ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆ ಹಾಗೂ ಲೋಕ ಅದಾಲತ್‌ಗೆ ಅಡ್ಡಿ: ನಿರ್ಣಯ ಹಿಂಪಡೆದ ಮಂಡ್ಯ ವಕೀಲರ ಸಂಘ

ವಕೀಲರು ಮತ್ತು ವಕೀಲರ ಸಂಘಗಗಳಿಗೆ ಯಾವ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಬಹುದು ಎಂಬ ಬಗ್ಗೆ ಬಿಸಿಐ ಕಾರ್ಯದರ್ಶಿಯಿಂದ ವಿವರವಾದ ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದ ಬಿಸಿಐ ಪರ ವಕೀಲರು.
High Court of Karnataka
High Court of Karnataka

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಒಂದೊಮ್ಮೆ ಭಾಗವಹಿಸಿದರೆ ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೈಗೊಂಡಿದ್ದ ನಿರ್ಣಯವನ್ನು ಮಂಡ್ಯ ವಕೀಲರ ಸಂಘವು ವಾಪಸ್ ಪಡೆದಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.

ಮಂಡ್ಯ ವಕೀಲರ ಸಂಘದ ನಿರ್ಣಯ ಆಕ್ಷೇಪಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ರಾಜ್ಯ ವಕೀಲರ ಪರಿಷತ್ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಮಂಡ್ಯ ವಕೀಲರ ಸಂಘದ ಸದಸ್ಯರ ನಡುವಿನ ಕೆಲವೊಂದು ಸಮಸ್ಯೆಗಳು ಮತ್ತು ತಪ್ಪು ಗ್ರಹಿಕೆಯಿಂದಾಗಿ ನಿರ್ಣಯ ಅಂಗೀಕರಿಸಲಾಗಿದೆ. ಇದೊಂದು ದುರದೃಷ್ಟಕರ ವಿಚಾರ. ಆದರೆ, ಈ ನಿರ್ಣಯವನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಸ್ಥಳೀಯ ಕಾನೂನು ಸೇವಾ ಪ್ರಾಧಿಕಾರಗಳೊಂದಿಗೆ ರಾಜ್ಯ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನಗಳ ಅನ್ವಯ ಸ್ಥಳೀಯ ವಕೀಲರು ಸಹಾಯ ಮತ್ತು ಸಹಕಾರ ನೀಡಿದ್ದಾರೆ. ಇಬ್ಬರ ಜಂಟಿ ಪ್ರಯತ್ನದ ಮೂಲಕ ಲೋಕ್ ಅದಾಲತ್‌ನಂತಹ ಉದಾತ್ತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ ಎಂದು ಮೌಖಿಕವಾಗಿ ಹೇಳಿದರು.

ರಾಜ್ಯ ವಕೀಲರ ಪರಿಷತ್ತಿನ ಪರ ವಕೀಲರ ಮೌಖಿಕ ಹೇಳಿಕೆಯನ್ನು ಸ್ವಾಗತಿಸಿದ ಪೀಠವು ಈ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು. ಅದೇ ರೀತಿ ಸದಸ್ಯ ವಕೀಲರಿಗೆ ನೀಡಿರುವ ನೋಟಿಸ್ ಅನ್ವಯ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಅಥವಾ ನೋಟಿಸ್ ವಾಪಸ್ ಪಡೆದುಕೊಳ್ಳುವುದಾಗಿ ಹೇಳಿಕೆ ಸಲ್ಲಿಸುವಂತೆ ಮಂಡ್ಯ ವಕೀಲರ ಸಂಘಕ್ಕೆ ನಿರ್ದೇಶನ ನೀಡಿತು.

Also Read
ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆ, ಲೋಕ ಅದಾಲತ್‌ಗೆ ಮಂಡ್ಯ ವಕೀಲರ ಸಂಘ ಅಡ್ಡಿ; ಅಸಮಾಧಾನ ಹೊರಹಾಕಿದ ಹೈಕೋರ್ಟ್‌

ಇದೇ ವೇಳೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು ಅವರು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಗಳಿಗೆ ಬಿಸಿಐನ ಸಂಪೂರ್ಣ ಸಹಕಾರ ಮತ್ತು ಬೇಷರತ್ ಬೆಂಬಲ ಇದೆ. ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ವಕೀಲರನ್ನು ತಡೆಯುವುದು ವೃತ್ತಿ ನಡತೆಗೆ ವಿರುದ್ಧವಾದ ಕ್ರಮ. ಈ ನಿಟ್ಟಿನಲ್ಲಿ ವಕೀಲರು ಮತ್ತು ವಕೀಲರ ಸಂಘಗಳಿಗೆ ಯಾವ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಬಹುದು ಎಂಬ ಬಗ್ಗೆ ಬಿಸಿಐ ಕಾರ್ಯದರ್ಶಿಯಿಂದ ವಿವರವಾದ ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com