ಶಿಸ್ತುಬದ್ಧವಾಗಿರುವುದು ಸಶಸ್ತ್ರ ಪಡೆಗಳ ಅಂತರ್ಗತ ಹೆಗ್ಗುರುತಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಸಡಿಲಿಕೆ ನೀಡುವುದು ತಪ್ಪು ಸಂದೇಶ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಮಾಜಿ ಸೈನಿಕ ಮದನ್ ಪ್ರಸಾದ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸೇನಾಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಸಂಪೂರ್ಣ ಅಶಿಸ್ತು ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ತಿಳಿಸಿದೆ.
ಸೂಚನೆ ನೀಡದೆ ಹೆಚ್ಚುವರಿ ರಜೆ ತೆಗೆದುಕೊಂಡಿದ್ದಕ್ಕಾಗಿ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ ಚಾಲಕರೊಬ್ಬರನ್ನು ಸೇನಾ ಸೇವೆಯಿಂದ ವಜಾಗೊಳಿಸಿದ್ದ ಆದೇಶ ಎತ್ತಿಹಿಡಿಯುವಾಗ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
“ಆತ ಪದೇ ಪದೇ ಲೋಪ ಎಸಗಿರುವಂತೆ ತೋರುತ್ತಿದ್ದು 108 ದಿನಗಳಷ್ಟು ಸುದೀರ್ಘ ಕಾಲ ಗೈರುಹಾಜರಿಯ ಬಗ್ಗೆ ಕ್ಷಮೆ ಕೋರಿರುವುದು ಸೂಕ್ತವಲ್ಲ. ಇದನ್ನು ಮನ್ನಿಸಿದರೆ ಸೇವೆಯಲ್ಲಿರುವ ಇತರರಿಗೆ ತಪ್ಪು ಸಂದೇಶ ಕಳಿಸಿದಂತಾಗುತ್ತದೆ. ಶಿಸ್ತು ಎಂಬುದು ಸಶಸ್ತ್ರ ಪಡೆಗಳ ಅವಿಭಾಜ್ಯ ಲಕ್ಷಣವಾಗಿದ್ದು ಇದು ರಾಜಿ ಮಾಡಿಕೊಳ್ಳುವಂತಹ ವಿಚಾರವಲ್ಲ” ಎಂದು ನ್ಯಾಯಾಲಯ ನುಡಿದಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, "ಅರ್ಜಿದಾರರು ತಮ್ಮ ಸೇವಾವಧಿಯಲ್ಲಿ ತಾವೇ ಅನೇಕ ಸ್ವಾತಂತ್ರ್ಯ ತೆಗೆದುಕೊಂಡಿದ್ದಾರೆ; ಇದಕ್ಕಾಗಿ ಅನೇಕ ಬಾರಿ ದಂಡ, ಕಠಿಣ ಕಾರಾಗೃಹ ವಾಸದಂತಹ ಶಿಕ್ಷೆಯನ್ನು ವಿಧಿಸಿದ್ದರೂ ಸಹ ತಮ್ಮ ವರ್ತನೆಯನ್ನು ಸುಧಾರಿಸಿಕೊಂಡಿಲ್ಲ. ಇದೇ ತೆರನಾದ ಅಪರಾಧದಲ್ಲಿ ಅವರು ಮಾಡಿರುವ ಆರನೆಯ ಉಲ್ಲಂಘನೆ ಇದಾಗಿದೆ. ಹಾಗಾಗಿ ಅವರು ಇದಕ್ಕಿಂತ ಕಡಿಮೆಯ ಯಾವುದೇ ರೀತಿಯ ಶಿಕ್ಷೆಗೆ ಅರ್ಹರಲ್ಲ," ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಚಾಲಕನನ್ನು ಸೇವೆಯಿಂದ ವಜಾಗೊಳಿಸಿ ಲಖನೌನ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಪ್ರಾದೇಶಿಕ ಪೀಠ ಫೆಬ್ರವರಿ 2015ರಲ್ಲಿ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿಯಿತು.
ಸೂಕ್ತ ಕಾರಣವಿಲ್ಲದೆ ಗೈರು ಹಾಜರಾಗಿದ್ದ ಚಾಲಕನನ್ನು ವಿಚಾರಣಾ ನ್ಯಾಯಾಲಯ ಸೇವೆಯಿಂದ ವಜಾಗೊಳಿಸಿತ್ತು. ಈ ಸಂಬಂಧ ಅದು ನೀಡಿದ್ದ ಎರಡು ಆದೇಶಗಳಲ್ಲಿ ಮಧ್ಯಪ್ರವೇಶಿಸಲು ನ್ಯಾಯಮಂಡಳಿ ಕೂಡ ನಿರಾಕರಿಸಿತ್ತು. ಸೇನಾ ಕಾಯಿದೆಯ ಸೆಕ್ಷನ್ 39ಬಿ ಅಡಿಯಲ್ಲಿ ಮಾಜಿ ಸೈನಿಕನ ಮೇಲೆ ಆರೋಪ ಹೊರಿಸಲಾಗಿತ್ತು.