ಗ್ರಾಹಕರ ಪರವಾಗಿ ತಾನು ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ [ಡಾ. ಲವೀನಾ ನೊರೊನ್ಹಾ ಮತ್ತು ವಿಲಿಯಂ ಸಲ್ಡಾನಾ ಇನ್ನಿತರರ ನಡುವಣ ಪ್ರಕರಣ].
ನಗರದ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಪಾಲುದಾರರಾದ ಉಜ್ವಲ್ ಡಿಸೋಜಾ, ನವೀನ್ ಕರ್ಡೋಜಾ, ವಿಲಿಯಂ ಸಲ್ಡಾನಾ, ಗಾಯತ್ರಿ ಮತ್ತು ಲೂಸಿ ಸಲ್ಡಾನಾ ಅವರಿಗೆ ಶಿಕ್ಷೆ ವಿಧಿಸಿ ಆಯೋಗದ ಅಧ್ಯಕ್ಷ ಪ್ರಕಾಶ ಕೆ, ಸದಸ್ಯ ಪಿ ವಿ ಲಿಂಗರಾಜು, ಮಹಿಳಾ ಸದಸ್ಯೆ ಎಚ್ ಜಿ ಶಾರದಮ್ಮ ಅವರು ಆದೇಶ ನೀಡಿದರು.
ಆಯೋಗ / ನ್ಯಾಯಾಲಯ ಅದೇಶ ನೀಡಿದೆ ಎಂದು ಚೆನ್ನಾಗಿ ತಿಳಿದಿದ್ದೂ ಕ್ರಯ ಪತ್ರವನ್ನು ಜಾರಿಗೊಳಿಸುವ ಮೂಲಕ ಆರೋಪಿಗಳು ಆಸ್ತಿ ಮಾರಾಟ ಮಾಡಿ ಕಾನೂನಿನ ಉಲ್ಲಂಘಿಸಿರುವುದು ಸ್ಪಟಿಕದಷ್ಟೇ ಸ್ಪಷ್ಟ. ಆದ್ದರಿಂದ 24.06.2017ರಂದು ಈ ಆಯೋಗ ಜಾರಿಗೊಳಿಸಿದ ಆದೇಶ ಪಾಲಿಸದೇ ಇದ್ದುದಕ್ಕಾಗಿ ಗ್ರಾಹಕ ಸಂರಕ್ಷಣಾ ಕಾಯಿದೆಯ 2019ರ ಅಡಿ ಆರೋಪಿ ಸಂಖ್ಯೆ 1ರಿಂದ 3 ಹಾಗೂ 4 (ಎ) ಮತ್ತು 4 (ಬಿ) ತಪ್ಪಿತಸ್ಥರು ಎಂದು ನ್ಯಾಯಾಲಯ ನುಡಿದಿದೆ.
ಮಂಗಳೂರಿನ ಗುಜ್ಜರೆ ಕೆರೆ ಎಂಬಲ್ಲಿ ಆರೋಪಿಗಳು ನಿರ್ಮಿಸಿದ್ದ ಬಹುಮಹಡಿ ವಸತಿ ಕಟ್ಟಡದಲ್ಲಿ ಫ್ಲಾಟ್ ಒಂದನ್ನು ಅರ್ಜಿದಾರೆ ಡಾ. ಲವೀನಾ ಖರೀದಿಸಿದ್ದರು. ಕಾರ್ ಪಾರ್ಕಿಂಗ್ ಜಾಗವನ್ನು ಒದಗಿಸಲು ಸಹ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಕಾರ್ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಲವೀನಾ ಆರೋಪಿ ಬಿಲ್ಡರ್‌ಗಳಿಗೆ ನೋಟಿಸ್ ನೀಡಿದರು. ಆಗಲೂ ಸೌಲಭ್ಯ ದೊರೆಯದ ಕಾರಣಕ್ಕೆ ಪ್ರಕರಣ ಮಂಗಳೂರಿನ ಗ್ರಾಹಕ ಆಯೋಗದ ಅಂಗಳ ತಲುಪಿತ್ತು.
ವಿಚಾರಣೆ ನಡೆಸಿದ ಗ್ರಾಹಕ ಆಯೋಗವು ದೂರುದಾರರಿಗೆ ಕಾರ್ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕು ಮತ್ತು 50,000 ರೂಪಾಯಿ ಪರಿಹಾರ ಹಾಗೂ 10000 ರೂಪಾಯಿ ದಾವೆ ವೆಚ್ಚ ನೀಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಆದರೆ ಅಲ್ಲಿ ಆರೋಪಿಗಳ ಮನವಿ ತಿರಸ್ಕೃತಗೊಂಡು ಮಂಗಳೂರಿನ ಗ್ರಾಹಕ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿ ಹಿಡಿಯಲಾಗಿತ್ತು. ಇದರ ಹೊರತಾಗಿಯೂ ಆರೋಪಿಗಳು ದೂರುದಾರೆ ಅವರಿಗೆ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿರಲಿಲ್ಲ.
ಹೀಗಾಗಿ ಅರ್ಜಿದಾರೆ ಸೆಪ್ಟೆಂಬರ್ 2022ರಲ್ಲಿ ಮತ್ತೆ ಗ್ರಾಹಕ ಆಯೋಗದ ಮೊರೆ ಹೋದರು. ಇದೀಗ ಅವರ ಅರ್ಜಿ ಪುರಸ್ಕರಿಸಿರುವ ಆಯೋಗ ಬಿಲ್ಡರ್ ಗಳಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.