ನವದೆಹಲಿಯ ಕೇಂದ್ರೀಯ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಿಸೆಂಬರ್ 2019ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಮುಖಂಡರಾದ ಶಾರ್ಜೀಲ್ ಇಮಾಮ್, ಸಫೂರ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ ಎಂಟು ಮಂದಿಯನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಭಿಪ್ರಾಯ ಭೇದವನ್ನು ಪ್ರೋತ್ಸಾಹಿಸಬೇಕೆ ವಿನಾ ಹತ್ತಿಕ್ಕಬಾರದು ಎಂದು ಹೆಚ್ಚುವರಿ ಸೆಷನ್ಸ್ ಅರುಲ್ ವರ್ಮಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಆದರೆ ಅಭಿಪ್ರಾಯಭೇದ ಎಂಬುದು ಶಾಂತಿಯನ್ನು ಕಾಪಾಡುತ್ತಿರಬೇಕೆ ವಿನಾ ಹಿಂಸಾಚಾರಕ್ಕೆ ಇಳಿಯಬಾರದು ಎಂಬುದು ಎಚ್ಚರಿಕೆಯಾಗಿದೆ ಎಂದು ಕೂಡ ನ್ಯಾಯಾಲಯ ಶಾರ್ಜೀಲ್ ಇಮಾಮ್ ಮತ್ತಿತರರನ್ನು ಆರೋಪಮುಕ್ತಗೊಳಿಸುವ ವೇಳೆ ಹೇಳಿತು.
ದೆಹಲಿ ಪೊಲೀಸರು ʼಅಸಂಬದ್ಧ ಆರೋಪಪಟ್ಟಿʼ ಸಲ್ಲಿಸಿದ್ದಾರೆ ಎಂದು ಕಿಡಿಕಾರಿದ ನ್ಯಾಯಾಲಯ ನಿರಾಕರಿಸಲಾಗದ ಪುರಾವೆಗಳನ್ನು ನೀಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದಿತು.
"ಆರೋಪಪಟ್ಟಿ ಮತ್ತು ಮೂರು ಪೂರಕ ಆರೋಪಪಟ್ಟಿಗಳ ಪರಿಶೀಲನೆಯಿಂದ ಲಭ್ಯವಾದ ವಾಸ್ತವವಾಂಶಗಳನ್ನು ಪರಿಶೀಲಿಸಿದಾಗ ಕೃತ್ಯದ ಹಿಂದಿನ ನಿಜವಾದ ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ, ಆದರೆ ಖಂಡಿತವಾಗಿಯೂ ಅವರು ಕೆಲ ವ್ಯಕ್ತಿಗಳನ್ನು ಹರಕೆಯ ಕುರಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಡಿಸೆಂಬರ್ 2019ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಕೆಲವು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟಿಸಲು ವಿವಿ ಬಳಿಯಿಂದ ಸಂಸತ್ತಿನತ್ತ ಮೆರವಣಿಗೆ ಹೊರಡುವುದಾಗಿ ಘೋಷಿಸಿದ್ದರು. ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರ ಹತ್ತಿಕ್ಕಲು ಪೊಲೀಸರು ಬಲಪ್ರಯೋಗ ಮಾಡಿದ್ದರಿಂದ ಕೆಲ ಪ್ರತಿಭಟನಾ ನಿರತ ವಿದಾರ್ಥಿಗಳು ವಿವಿಯನ್ನು ಪ್ರವೇಶಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಿದ್ದರು. ಇವರಲ್ಲಿ ನ್ಯಾಯಾಲಯ 11 ಮಂದಿಯನ್ನು ದೋಷಮುಕ್ತಗೊಳಿಸಿ ಒಬ್ಬರ ಮೇಲೆ ಮಾತ್ರ ದೋಷಾರೋಪ ಹೊರಿಸಿದೆ.