ಸುದ್ದಿಗಳು

[ಪೋಕ್ಸೊ ಪ್ರಕರಣ] ಮುರುಘಾ ಶ್ರೀ ಪೀಠ ತ್ಯಾಗಕ್ಕೆ ನಿರ್ದೇಶಿಸಲು ಕೋರಿ ಸಿಜೆಗೆ ಶಾಸಕ ಯತ್ನಾಳ್‌ ಪತ್ರ ಮನವಿ

ಮಠದ ಚಟುವಟಿಕೆ ನೋಡಿಕೊಳ್ಳಲು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಾಜದ ಐವರು ಪ್ರಮುಖರ ಉನ್ನತ ಮಟ್ಟದ ಸಮಿತಿ ನೇಮಿಸಲು ಮನವಿ.

Bar & Bench

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಶನಿವಾರ ಪತ್ರ ಬರೆದಿದ್ದಾರೆ.

ಮುರುಘಾ ಮಠದ ಆಡಳಿತ ಮತ್ತು ದೈನಂದಿನ ವ್ಯವಹಾರಗಳ ಸುಗಮವಾಗಿ ನಡೆಸಲು ಅನುವಾಗುವ ನಿಟ್ಟಿನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚಿಸಲು ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠ ಐತಿಹಾಸಿಕ ವಿರಕ್ತ ಪರಂಪರೆಯ ಶೂನ್ಯ ಪೀಠದ ಅಗ್ರಗಣ್ಯ ಮಠವಾಗಿದ್ದು, ಇದರ ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಿಂದ ಜೈಲು ಪಾಲಾಗಿರುವುದು ವೀರಶೈವ-ಲಿಂಗಾಯತ ಸಮುದಾಯಕ್ಕೆ ಅವಮಾನಕರ ಸಂಗತಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೂರ್ತಿ ಮುರುಘಾ ಶರಣರು ಸ್ವಇಚ್ಛೆಯಿಂದ ಪೀಠ ತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ಭಕ್ತ ಸಮೂಹ ಮುಂದಾಗಲು ನಿರ್ದೇಶಿಸಬೇಕು. ಶಿವಮೂರ್ತಿ ಮುರುಘಾ ಶರಣರು ಜೈಲಿನಲ್ಲಿರುವುದರಿಂದ ಮಠದ ಆಡಳಿತ ಚಟುವಟಿಕೆ ಹಳಿ ತಪ್ಪಿದೆ. ಎಸ್‌ಜೆಎಂ ವಿದ್ಯಾಪೀಠಕ್ಕೆ ಕಾರ್ಯದರ್ಶಿಯನ್ನಾಗಿ ವಸ್ತ್ರದಮಠ ಅವರನ್ನು ಮುರುಘಾ ಶರಣರು ನೇಮಕ ಮಾಡಿದ್ದಾರೆ. ಆದರೆ, ಇದು ಅವರ ಏಕಪಕ್ಷೀಯ ನಿರ್ಧಾರವಾಗಿದ್ದು, ಇದರಿಂದ ಸ್ಥಳೀಯ ಭಕ್ತ ಸಮೂಹ ಅಸಮಾಧಾನಗೊಂಡಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ವಿವರಿಸಿದ್ದಾರೆ.

ಇಂದಿನ ಪರಿಸ್ಥಿತಿಯಿಂದಾಗಿ ಮಠದ ಸಾವಿರಾರು ನೌಕರರು ಸಂಬಳ, ಸಾರಿಗೆ ಖರ್ಚು ಮತ್ತು ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು, ಬ್ಯಾಂಕ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಸಂಸ್ಥೆ ಅಧೀನದಲ್ಲಿರುವ ನೂರಾರು ಘಟಕಗಳ ಕಾರ್ಯಚಟುವಟಿಕೆಗೆ ಅಡಚಣೆಯಾಗಿದೆ. ಮಠದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ. ಇದಕ್ಕಾಗಿ ವೀರಶೈವ-ಲಿಂಗಾಯತ ಸಮುದಾಯದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಾಜದ ಐವರು ಪ್ರಮುಖರ ಉನ್ನತ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ಕೂಡಲೇ ನೇಮಿಸಬೇಕು ಎಂದು ಕೋರಲಾಗಿದೆ.

ಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರ ಮತ್ತು ಧಾರ್ಮಿಕ ಚಟುವಟಿಕೆಗಳ ಕುರಿತು ನಿರ್ಧಾರ ಕೈಗೊಳ್ಳಲು ಸಮಿತಿಯು ಅಧಿಕಾರ ಹೊಂದಿರಬೇಕು. ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಸಮಿತಿ ನೆರವೇರಿಸಬೇಕು. ಕಾನೂನು ರೀತಿಯಲ್ಲಿ ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಮಠದ ಭಕ್ತರು ಬದ್ಧವಾಗಿರಬೇಕು ಎಂದು ನಿರ್ದೇಶಿಸಬೇಕು ಎಂದು ಯತ್ನಾಳ್‌ ಪತ್ರದ ಮುಖೇನ ಕೋರಿದ್ದಾರೆ.