದಿಂದ ಉಲ್ಲಂಘಿಸಿದ್ದಾರೆ ಎನ್ನುವ ಅರೋಪ. ಮೃತ ಸಂತ್ರಸ್ತೆಯ ಮೇಲೆ ಅತ್ಯಂತ ಘೋರ ದುಷ್ಕೃತ್ಯವನ್ನು ಅಪರಾಧಿಗಳು ಎಸಗಿದ್ದಾರೆ. ಆದರೆ, ಆನಂತರ ನಡೆದಿರುವ ಕೃತ್ಯವೇನಿದೆ, ಅದು ಸತ್ಯವಾಗಿದ್ದರೆ, ನಿಜಕ್ಕೂ ಆ ದುಃಖತಪ್ತ ಕುಟುಂಬದ ಗಾಯದ ಮೇಲೆ ಉಪ್ಪು ಸವರುವ ಮೂಲಕ ಅವರ ನೋವನ್ನು ಶಾಶ್ವತವಾಗಿಸುವಂತದ್ದಾಗಿದೆ"ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳ ಸುಳಿವು ದೊರೆಯದಂತೆ ತಡೆಯಲು ಯುವತಿಯ ಮೇಲಿನ ಅತ್ಯಾಚಾರದ ಬಳಿಕ ಆರೋಪಿಗಳು ಆಕೆಯ ನಾಲಿಗೆಯನ್ನು ತುಂಡರಿಸಿದ್ದಾರೆ ಎಂದು ವರದಿಯಾಗಿದೆ. ಅತ್ಯಾಚಾರದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದ ಮೇಲೆ ಪೊಲೀಸರು ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಬಲವಂತವಾಗಿ ಮಧ್ಯರಾತ್ರಿ 2.30ರ ವೇಳೆಗೆ ಸೆಪ್ಟೆಂಬರ್ 30ರ ಬೆಳಗಾಗುವುದಕ್ಕೂ ಮುನ್ನವೇ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಯುವತಿಯ ಶವವನ್ನು ನೋಡಲು ಕುಟುಂಬ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಅಲ್ಲದೇ ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಸದಂತೆ ಆಕೆಯ ಕುಟುಂಬ ಸದಸ್ಯರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಯುವತಿಯ ಕುಟುಂಬಸ್ಥರು ಬೇರೆಯದೇ ಚಿತ್ರಣ ನೀಡಿರುವುದನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ನಡೆಸಲು ನಿರ್ಧರಿಸಲಾಗಿದ್ದು, ಅಂದು ಸಂತ್ರಸ್ತೆಯ ಕುಟುಂಬದ ಸದಸ್ಯರೂ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಆಗ ಅವರಿಂದ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಹಾಥ್‌ರಸ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಗತ್ಯ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದ್ದು, ತನಿಖೆಯ ಸ್ಥಿತಿಗತಿಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ಒದಗಿಸುವಂತೆ ನಿರ್ದೇಶಿಸಲಾಗಿದೆ. ಹಿರಿಯ ವಕೀಲ ಜೈದೀಪ್ ನಾರಾಯಣ್ ಮಾಥುರ್ ಮತ್ತು ವಕೀಲ ಅಭಿನವ್ ಭಟ್ಟಾಚಾರ್ಯ ಅವರನ್ನು ಅಮಿಕಸ್ ಕ್ಯೂರಿಗಳನ್ನಾಗಿ ನ್ಯಾಯಾಲಯವು ನೇಮಿಸಿದೆ.