ಮುಡಾ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯ ಬದಲಾವಣೆ ಮತ್ತು ಹೊಸ ತನಿಖಾಧಿಕಾರಿ ನೇಮಿಸಲು ಲೋಕಾಯುಕ್ತರಿಗೆ ನಿರ್ದೇಶಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಲೋಕಾಯುಕ್ತ ಪರ ವಕೀಲರಿಗೆ ನಿರ್ದೇಶಿಸಿದೆ.
ಮುಡಾ ಪ್ರಕರಣದಲ್ಲಿ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಿದರು.
ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಂವಿಧಾನದ 51(A) ವಿಧಿ ಮತ್ತು ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದು, ತನಿಖಾಧಿಕಾರಿ ಬದಲಾವಣೆ ಕೋರಿದ್ದಾರೆ. ಇದಕ್ಕೆ ಪೂರಕವಾಗಿ ಎರಡು ತೀರ್ಪುಗಳನ್ನೂ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ಕಾಲಾವಕಾಶ ಕೋರಿದ್ದಾರೆ. ತನಿಖೆಗೆ ಸಂಬಂಧಿಸಿದಂತೆ ಮುಂದುವರಿದ ಸ್ಥಿತಿಗತಿ ವರದಿ ಮತ್ತು ಆಕ್ಷೇಪಣೆ ಸಲ್ಲಿಸುವ ಸಂಬಂಧ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ.
ಸ್ನೇಹಮಯಿ ಕೃಷ್ಣ ಅವರು ತನಿಖೆ ನಡೆಸುತ್ತಿರುವ ವಿಧಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆಯು ಬಿ ರಿಪೋರ್ಟ್ ಸಲ್ಲಿಕೆಯಾಗಿರುವವರನ್ನು ಹೊರತುಪಡಿಸಿ (ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಿಯ ಮಾಲೀಕ ಜೆ ದೇವರಾಜು), ಉಳಿದವರ ಬಗ್ಗೆ ತನಿಖೆಯನ್ನು ಬಾಕಿ ಉಳಿಸಿದೆ ಎಂದು ಆಕ್ಷೇಪಿಸಿದ್ದಾರೆ.
ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ಸ್ಥಿತಿಗತಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಅಫಿಡವಿಟ್ ರೂಪದಲ್ಲಿ ಮುಂದಿನ ವಿಚಾರಣೆ ವೇಳೆಗೆ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ವೆಂಕಟೇಶ್ ಅರಬಟ್ಟಿ ಅವರು ಅಫಿಡವಿಟ್ ಮತ್ತು ಮೂವರು ಅಧಿಕಾರಿಗಳ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಸರ್ಕಾರದಿಂದ ಅನುಮತಿ ಕೋರಿದ್ದು, ತನಿಖೆ ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶ ಕೋರಿರುವ ಸಂಬಂಧದ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದಾರೆ. ಅಲ್ಲದೇ, ಕಾನೂನಿನ ಅನ್ವಯ ತನಿಖೆ ನಡೆಸುತ್ತಿಲ್ಲ ಎಂಬ ದೂರುದಾರರ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.