ಸುದ್ದಿಗಳು

ಸಿಬಿಐ ತನಿಖೆ ರದ್ದತಿ ಪ್ರಶ್ನಿಸಿದ್ದ ಡಿಸಿಎಂ ಡಿಕೆಶಿ ಅರ್ಜಿ ವಜಾ; ಆರೋಪ ಪಟ್ಟಿ ಸಲ್ಲಿಕೆಗೆ ಸಿಬಿಐಗೆ 3 ತಿಂಗಳ ಗಡುವು

ಸುದೀರ್ಘ ವಾದ-ಪ್ರತಿವಾದ ಆಲಿಸಿ 2023ರ ಜುಲೈ 31ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

Siddesh M S

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದ್ದು, ಸಿಬಿಐ ಮೂರು ತಿಂಗಳ ಒಳಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಅಥವಾ ಅಂತಿಮ ವರದಿ ಸಲ್ಲಿಸಬೇಕು ಎಂದು ಗಡುವು ವಿಧಿಸಿದೆ.

ಸುದೀರ್ಘ ವಾದ-ಪ್ರತಿವಾದ ಆಲಿಸಿ 2023ರ ಜುಲೈ 31ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

“ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಶಿವಕುಮಾರ್‌ ಅವರು ತಡವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಹುತೇಕ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದ್ದು, ಡಿ ಕೆ ಶಿವಕುಮಾರ್‌ ಅವರು ತಮ್ಮ ವಿವರಣೆ ಹಾಗೂ ಹಲವು ದಾಖಲೆಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಇದನ್ನು ತನಿಖಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳದೇ ದಾಖಲೆ ಮತ್ತು ಸಾಕ್ಷಿಗಳನ್ನು ನ್ಯಾಯಾಲಯ ಪರಿಶೀಲಿಸಲಾಗದು. ಅಂತಿಮ ವರದಿ ಸಲ್ಲಿಸುವುದಕ್ಕೂ ಮುನ್ನ ಅದನ್ನು ಪರಿಶೀಲಿಸುವುದು ಮಿನಿ ವಿಚಾರಣೆಗೆ ಸಮನಾಗುತ್ತದೆ” ಎಂದು ಆದೇಶದಲ್ಲಿ ಹೇಳಿದೆ.

ಮುಂದುವರಿದು, “ಸಿಬಿಐ ತನಿಖೆ ಮಾಡುವುದು ತಡವಾಗುತ್ತಿದೆ ಎಂದಾದರೆ ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಬಹುದು. ಎಲ್ಲ ದಾಖಲೆಗಳನ್ನು ಪರಿಗಣಿಸಿ ತನಿಖಾಧಿಕಾರಿಯು ʼಬಿʼ ವರದಿ ಅಥವಾ ಆರೋಪ ಪಟ್ಟಿಯನ್ನು ಸಲ್ಲಿಸಬಹುದಾಗಿದೆ. ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅದರಿಂದ ಆರೋಪಮುಕ್ತಗೊಳ್ಳಲು ಅಥವಾ ಆರೋಪ ಪಟ್ಟಿಯನ್ನು ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಡಿ ಕೆ ಶಿವಕುಮಾರ್‌ ಅವರಿಗೆ ಇರಲಿದೆ. ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್‌ ಅವರ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಆದೇಶ ಪ್ರಕಟವಾದ ಮೂರು ತಿಂಗಳ ಒಳಗೆ ಸಿಬಿಐ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಿಬಿಐ ತನಿಖೆಗೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿ ವಿಚಾರಣೆಯ ವೇಳೆ ಡಿ ಕೆ ಶಿವಕುಮಾರ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಅರ್ಜಿದಾರರ ವಿರುದ್ಧ ಮಾತ್ರವಲ್ಲವೇ ಅವರ ಕುಟುಂಬದ ಸದಸ್ಯರ ಮೇಲೂ ಆರೋಪ ಹೊರಿಸಲಾಗಿದೆ. ಕುಟುಂಬದ ಸದಸ್ಯರು ಗಳಿಸಿರುವ ಆದಾಯವನ್ನೂ ಶಿವಕುಮಾರ್ ಅವರ ವೈಯಕ್ತಿಕ ಆದಾಯ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ. ಆ ಮೂಲಕ ಅರ್ಜಿದಾರರು ನಿಗದಿಗಿಂತ ಹೆಚ್ಚಿನ ಆದಾಯ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಕುಟುಂಬ ಸದಸ್ಯರ ಆದಾಯ ಪರಿಗಣಿಸಲು ಆಗುವುದಿಲ್ಲ. ಹೀಗಾಗಿ, ಸಿಬಿಐ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ" ಎಂದು ಸಂಶಯ ವ್ಯಕ್ತಪಡಿಸಿದ್ದರು.

ಅಲ್ಲದೇ, “ರಾಜಕೀಯ ಎದುರಾಳಿಯನ್ನು ಹಲವು ರೀತಿಯ ದಾವೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವೇ ಅಗಿದೆ. ಹೀಗಾಗಿ, ಇಲ್ಲಿ ಯಾರನ್ನೂ ಪ್ರತಿವಾದಿ ಮಾಡುವ ಅಗತ್ಯವಿಲ್ಲ. ಡಿ ಕೆ ಶಿವಕುಮಾರ್‌ ಅವರ ಬಳಿ ಅಕ್ರಮ ಹಣ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ವಿಚಾರಣೆ, ಈಗ ಸಿಬಿಐ ತನಿಖೆ ನಡೆಸಲಾಗುತ್ತಿದೆ. ಈ ಅರ್ಥದಲ್ಲಿ ನಾವು ಇದನ್ನು ರಾಜಕೀಯ ದುರುದ್ದೇಶ ಎಂದು ಹೇಳಿದ್ದೇವೆ” ಎಂದು ಆರೋಪಿಸಿದ್ದರು.

ಸಿಬಿಐ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು “ತನಿಖಾ ಸಂಸ್ಥೆಯು ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಿದೆ. 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ವಿಳಂಬವಾಗಿಲ್ಲ. 2020ರ ಅಕ್ಟೋಬರ್‌ 3ಕ್ಕೆ ಎಫ್‌ಐಆರ್‌ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಡಿ ಕೆ ಶಿವಕುಮಾರ್‌ ಅವರು ಎಫ್‌ಐಆರ್‌ ವಜಾ ಕೋರಿ 2022ರ ಜುಲೈ 28ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ” ಎಂದು ವಾದಿಸಿದ್ದರು.

“ಪೊಲೀಸ್‌ ವರಿಷ್ಠಾಧಿಕಾರಿಯು ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಅದೇ ರೀತಿ ಸಿಬಿಐ ಪೊಲೀಸ್‌ ವರಿಷ್ಠಾಧಿಕಾರಿಯು ಡಿವೈಎಸ್‌ಪಿ ಅವರಿಗೆ ತನಿಖೆ ನಡೆಸಲು ಅನುಮತಿಸಿದ್ದಾರೆ. ಆದ್ದರಿಂದ, ಇಲ್ಲಿ ಯಾವುದೇ ಅಕ್ರಮವಾಗಿಲ್ಲ” ಎಂದು ಸಮರ್ಥಿಸಿದ್ದರು.