ರಾಜಕೀಯ ಎದುರಾಳಿಯನ್ನು ಹಲವು ರೀತಿಯ ದಾವೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವಾಗಿದೆ: ಡಿಕೆಶಿ ವಕೀಲರ ಸಮರ್ಥನೆ

“ಕೇಸ್‌ ಡೈರಿ ಸಮನ್‌ ಮಾಡುವ ವಿಚಾರ ನ್ಯಾಯಾಲಯಕ್ಕೆ ಬಿಟ್ಟಿರುವುದಾಗಿದೆ. ನನಗೆ ಅನುಮಾನ ಬಂದರೆ ಸಮನ್‌ ಮಾಡಿ ಸಿಬಿಐ ಸರಿಯಾದ ದಾರಿಯಲ್ಲಿ ಹೋಗುತ್ತಿದೆಯೋ, ಇಲ್ಲವೋ ಎಂದು ಪರಿಶೀಲಿಸುತ್ತೇನೆ” ಎಂದ ನ್ಯಾ. ನಟರಾಜನ್‌.
D K Shivakumar and Karnataka HC
D K Shivakumar and Karnataka HC
Published on

“ರಾಜಕೀಯ ಎದುರಾಳಿಯನ್ನು ಹಲವು ರೀತಿಯ ದಾವೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವಾಗಿದೆ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಬಲವಾಗಿ ಸಮರ್ಥಿಸಿದರು.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದೂ ಮುಂದುವರಿಸಿತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಡಿ ಕೆ ಶಿವಕುಮಾರ್‌ ಅವರು ತಮ್ಮ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳುವುದಕ್ಕೆ ಬದಲಾಗಿ ಯಾರು ಅದನ್ನು ಮಾಡುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿ, ಅವರನ್ನು ತಮ್ಮ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಬೇಕಿತ್ತು ಎಂದು ಹಿಂದಿನ ವಿಚಾರಣೆಯ ವೇಳೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಕೀಲರು ವಾದಿಸಿದ್ದರು. ಇದಕ್ಕೆ ಇಂದು ಡಿಕೆಶಿ ಪರ ವಕೀಲರು ತಿರುಗೇಟು ನೀಡುವ ಪ್ರಯತ್ನ ಮಾಡಿದರು.

Also Read
ತಲೆಮರೆಸಿಕೊಳ್ಳುವ ಸಾಧ್ಯತೆ ಇರದಿದ್ದಾಗ ವಿದೇಶ ಪ್ರವಾಸ ಆರೋಪಿಯ ಹಕ್ಕು: ಅಭಿಷೇಕ್ ಬ್ಯಾನರ್ಜಿ ಪ್ರಕರಣದಲ್ಲಿ ಸುಪ್ರೀಂ

ಸಿಬಿಐ ವಾದಕ್ಕೆ ಪ್ರತ್ಯುತ್ತರ ಮುಂದುವರಿಸಿದ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ರಾಜಕೀಯ ಎದುರಾಳಿಯನ್ನು ಹಲವು ರೀತಿಯ ದಾವೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವೇ ಅಗಿದೆ. ಹೀಗಾಗಿ, ಇಲ್ಲಿ ಯಾರನ್ನೂ ಪ್ರತಿವಾದಿ ಮಾಡುವ ಅಗತ್ಯವಿಲ್ಲ. ನನ್ನ (ಡಿ ಕೆ ಶಿವಕುಮಾರ್‌) ಬಳಿ ಅಕ್ರಮ ಹಣ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ವಿಚಾರಣೆ, ಈಗ ಸಿಬಿಐ ತನಿಖೆ ನಡೆಸಲಾಗುತ್ತಿದೆ. ಈ ಅರ್ಥದಲ್ಲಿ ನಾವು ರಾಜಕೀಯ ದುರುದ್ದೇಶ ಎಂದು ಹೇಳಿದ್ದೇವೆ” ಎಂದು ಸಮರ್ಥನೆ ನೀಡಿದರು.

ಸಿಬಿಐ ಎಲ್ಲಾ ವಾದಗಳನ್ನು ಸಾರಸಗಟಾಗಿ ತಿರಸ್ಕರಿಸಿದ ಚೌಟ ಅವರು “ಪ್ರಾಥಮಿಕ ತನಿಖೆಯನ್ನು ಸಾಮಾನ್ಯವಾಗಿ ಮೂರು ತಿಂಗಳಲ್ಲಿ ನಡೆಸಲಾಗುತ್ತದೆ. ಆದರೆ, ನನ್ನ ಪ್ರಕರಣದಲ್ಲಿ ಏಳು ತಿಂಗಳು ನಡೆಸಲಾಗಿದೆ. ಸಿಬಿಐ ಕೈಪಿಡಿಯನ್ನು ಪಾಲಿಸಲಾಗಿಲ್ಲ. ಇಷ್ಟು ಸುದೀರ್ಘ ಅವಧಿ ಏತಕ್ಕಾಗಿ ಎಂಬುದು ಗೊತ್ತಾಗಬೇಕಿದೆ” ಎಂದು ಆಕ್ಷೇಪಿಸಿದರು.

ಮುಂದುವರಿದು, “ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಮಾಹಿತಿ ಉಲ್ಲೇಖಿಸಿಲ್ಲ. ಇದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ನಾನು ಚುನಾವಣಾ ಆಯೋಗಕ್ಕೆ 2013ರಲ್ಲಿ ಸಲ್ಲಿಸಿರುವ ಅಫಿಡವಿಟ್‌ ಬೆನ್ನು ಬಿದ್ದಿದ್ದಾರೆ. ಆದರೆ, ಯಾವುದೇ ರೀತಿಯಲ್ಲಿಯೂ ನಾನು ಅಕ್ರಮ ಆಸ್ತಿ ಸಂಪಾದಿಸಿದ್ದೇನೆ ಎಂದು ತೋರಿಸಲು ಅವರಿಗೆ ಸಾಧ್ಯವಾಗಿಲ್ಲ” ಎಂದು ಅಂಕಿ-ಸಂಖ್ಯೆ ಉಲ್ಲೇಖಿಸಿದರು.

ನ್ಯಾಯಾಲಯ ಕಿಡಿ: ಡಿಕೆಶಿ ಪರ ವಕೀಲರ ವಾದ ಆಲಿಸುವ ವೇಳೆ ಒಂದು ಹಂತದಲ್ಲಿ ನ್ಯಾ. ನಟರಾಜನ್‌ ಅವರು “ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ ಡೈರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿಬಿಐಗೆ ಆದೇಶಿಸುವುದು ಅಗತ್ಯವೇ? ಅದು ಅಗತ್ಯವಾದರೆ ಅದನ್ನು ತರಿಸಿಕೊಂಡು, ಪರಿಶೀಲಿಸಲಾಗುವುದು. ಕೇಸ್‌ ಡೈರಿ ಸಮನ್‌ ಮಾಡಿ ಎಂಬ ಅಂಶವನ್ನು ಒತ್ತಿ ಹೇಳಬೇಡಿ. ನಿಮ್ಮ ಆಕ್ಷೇಪಣೆಯನ್ನು ದಾಖಲಿಸಲಾಗಿದೆ. ಅದಕ್ಕೆ ಸಿಬಿಐ ಉತ್ತರಿಸಲಿ ಬಿಡಿ. ತಕ್ಷಣ ಕೇಸ್‌ ಡೈರಿ ಸಮನ್‌ ಮಾಡುವಂತೆ ನ್ಯಾಯಾಲಯವನ್ನು ನೀವು ಕೇಳಲಾಗದು. ಇದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ನಮಗೆ ಅನುಮಾನ ಬಂದರೆ ಸಮನ್‌ ಮಾಡಿ ಸಿಬಿಐ ಸರಿಯಾದ ದಾರಿಯಲ್ಲಿ ಹೋಗುತ್ತಿದೆಯೋ, ಇಲ್ಲವೋ ಎಂದು ಪರಿಶೀಲಿಸಲಾಗುವುದು. ಹೊಸ ಹೊಸ ಆಧಾರಗಳನ್ನು ವಾದದಲ್ಲಿ ಸೇರಿಸಬೇಡಿ” ಎಂದು ಹೇಳಿದರು.

Also Read
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತನಿಖಾ ವಿಧಾನವೇ ಪ್ರಶ್ನಾರ್ಹ ಎಂದ ಡಿಸಿಎಂ ಶಿವಕುಮಾರ್‌ ಪರ ವಕೀಲರು

ಪೀಠದ ಆಕ್ರೋಶಭರಿತ ಪ್ರಶ್ನೆಗೆ ಚೌಟ ಅವರು “ಕೇಸ್‌ ಡೈರಿ ಪರಿಶೀಲನೆ ವಿಚಾರವನ್ನು ನ್ಯಾಯಾಲಯದ ಸಂತೃಪ್ತಿಗೆ ಬಿಡುತ್ತೇನೆ” ಎಂದಷ್ಟೇ ಹೇಳಿದರು.

ಮತ್ತೊಂದು ಹಂತದಲ್ಲಿ ಪೀಠವು “ನಿಮ್ಮದು ಸಿಬಿಐ ತನಿಖೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದರೆ, ನೀವು ಎಫ್‌ಐಆರ್‌ ಮೇಲೆಯೇ ದಾಳಿ ನಡೆಸುತ್ತಿದ್ದೀರಿ” ಎಂದು ಪೀಠವು ಲಘು ದಾಟಿಯಲ್ಲಿ ಹೇಳಿತು. ಇದಕ್ಕೆ ಚೌಟ ಅವರು “ಎಫ್‌ಐಆರ್‌ ಮತ್ತು ತನಿಖೆ ಎರಡರ ಮೇಲೂ ವಾದ ಕೇಂದ್ರೀಕರಿಸಿದ್ದೇವೆ …” ಎಂದು ಪ್ರತಿಕ್ರಿಯಿಸಿದರು.

ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.

Kannada Bar & Bench
kannada.barandbench.com