ಸುದ್ದಿಗಳು

ಇ ಕೋರ್ಟ್ ಸೇವೆ ವ್ಯತ್ಯಯ ಸರಿಪಡಿಸಲು ಮಂಗಳೂರು ವಕೀಲರ ಸಂಘ ಮನವಿ

Bar & Bench

ದೇಶದೆಲ್ಲೆಡೆ ಇರುವ ನ್ಯಾಯಾಲಯ ಕಲಾಪಗಳ ಮಾಹಿತಿ ನೀಡುವ ಡಿಜಿಟಲ್ ಸೇವೆ ಇ ಕೋರ್ಟ್‌ ಸರ್ವೀಸ್‌ ಜಾಲತಾಣದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ಸರಿಪಡಿಸುವಂತೆ ಮಂಗಳೂರು ವಕೀಲರ ಸಂಘ ಶುಕ್ರವಾರ ಮನವಿ ಮಾಡಿದೆ.

ಕಳೆದ 3- 4 ವಾರಗಳಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸೇವೆ ಸಾವಿರಾರು ವಕೀಲರಿಗೆ, ಕಕ್ಷಿದಾರರರು ಮತ್ತಿತರರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ರಾಜ್ಯದ ಕೆಲ ಜಿಲ್ಲೆಗಳಲ್ಲಿಯೂ ತೊಂದರೆಯಾಗಿರುವುದು ಕಂಡುಬಂದಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ ಪೃಥ್ವಿರಾಜ್‌ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಇಮೇಲ್‌ ಮೂಲಕ ಕೇಂದ್ರ ಕಾನೂನು ಸಚಿವರು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವರ ಗಮನಕ್ಕೆ ತರಲಾಗಿದೆ ಎಂದು ಮಂಗಳೂರು ವಕೀಲರ ಸಂಘ ತಿಳಿಸಿದೆ.

ಇ-ಕೋರ್ಟ್ಸ್ ಸೇವೆಯಲ್ಲಿ ಉಂಟಾಗಿರುವ ಅಡಚಣೆ ಬಗ್ಗೆ ನಿಖರವಾದ ಕಾರಣಗಳು ಇದುವರೆಗೆ ಗೊತ್ತಾಗಿಲ್ಲ. ಆದರೂ, ವಕೀಲರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸುವುದು ಅಗತ್ಯವೆಂದು ಭಾವಿಸಿರುವ ಮಂಗಳೂರು ವಕೀಲರ ಸಂಘ ಸಂಬಂಧಪಟ್ಟ ಅಧಿಕಾರಿಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ನ್ಯಾಯಾಂಗ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಕೋರಿದೆ.