ಜನನ ಮರಣ ನೋಂದಣಿ ಅಧಿಕಾರ ವ್ಯಾಪ್ತಿ: ರಾಜ್ಯ ಸರ್ಕಾರದ ವಿವಾದಾತ್ಮಕ ಅಧಿಸೂಚನೆ ಹಿಂಪಡೆಯಲು ಮಂಗಳೂರು ವಕೀಲರ ಸಂಘ ಒತ್ತಾಯ

ಹೊಸ ಅಧಿಸೂಚನೆಯಿಂದ ಜನ ಸಾಮಾನ್ಯರಿಗೆ ತೊಂದರೆ, ಅಧಿಕಾರಶಾಹಿಯ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅಲ್ಲದೆ ಕಿರಿಯ ವಕೀಲರ ಕೆಲಸವನ್ನು ಕಿತ್ತುಕೊಳ್ಳುತ್ತದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
Mangalore Bar Association and Prithviraj Rai K, President of the association
Mangalore Bar Association and Prithviraj Rai K, President of the association

ಜನನ ಮರಣ ನೋಂದಣಿ ಅಧಿಕಾರ ವ್ಯಾಪ್ತಿಯನ್ನು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆ ವಿರೋಧಿಸಿ ರಾಜ್ಯದ ವಕೀಲ ಸಮುದಾಯ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಮಂಗಳೂರು ವಕೀಲರ ಸಂಘ ಕೂಡ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಜನನ ಮರಣ ನೋಂದಣಿ ಕುರಿತಂತೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅಥವಾ ಪ್ರೆಸಿಡೆನ್ಸಿ ಮಾಜಿಸ್ಟ್ರೇಟ್‌ ಅವರಿಗಿದ್ದ ಅಧಿಕಾರವನ್ನು ಹಿಂಪಡೆದು ಸಹಾಯಕ ಕಮಿಷನರ್‌ ಅಥವಾ ಸಬ್‌ ಡಿವಿಷನ್‌ ಮ್ಯಾಜಿಸ್ಟ್ರೇಟ್‌ಗೆ ನೀಡಿರುವ ಕ್ರಮದ ಹಿಂದೆ ಸಾರ್ವಜನಿಕ ಅಭಿಪ್ರಾಯ ಮತ್ತು ನ್ಯಾಯಿಕ ವರ್ಗವನ್ನು ಪರಿಗಣಿಸಿಲ್ಲ ಎಂದು ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್‌ ರೈ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

Also Read
ವರ್ಚುವಲ್‌ ಕಲಾಪ ಕೋವಿಡ್‌ ಕೊಟ್ಟ ಕೊಡುಗೆ: ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ

ಕಂದಾಯ ಕಾಯಿದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಚಾರಣೆ ನಡೆಸಲು ಸಹಾಯಕ ಕಮಿಷನರ್‌ ನ್ಯಾಯಾಲಯಗಳಿಗೆ ಆಗುತ್ತಿಲ್ಲ. ಹೊಸ ತಿದ್ದುಪಡಿ ಅಂತಹ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಉಳಿಯಲು ಕಾರಣವಾಗುತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ಮ್ಯಾಜಿಸ್ಟೇಟ್‌ ನ್ಯಾಯಾಲಯಗಳು ತ್ವರಿತವಾಗಿ ವಿಲೇವಾರಿ ಮಾಡುತ್ತಿದ್ದವು. ಆದರೆ ಹೊಸ ಅಧಿಸೂಚನೆ ಅಧಿಕಾರಶಾಹಿಯ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅಲ್ಲದೆ ಕಿರಿಯ ವಕೀಲರ ಕೆಲಸವನ್ನು ಕಿತ್ತುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಕಂದಾಯ ಪ್ರಕ್ರಿಯೆಗಳಲ್ಲಿ ಸಾಮಾನ್ಯರ ಅನುಭವ ಎಲ್ಲರಿಗೂ ಗೊತ್ತಿರುವಂತದ್ದೇ. ಹೊಸ ವ್ಯವಸ್ಥೆ ಭ್ರಷ್ಟಾಚಾರ ಮತ್ತು ವಿಳಂಬಕ್ಕೆ ಕಾರಣವಾಗಲಿದೆ. ಹೀಗಾಗಿ ಸಾಮಾನ್ಯರಿಗೆ ಹೆಚ್ಚು ತೊಂದರೆಯಾಗುವ ಮುನ್ನ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಪತ್ರ ಕೋರಿದೆ.

Related Stories

No stories found.
Kannada Bar & Bench
kannada.barandbench.com