D K Shivakumar, CBI and Karnataka HC
D K Shivakumar, CBI and Karnataka HC 
ಸುದ್ದಿಗಳು

[ಅಕ್ರಮ ಆಸ್ತಿ ಗಳಿಕೆ] ತನಿಖೆ ನೆಪದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಅಲೆಯುವಂತೆ ಮಾಡಲಾಗಿದೆ: ಡಿಕೆಶಿ ಪರ ಚೌಟ ವಾದ

Siddesh M S

“ತನಿಖೆಯ ನೆಪವೊಡ್ಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ತನಿಖಾ ಸಂಸ್ಥೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುವಂತೆ ಮಾಡಿವೆ. ಈ ಎಲ್ಲಾ ಪ್ರಕ್ರಿಯೆಗಳ ಹಿಂದೆ ರಾಜಕೀಯ ದುರುದ್ದೇಶವಿದೆ” ಎಂದು ಡಿ ಕೆ ಶಿವಕುಮಾರ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಮುಂದೆ ಬಲವಾಗಿ ವಾದಿಸಿದರು.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್‌ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಶಿವಕುಮಾರ್‌ ಪರ ವಕೀಲರಾದ ಚೌಟ ಅವರು “ತನಿಖಾ ಸಂಸ್ಥೆಗಳಿಗೆ ಶಿವಕುಮಾರ್‌ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಒಂದು ವರ್ಷದ ಹಿಂದೆಯೇ ಎಲ್ಲಾ ಮಾಹಿತಿ ಒದಗಿಸಲಾಗಿದೆ. ಶಿವಕುಮಾರ್‌ ಒದಗಿಸಿರುವ ವಿವರಣೆ ತನಿಖಾ ಸಂಸ್ಥೆಗಳಿಗೆ ತೃಪ್ತಿದಾಯಕವಲ್ಲದಿದ್ದರೆ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಇ) ಅಡಿ ಮುಂದುವರಿಯಬಹುದಿತ್ತು. ಒಂದು ವರ್ಷದ ಹಿಂದೆ ಶಿವಕುಮಾರ್‌ ನೀಡಿರುವ ವಿವರಣೆಯ ಬಗ್ಗೆ ತನಿಖಾ ಸಂಸ್ಥೆಗಳು ಏನನ್ನೂ ಮಾಡಿಲ್ಲ. ಆ ಮೂಲಕ ತನಿಖೆಯನ್ನು ಬಾಕಿ ಉಳಿಸಲಾಗಿದೆ. ಈಗ ಮತ್ತೊಂದು ಪ್ರಕರಣ ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಒದಗಿಸಲಾಗಿದೆ. ಹೀಗಾಗಿ, ಈ ಘನ ನ್ಯಾಯಾಲಯದ ಮೆಟ್ಟಿಲೇರುವುದನ್ನು ಬಿಟ್ಟು ಅವರಿಗೆ ದಾರಿ ಇಲ್ಲ” ಎಂದು ವಿವರಿಸಿದರು.

“2017ರಿಂದ ಈಚೆಗೆ ತನಿಖಾ ಸಂಸ್ಥೆಗಳು ಶಿವಕುಮಾರ್‌ ಅವರನ್ನು ಹಲವು ರೀತಿಯ ತನಿಖೆಯಲ್ಲಿ ಸಿಲುಕಿಸಿವೆ. ಪ್ರತಿ ಬಾರಿ ತನಿಖಾ ಸಂಸ್ಥೆಗಳು ಏನನ್ನಾದರೂ ಮಾಡಲು ಮುಂದಾದರೆ ಅವರನ್ನು ರಕ್ಷಿಸಿಕೊಳ್ಳಲು ಅವರು ಮುಂದಾಗುವ ಸ್ಥಿತಿ ನಿರ್ಮಿಸಲಾಗಿದೆ” ಎಂದರು.

“ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಿ, ಪ್ರಾಥಮಿಕ ತನಿಖೆ ನಡೆಸಿ, ಸಿಬಿಐಯು ಕುಟುಂಬ ಸದಸ್ಯರೆಲ್ಲರ ಆದಾಯ ಸೇರಿಸಿ, ಶಿವಕುಮಾರ್‌ ಅವರು ಆದಾಯ ಮೀರಿ ಶೇ. 44ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಹೇಳುತ್ತಿದೆ. ಇದು ಕಾಯಿದೆಗೆ ವಿರುದ್ಧವಾಗಿದೆ. ಇದು ಸಂಜ್ಞೇಯ ಅಪರಾಧವಲ್ಲ. ಹೀಗಾಗಿ, ಇಡೀ ಪ್ರಕ್ರಿಯೆ ದೋಷಪೂರಿತವಾಗಿದೆ” ಎಂದರು.

“ದೂರಿನಲ್ಲಿ ಯಾವುದೇ ತೆರನಾದ ಸಂಜ್ಞೇಯ ಅಪರಾಧ ಕಾಣುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಇ) ಅಡಿ ಅಪರಾಧ ಕಾಣಲು ಯಾವುದೇ ದಾಖಲೆಗಳು ಇಲ್ಲ. ಏಕೆಂದರೆ ತನಿಖಾ ಸಂಸ್ಥೆಗಳು ಡಿ ಕೆ ಶಿವಕುಮಾರ್‌ ಆದಾಯ, ಆಸ್ತಿ ಮತ್ತು ಖರ್ಚುಗಳನ್ನು ಮಾತ್ರ ತೆಗೆದುಕೊಂಡಿಲ್ಲ. ಬದಲಿಗೆ ಅವರ ಕುಟುಂಬ ಸದಸ್ಯರ ಆದಾಯ, ಆಸ್ತಿ ಮತ್ತು ಖರ್ಚುಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸೆಕ್ಷನ್‌ 13 ವ್ಯಕ್ತಿಗತ ಅಪರಾಧವಾಗಿದ್ದು, ಈ ವಿಚಾರದಲ್ಲಿ ಕುಟುಂಬ ಸದಸ್ಯರ ಆದಾಯ, ಆಸ್ತಿ ಮತ್ತು ವೆಚ್ಚವನ್ನು ತೋರಿಸಲಾಗದು. ಹೀಗಾಗಿ, ದೂರಿನ ಮೂಲವೇ ದೋಷಪೂರಿತವಾಗಿದೆ” ಎಂದರು.

“ಇಡೀ ಪ್ರಕ್ರಿಯೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುದನ್ನು ತನಿಖಾ ಪ್ರಕ್ರಿಯೆ ಸೂಚನೆ ನೀಡುತ್ತದೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಆನಂತರ ಸಿಬಿಐ, ಮತ್ತೆ ಎರಡು ವರ್ಷಗಳ ಬಳಿಕ ಮತ್ತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಈ ಮೂಲಕ ಡಿ ಕೆ ಶಿವಕುಮಾರ್‌ ಅವರು ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸದಂತೆ ಮಾಡುವ ಉದ್ದೇಶ ಹೊಂದಲಾಗಿದೆ” ಎಂದರು.

ಸುದೀರ್ಘವಾದ ಆಲಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್‌ 2ಕ್ಕೆ ಮುಂದೂಡಿದೆ.