ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರ ನಡೆಗೆ ಅತೃಪ್ತಿ; ವಿಸ್ತೃತ ವರದಿ ಸಲ್ಲಿಸಲು ಆದೇಶಿಸಿದ ವಿಶೇಷ ನ್ಯಾಯಾಲಯ

“ಕಳೆದ ವಿಚಾರಣೆಯಲ್ಲಿನ ನಿರ್ದೇಶನದಂತೆ ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ರಾಜ್ಯ ಸರ್ಕಾರಕ್ಕೆ ಅನುಮತಿ ಕೋರಲಾಗಿದೆ” ಎಂದ ಲೋಕಾಯುಕ್ತ ಪರ ವಕೀಲರು.
CM Siddaramaiah, MUDA, Bengaluru City Civil Court
CM Siddaramaiah, MUDA, Bengaluru City Civil Court
Published on

ಮುಡಾ ಪ್ರಕರಣದಲ್ಲಿ ತನಿಖಾಧಿಕಾರಿಯ ನಡೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅತೃಪ್ತಿ ವ್ಯಕ್ತಪಡಿಸಿದ್ದು, ಸ್ಥಿತಿಗತಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಅಫಿಡವಿಟ್‌ ರೂಪದಲ್ಲಿ ಮುಂದಿನ ವಿಚಾರಣೆ ವೇಳೆಗೆ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಮುಡಾ ಪ್ರಕರಣದಲ್ಲಿ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ನಡೆಸಿದರು.

“ಲೋಕಾಯುಕ್ತ ತನಿಖಾಧಿಕಾರಿಯು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17(A) ಅಡಿ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ಕೋರಿರುವುದರಿಂದ ತನಿಖಾ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದರ ಜೊತೆಗೆ ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿ ಒಂದಷ್ಟು ದಾಖಲೆ ಸಲ್ಲಿಸಿದ್ದಾರೆ. ತನಿಖಾಧಿಕಾರಿಯು ಕಾಲಾವಕಾಶ ಕೋರುತ್ತಿರುವ ರೀತಿಯು ನ್ಯಾಯಾಲಕ್ಕೆ ಸಂತೋಷ ಉಂಟು ಮಾಡಿಲ್ಲ. ದೂರುದಾರ ಸ್ನೇಹಮಯಿ ಕೃಷ್ಣ ಅವರು ವಿಚಾರಣೆ ಮುಂದೂಡಿಕೆಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕರಣದಲ್ಲಿನ ಐದನೇ ಆರೋಪಿ ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ ವಿರುದ್ಧ ಅಗತ್ಯ ಅನುಮತಿ ಪಡೆಯಲಾಗಿದೆ. ಆದರೆ, ತನಿಖಾ ಸಂಸ್ಥೆಯು ಅನಗತ್ಯವಾಗಿ ವಿಚಾರಣೆ ಮುಂದೂಡಿಕೆ ಕೋರುತ್ತಿದೆ ಎಂದು ಆಕ್ಷೇಪಿಸಿದ್ದಾರೆ," ಎಂದು ಅದೇಶದಲ್ಲಿ ದಾಖಲಿಸಿತು.

ಮುಂದುವರಿದು, "ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ಸಲ್ಲಿಸಿರುವ ಬಿ ವರದಿ ವಿರುದ್ಧ ಸೂಕ್ತ ಆದೇಶ ಮಾಡಲು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ. ಈ ಕೋರಿಕೆಯನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ. ತನಿಖೆ ಸಂಪೂರ್ಣಗೊಂಡ ಬಳಿಕ ಬಿ ವರದಿ ಪರಿಗಣಿಸುವುದು ಸೂಕ್ತ ಎಂದು ಈ ನ್ಯಾಯಾಲಯ ಈಗಾಗಲೇ ಹೇಳಿದೆ. ನ್ಯಾಯಾಲಯದ ಪ್ರಕ್ರಿಯೆ ವಿಳಂಬಗೊಳಿಸಿರುತ್ತಿರುವ ಬಗ್ಗೆ ಅರ್ಜಿದಾರ ಸ್ನೇಹಮಯಿ ಕೃಷ್ಣ ಆತಂಕ ವ್ಯಕ್ತಪಡಿಸಿರುವುದನ್ನು ನ್ಯಾಯಾಲಯವು ಪರಿಗಣಿಸಿದೆ. ಉಭಯ ಪಕ್ಷಕಾರರ ವಾದವನ್ನು ಪರಿಗಣಿಸಿ ಸ್ಥಿತಿಗತಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಅಫಿಡವಿಟ್‌ ರೂಪದಲ್ಲಿ ವಿಸ್ತೃತ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ, ಮೈಸೂರು ಲೋಕಾಯುಕ್ತ ಪೊಲೀಸರ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್‌ ಅರಬಟ್ಟಿ ಅವರು “ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ತನಿಖೆ ಮುಂದುವರಿಸಲು ಆದೇಶಿಸಿತ್ತು. ಅದರ ಭಾಗವಾಗಿ ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ರಾಜ್ಯ ಸರ್ಕಾರಕ್ಕೆ ಅನುಮತಿ ಕೋರಲಾಗಿದೆ. ಹೀಗಾಗಿ, ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಪಾರ್ಟಿ ಇನ್‌ ಪರ್ಸನ್‌ ಆಗಿ ಹಾಜರಾಗಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅವರು “ತನಿಖಾಧಿಕಾರಿಗಳು ಉದ್ದೇಶಪೂರ್ವಕವಾಗಿ ತನಿಖೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡಬಾರದು” ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 29ಕ್ಕೆ ವಿಚಾರಣೆ ಮುಂದೂಡಿದ್ದು, ಅಂದು ಸ್ಥಿತಿಗತಿ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.

Also Read
ಮುಡಾ ಪ್ರಕರಣ: ತನಿಖೆ ಮುಂದುವರಿಸಲು ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಅನುಮತಿ

ಏಪ್ರಿಲ್‌ 15ರಂದು ನ್ಯಾಯಾಲಯವು ತನಿಖೆ ಮುಂದುವರಿಸಿ, ಮೇ 7ಕ್ಕೆ ನಿರ್ಣಾಯಕ ವರದಿ ಸಲ್ಲಿಸಲು ಆದೇಶಿಸಿತ್ತು.

“ಸಿಆರ್‌ಪಿಸಿ ಸೆಕ್ಷನ್‌ 173(8) ಅಡಿ ಮುಂದಿನ ತನಿಖೆ ನಡೆಸಲು ಮೈಸೂರು ಲೋಕಾಯುಕ್ತರಿಗೆ ಅನುಮತಿಸಲಾಗಿದ್ದು, ನಿರ್ಣಾಯಕವಾದ ಅಂತಿಮ ವರದಿಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು. ಸೀಮಿತ ವ್ಯಾಪ್ತಿಗೆ ಜಾರಿ ನಿರ್ದೇಶನಾಲಯವನ್ನು ಬಾಧಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಲೋಕಾಯುಕ್ತ ಪೊಲೀಸರು ನಿರ್ಣಾಯಕವಾದ ಅಂತಿಮ ವರದಿ ಸಲ್ಲಿಸುವವರೆಗೆ ಬಿ ವರದಿ ಪರಿಗಣಿಸುವುದು ಅಥವಾ ತಿರಸ್ಕರಿಸುವ ಪ್ರಶ್ನೆಯನ್ನು ಬಾಕಿ ಉಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿತ್ತು.

Kannada Bar & Bench
kannada.barandbench.com