ಖಾತೆಯ ಅನಧಿಕೃತ ವಹಿವಾಟಿನಿಂದಾಗಿ ಗ್ರಾಹಕ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆ: ಕೇರಳ ಗ್ರಾಹಕ ನ್ಯಾಯಾಲಯ

ವಂಚನೆ ಮೂಲಕ ಖಾತೆಯಿಂದ ಹಿಂಪಡೆಯಲಾದ ಮೊತ್ತವನ್ನು ಪಾವತಿಸುವಂತೆ ಎಸ್‌ಬಿಐಗೆ ನಿರ್ದೇಶಿಸುವಾಗ ಗ್ರಾಹಕ ನ್ಯಾಯಾಲಯ 'ಎಲ್ಲಾ ಎಸ್ಎಂಎಸ್ ಸಂದೇಶಗಳನ್ನು' ಓದುವುದು ಗ್ರಾಹಕರ ಕರ್ತವ್ಯವಲ್ಲ ಎಂದು ನುಡಿಯಿತು.
SBI bank
SBI bank

ತಮ್ಮ ಬ್ಯಾಂಕ್‌ ಖಾತೆ ಮೂಲಕ ನಡೆದ ಅನಧಿಕೃತ ವಹಿವಾಟುಗಳಿಂದಾಗಿ ಗ್ರಾಹಕರು ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್‌ ಹೊಣೆಗಾರ ಎಂದು ಕೇರಳ ಗ್ರಾಹಕ ನ್ಯಾಯಾಲಯ ಇತ್ತೀಚೆಗೆ ಒತ್ತಿ ಹೇಳಿದೆ [ಸಲೀಂ ಪಿಎಂ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನಡುವಣ ಪ್ರಕರಣ].

ಗ್ರಾಹಕನ ಖಾತೆಯಿಂದ ವಂಚನೆಯ ಮುಖಾಂತರ ಅನಧಿಕೃತವಾಗಿ ಹಣ ಹಿಂಪಡೆದಿದ್ದಕ್ಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಗ್ರಾಹಕನಿಗೆ ಪರಿಹಾರ ನೀಡಬೇಕು ಎಂದು ಎರ್ನಾಕುಲಂನಲ್ಲಿರುವ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕ್‌ಗೆ ನಿರ್ದೇಶಿಸುವಾಗ ಈ ವಿಚಾರ ತಿಳಿಸಿದೆ.

ಹಣ ಹಿಂಪಡೆತದ ಬಗ್ಗೆ ಗ್ರಾಹಕ ಸಲೀಂ ಪಿ ಎಂ ಅವರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಿದ್ದರಿಂದ ತನ್ನ ಕಡೆಯಿಂದ ಯಾವುದೇ ಸೇವಾ ನ್ಯೂನತೆ ಅಥವಾ ಅನ್ಯಾಯದ ವಹಿವಾಟು ನಡೆದಿಲ್ಲ ಎಂಬ ಎಸ್‌ಬಿಐ ವಾದವನ್ನು ಗ್ರಾಹಕರ ನ್ಯಾಯಾಲಯ ತಿರಸ್ಕರಿಸಿತು.

ಗ್ರಾಹಕರು ಅಂತಹ ಎಲ್ಲಾ ಎಸ್‌ಎಂಎಸ್‌ ಸಂದೇಶ ಓದಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ. ಎಲ್ಲಾ ಎಸ್‌ಎಂಎಸ್‌ ಸಂದೇಶಗಳನ್ನು ಓದುವುದು ಗ್ರಾಹಕರ ಕರ್ತವ್ಯವಲ್ಲ. ಅಲ್ಲದೆ ಎಸ್‌ಎಂಎಸ್‌ಗಳು ರಾತ್ರಿ ಹೊತ್ತು ಸಲೀಂ ಅವರ ಮೊಬೈಲ್‌ಗೆ ಬಂದಿವೆ ಎಂದು ನ್ಯಾಯಾಲಯ ತಿಳಿಸಿದೆ.

ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಡಿ  ಬಿ  ಬಿನು, ಸದಸ್ಯರಾದ ವಿ ರಾಮಚಂದ್ರನ್ ಹಾಗೂ ಶ್ರೀವಿಧಿಯಾ ಟಿ ಎನ್ ಅವರಿದ್ದ ಪೀಠ ₹ 85,000ದಷ್ಟು ಹಣವನ್ನು (ನಷ್ಟಕ್ಕೆ ₹ 70,000, ಪರಿಹಾರವಾಗಿ ₹ 10,000 ಮತ್ತು ವ್ಯಾಜ್ಯದ ವೆಚ್ಚದ ರೂಪದಲ್ಲಿ ₹ 5,000) ಸಲೀಂ ಅವರು ಪರಿಹಾರವಾಗಿ ಪಡೆಯಬಹುದು ಎಂದು ತಿಳಿಸಿತು. ಈ ಹಿಂದೆ ಒಂಬುಡ್ಸ್‌ಮನ್ ನೀಡಿದ್ದ ತೀರ್ಪಿನಂತೆ ಈಗಾಗಲೇ ಪಾವತಿಸಲಾದ ₹ 90,000 ಜೊತೆಗೆ ಎಸ್‌ಬಿಐ ₹ 85,000 ಹಣವನ್ನು ಸಲೀಂ ಅವರಿಗೆ ನೀಡಬೇಕು ಅದು ಜುಲೈ 29 ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.  

Also Read
ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಯವರ ಹಳೆಯ ದೂರಿಗೆ ಸಂಬಂಧಿಸಿದಂತೆ ಕತಾರ್ ಏರ್‌ವೇಸ್‌ಗೆ ಕೇರಳ ಗ್ರಾಹಕ ನ್ಯಾಯಾಲಯ ದಂಡ

ಹಿನ್ನೆಲೆ

ಸಲೀಂ ಅವರ ಖಾತೆಯಿಂದ  ವಂಚನೆ ಮೂಲಕ ಮೂರು ಬಾರಿ ₹ 1.6 ಲಕ್ಷ ಮೊತ್ತವನ್ನು ಡ್ರಾ ಮಾಡಲಾಗಿತ್ತು. ಹೀಗಾಗಿ ಅವರು 2019ರಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಸಲೀಂ ಅವರಿಗೆ ₹ 80,000 ಪಾವತಿಸಬೇಕು ಎಂದು ಎಸ್‌ಬಿಐಗೆ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ನಿರ್ದೇಶಿಸಿತ್ತು. ಅವರ ಖಾತೆಗೆ ಹೆಚ್ಚುವರಿಯಾಗಿ ₹10,000 ಕೂಡ ಜಮೆಯಾಗಿತ್ತು. ಆದರೆ ಅನಧಿಕೃತವಾಗಿ ತೆಗೆಯಲ್ಪಟ್ಟ ಉಳಿದ ₹ 70 ಸಾವಿರ ಹಣವನ್ನು ನೀಡುವಂತೆ ಸಲೀಂ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಘಟನೆಗೂ ಮುನ್ನ ತನ್ನ ಎಟಿಎಂ ಕಾರ್ಡ್ ಕೆಲಸ ಮಾಡದೇ ಇರುವುದು ಗಮನಕ್ಕೆ ಬಂದಿದ್ದು, ಹಳೆಯ ಕಾರ್ಡ್ ಬದಲಿಸಲು ಎಸ್‌ಬಿಐಗೆ ಸಲೀಂ ಮನವಿ ಮಾಡಿದ್ದರು. ಹಳೆಯ ಕಾರ್ಡ್‌ಗಳನ್ನು ಹೊಸ ಚಿಪ್ ಕಾರ್ಡ್‌ನೊಂದಿಗೆ ಬದಲಾಯಿಸುವ ಪ್ರಕ್ರಿಯೆಯಲ್ಲಿದೆ ಎಂದು ಬ್ಯಾಂಕ್ ಅವರಿಗೆ ಮಾಹಿತಿ ನೀಡಿತ್ತು. ನಂತರ ಅವರಿಗೆ ಹೊಸ ಕಾರ್ಡ್ ನೀಡಲಾಗಿತ್ತು.  ಹಣ ತೆಗೆಯಲು ಎಟಿಎಂಗೆ ಹೋದಾಗ ಅವರ ಖಾತೆಯಲ್ಲಿ ಕೇವಲ ₹ 3,011 ಉಳಿದಿರುವುದು ಕಂಡು ಸಲೀಂ ಆಘಾತಕ್ಕೊಳಗಾಗಿದ್ದರು. ಅವರ ಬ್ಯಾಂಕ್ ಖಾತೆಯಿಂದ ₹ 1.6 ಲಕ್ಷ ನಾಪತ್ತೆಯಾಗಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Salim_PM_v_State_Bank_of_India.pdf
Preview
Kannada Bar & Bench
kannada.barandbench.com