Armed Forces Tribunal
Armed Forces Tribunal

ಶಾಂತಿ ಸ್ಥಳದ ನಿಯೋಜನೆ ವೇಳೆ ಮನೋವೈಕಲ್ಯ ಉಂಟಾಗಿದ್ದಕ್ಕೆ ಸೇನಾ ಸೇವೆ ಕಾರಣವಲ್ಲ ಎನ್ನುವುದು ಅಸಂಬದ್ಧ: ಎಎಫ್‌ಟಿ

ಮನೋವೈಕಲ್ಯದ ಮೂಲ ಯಾವುದು ಎನ್ನುವುದು ಮನೋವೈಕಲ್ಯ ಪಿಂಚಣಿಯ ಅರ್ಹತೆಯನ್ನು ನಿರ್ಧರಿಸುವುದರ ಮೇಲೆ ಪರಿಣಾಮ ಬೀರದು ಎಂದಿದೆ ಸಶಸ್ತ್ರ ಸೇನಾ ನ್ಯಾಯಮಂಡಳಿ.

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಚಂಡೀಗಢ ಪ್ರಾದೇಶಿಕ ಪೀಠ ಸೇನಾಧಿಕಾರಿಯೊಬ್ಬರಿಗೆ ಈ ವರ್ಷದ ಆರಂಭದಲ್ಲಿ ಮನೋವೈಕಲ್ಯ ಪಿಂಚಣಿ ಒದಗಿಸಿದೆ. ಇದೇ ವೇಳೆ ಮನೋವೈಕಲ್ಯಕ್ಕೆ ಸಂಬಂಧಿಸಿದಂತೆ ನೀಡಲಾದ ವೈದ್ಯಕೀಯ ಮಂಡಳಿಯ ವರದಿ ಕಾನೂನುಬದ್ಧವಾಗಿ ಮತ್ತು ವಾಸ್ತವಿಕವಾಗಿ ಸಮರ್ಥನೀಯವಲ್ಲ ಎಂದು ತಿಳಿಸಿ ಅದನ್ನು ನ್ಯಾಯಮಂಡಳಿ ರದ್ದುಗೊಳಿಸಿದೆ (ನವನೀತ್ ಸಿಂಗ್ ಸಿಂಧು  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಶಾಂತಿ ಸ್ಥಳದಲ್ಲಿ (ಯುದ್ಧಗ್ರಸ್ತ ಅಥವಾ ಉದ್ವಿಗ್ನತೆರಹಿತ ಪ್ರದೇಶ) ನಿಯೋಜಿಸಲಾಗಿದ್ದ ವೇಳೆ ಸೇನಾಧಿಕಾರಿಗೆ ಮನೋವೈಕಲ್ಯ ಸಂಭವಿಸಿದ್ದರಿಂದ ಅದಕ್ಕೆ ಸೇನಾ ಸೇವೆಯತ್ತ ಬೆರಳು ಮಾಡಲಾಗದು ಎಂದು ತೀರ್ಮಾನಿಸುವುದು ಅಸಂಬದ್ಧವಾಗುತ್ತದೆ ಎಂಬುದಾಗಿ ಎಎಫ್‌ಟಿ ಅಸಮಾಧಾನ ವ್ಯಕ್ತಪಡಿಸಿದೆ.  

1988ರಲ್ಲಿ ಸೇವೆಯಿಂದ ಬಿಡುಗಡೆಯಾದ ಅಧಿಕಾರಿಯನ್ನು ನಿಯೋಜಿಸಿದ್ದ ವೇಳೆ ಅವರಿಗೆ ಕಾಯಿಲೆ ಅಥವಾ ಅಂಗವೈಕಲ್ಯ ಇರಲಿಲ್ಲ ಎಂಬ ಅಂಶವನ್ನು ನಿರ್ಲಕ್ಷಿಸಿರುವುದಕ್ಕಾಗಿ ಎಎಫ್‌ಟಿಯ ನ್ಯಾಯಾಂಗ ಸದಸ್ಯ ನ್ಯಾ. ಧರಂ ಚಂದ್ ಚೌಧರಿ ಮತ್ತು ಆಡಳಿತ ಸದಸ್ಯ ಲೆಫ್ಟಿನೆಂಟ್ ಜನರಲ್ ರಣಬೀರ್‌  ಸಿಂಗ್ ಅವರು ವೈದ್ಯಕೀಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

Also Read
ಅಗ್ನಿಪಥ್ ಯೋಜನೆ: ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಮುಂದೆ ಪ್ರಶ್ನಿಸಲು ಕೇರಳ ಹೈಕೋರ್ಟ್ ಸೂಚನೆ

ಲ್ಯಾಬಿಲ್‌ ಹೈಪರ್‌ಟೆನ್ಷನ್‌ ಎಂಬ ಮಾನಸಿಕ ಸಮಸ್ಯೆಯಿಂದ ಅಧಿಕಾರಿ ಬಳಲುತ್ತಿದ್ದ ಸಂದರ್ಭದಲ್ಲಿ ಅವರು ಶಾಂತಿಸ್ಥಳದಲ್ಲಿ ನಿಯೋಜನೆಯಲ್ಲಿದ್ದರು ಎಂಬ ಅಂಶದ ಮೇಲೆ ವೈದ್ಯಕೀಯ ಮಂಡಳಿ ಬಲವಾಗಿ ಅವಲಂಬಿತವಾಗಿರುವುದನ್ನು ಪೀಠ ಗಮನಿಸಿತು.

ರೋಗಕ್ಕೂ ಮಿಲಿಟೆರಿ ಸೇವೆಗೂ ಸಂಬಂಧವಿಲ್ಲ ಎಂಬುದನ್ನು ತರ್ಕಬದ್ಧವಾಗಿ ಮತ್ತು ನಂಬಲರ್ಹವಾಗಿ ದಾಖಲಿಸಲು ಮಂಡಲಿ ವಿಫಲವಾಗಿದೆ. ಸೇನಾ ಸೇವೆಯೊಂದಿಗೆ ಸಂಪರ್ಕ ಹೊಂದಿಲ್ಲದ ಕಾರಣ ಅವರ ಮನೋವೈಕಲ್ಯಕ್ಕೆ ಮಿಲಿಟರಿ ಸೇವೆ ಕಾರಣವಲ್ಲ ಎಂಬುದು ಅಸಂಬದ್ಧ ಮತ್ತು ನಿಗೂಢವಾದುದಾಗಿದೆ. ಇದು ದಾಖಲೆಗಳು, ನಿಯಮಾವಳಿಗಳು ಹಾಗೂ ನ್ಯಾಯಿಕ ವ್ಯಾಖ್ಯಾನಕ್ಕೂ ವಿರುದ್ಧವಾಗಿರುವುದರಿಂದ ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ ಎಂದು ಮಾರ್ಚ್‌ 6ರಂದು ಹೊರಡಿಸಿದ ಆದೇಶದಲ್ಲಿ ಎಎಫ್‌ಟಿ ತಿಳಿಸಿತು.

ಮನೋವೈಕಲ್ಯದ ಮೂಲ ಯಾವುದು ಎನ್ನುವುದು ಮನೋವೈಕಲ್ಯ ಪಿಂಚಣಿಯ ಅರ್ಹತೆಯನ್ನು ನಿರ್ಧರಿಸುವುದರ ಮೇಲೆ ಪರಿಣಾಮ ಬೀರದು ಎಂದು ಕೂಡ ತಿಳಿಸಿದ ಅದು ಸೇನಾಧಿಕಾರಿ ಪರವಾಗಿ ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com