Karnataka High Court 
ಸುದ್ದಿಗಳು

ಕಾನೂನು ಸೇವಾ ಚಟುವಟಿಕೆಗೆ ಅಡ್ಡಿ: ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಲು ಮಂಡ್ಯ ವಕೀಲರ ಸಂಘಕ್ಕೆ ಹೈಕೋರ್ಟ್‌ ನಿರ್ದೇಶನ

ಮುಂದಿನ ವಿಚಾರಣೆಗೂ ಮುನ್ನ ಇತರೆ ಪ್ರತಿವಾದಿಗಳಿಗೆ ಹೆಚ್ಚುವರಿ ಅಫಿಡವಿಟ್‌ ಅನ್ನು ನೀಡಬೇಕು ಎಂಬುದನ್ನು ಮಂಡ್ಯ ವಕೀಲರ ಸಂಘಕ್ಕೆ ಬಿಡಿಸಿ ಹೇಳಬೇಕಿಲ್ಲ ಎಂದೂ ಆದೇಶದಲ್ಲಿ ದಾಖಲಿಸಿರುವ ನ್ಯಾಯಾಲಯ.

Bar & Bench

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಒಂದೊಮ್ಮೆ ಭಾಗವಹಿಸಿದರೆ ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮಂಡ್ಯ ವಕೀಲರ ಸಂಘವು ಕೈಗೊಂಡಿದ್ದ ನಿರ್ಣಯದ ಸಂಬಂಧ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಯಾವುದೇ ತೆರನಾದ ಪಶ್ಚಾತ್ತಾಪ ಕಾಣುತ್ತಿಲ್ಲ. ಈ ಸಂಬಂಧ ಹೆಚ್ಚುವರಿಯಾಗಿ ವಿಸ್ತೃತವಾದ ಅಫಿಡವಿಟ್‌ ಸಲ್ಲಿಸಬೇಕು ಎಂದು ಮಂಡ್ಯ ವಕೀಲರ ಸಂಘಕ್ಕೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿದೆ.

ಮಂಡ್ಯ ವಕೀಲರ ಸಂಘದ ನಿರ್ಣಯ ಆಕ್ಷೇಪಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಭಾರತೀಯ ವಕೀಲರ ಪರಿಷತ್‌ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪರಿಗಣಿಸಿ ಹೆಚ್ಚುವರಿಯಾಗಿ ವಿಸ್ತೃತವಾದ ಅಫಿಡವಿಟ್‌ ಸಲ್ಲಿಸಲು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಒಂದೊಮ್ಮೆ ಭಾಗವಹಿಸಿದರೆ ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೈಗೊಂಡಿದ್ದ ನಿರ್ಣಯದ ಕುರಿತು ಆಲೋಚಿಸಲಾಗಿದೆ ಎಂಬುದಕ್ಕೆ ಪೂರಕವಾಗಿ ಕೈಗೊಂಡಿರುವ ಹೊಸ ನಿರ್ಣಯದ ಪ್ರತಿ ಸಲ್ಲಿಸಲು ಮಂಡ್ಯ ವಕೀಲರ ಸಂಘದ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ಅಫಿಡವಿಟ್‌ ಮತ್ತು ಹೊಸ ನಿರ್ಣಯದ ಪ್ರತಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಮುಂದಿನ ವಿಚಾರಣೆಗೂ ಮುನ್ನ ಇತರೆ ಪ್ರತಿವಾದಿಗಳಿಗೆ ಹೆಚ್ಚುವರಿ ಅಫಿಡವಿಟ್‌ ಅನ್ನು ನೀಡಬೇಕು ಎಂಬುದನ್ನು ಮಂಡ್ಯ ವಕೀಲರ ಸಂಘಕ್ಕೆ ಬಿಡಿಸಿ ಹೇಳಬೇಕಿಲ್ಲ ಎಂದೂ ಆದೇಶದಲ್ಲಿ ದಾಖಲಿಸಲಾಗಿದೆ. ಎರಡು ವಾರಗಳ ಕಾಲ ವಿಚಾರಣೆ ಮುಂದೂಡಲಾಗಿದೆ.

ಇದಕ್ಕೂ ಮುನ್ನ ಪೀಠವು ಮಂಡ್ಯ ವಕೀಲರ ಸಂಘವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾನು ಕೈಗೊಂಡಿರುವ ನಿರ್ಧಾರಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಯಾವುದೇ ಅಂಶ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ಹಾಗೂ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಎಂಡಿಎಲ್‌ಎಸ್‌ಎ) ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿರ್ಣಯ ಕೈಗೊಂಡು ವಕೀಲರ ಸಂಘದ ಸದಸ್ಯರನ್ನು ಮಂಡ್ಯ ವಕೀಲರ ಸಂಘವು ನಿರ್ಬಂಧಿಸಿತ್ತು.

ರಾಜ್ಯದಾದ್ಯಂತ ನೋಂದಾವಣೆಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಾರ್ಗಸೂಚಿ ಜಾರಿ ಮಾಡಿದೆ. ನೋಂದಾಯಿತರಾದ ವಕೀಲರು ಶಾಸನಬದ್ಧವಾಗಿ ತಮ್ಮ ಕರ್ತವ್ಯ ನಿಭಾಯಿಸದಂತೆ, ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಮಂಡ್ಯ ಜಿಲ್ಲಾ ವಕೀಲರ ಸಂಘ ತಡೆದಿದೆ ಎಂದು ಕೆಎಸ್‌ಎಲ್‌ಎಸ್‌ಎ ಅರ್ಜಿಯಲ್ಲಿ ಹೇಳಲಾಗಿದೆ.

ವಕೀಲರ ನೋಂದಾವಣೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಂಡ್ಯ ಕಾನೂನು ಸೇವಾ ಪ್ರಾಧಿಕಾರದ (ಎಂಡಿಎಲ್‌ಎಸ್‌ಎ) ಪರವಾಗಿ ಕೆಲಸ ಮಾಡಿರುವ ವಕೀಲರನ್ನು ಮಂಡ್ಯ ವಕೀಲರ ಸಂಘ ಅಮಾನತು ಮಾಡಿದೆ. ಅಲ್ಲದೇ, ಲೋಕ ಅದಾಲತ್‌ ಮತ್ತು ಎಂಡಿಎಲ್‌ಎಸ್‌ಎ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದೆ. ಇದು ಸಂವಿಧಾನ, ಸುಪ್ರೀಂ ಕೋರ್ಟ್‌ ಆದೇಶ ಮತ್ತು ವಕೀಲರ ಕಾಯಿದೆ ಹಾಗೂ ಭಾರತೀಯ ವಕೀಲರ ಪರಿಷತ್‌ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

2022ರ ಆಗಸ್ಟ್‌ 13ರಂದು ವಕೀಲರ ಸಂಘದ ಸದಸ್ಯರು ಸೇರಿದಂತೆ ಎಂ ಟಿ ರಾಜೇಂದ್ರ, ಸಿದ್ದರಾಜು, ಎಂ ರೂಪಾ, ಎಚ್‌ ಎನ್‌ ಗಿರಿಜಾಂಬಿಕೆ, ರತಿ ಕುಮಾರಿ ಅವರು ಮಂಡ್ಯದ ನ್ಯಾಯಾಲಯದ ಕಟ್ಟಡದಲ್ಲಿ ಜನರು ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ಭೌತಿಕವಾಗಿ ತಡೆದಿದ್ದಾರೆ. ವಿಚಾರಣೆಯಲ್ಲಿ ಭಾಗವಹಿಸಲು ಬಂದಿದ್ದ ಕಾನೂನು ವಿದ್ಯಾರ್ಥಿಗಳನ್ನು ತಡೆದಿದ್ದಾರೆ ಎಂದು ವಿವರಿಸಲಾಗಿದೆ. 2022ರ ಆಗಸ್ಟ್‌ 20 ಮತು 21ರಂದು ನಡೆದ ತರಬೇತಿ ಮಧ್ಯಸ್ಥಿಕೆದಾರರಿಗೂ ತಡೆ ಒಡ್ಡಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಪ್ಯಾನಲ್‌ನಲ್ಲಿ ವಕೀಲರು/ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರ ವಿರುದ್ಧ ಹೊರಡಿಸಿರುವ ಎಲ್ಲಾ ಆದೇಶ/ಗೊತ್ತುವಳಿ ಮತ್ತಿತರ ಆದೇಶಗಳನ್ನು ಹಿಂಪಡೆಯಲು ಮಂಡ್ಯ ವಕೀಲರ ಸಂಘಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.