Kerala High Court 
ಸುದ್ದಿಗಳು

ಮಗುವಿನ ತಂದೆ ಯಾರೆಂದು ನಿರ್ಧರಿಸಲು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಡಿಎನ್ಎ ಪರೀಕ್ಷೆಗೆ ಆದೇಶಿಸಬೇಕು: ಕೇರಳ ಹೈಕೋರ್ಟ್

ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಪು ನೀಡಲು ಅಸಾಧ್ಯವೆಂದು ನ್ಯಾಯಾಲಯಕ್ಕೆ ಅನಿಸಿದಾಗ ಡಿಎನ್ಎ ಪರೀಕ್ಷೆಯಿಲ್ಲದೆ ವಿವಾದ ಪರಿಹರಿಸಲು ಸಾಧ್ಯವಾಗದಿದ್ದಾಗ ಮಾತ್ರ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಸೂಚಿಸಬಹುದು ಎಂದ ಹೈಕೋರ್ಟ್.

Bar & Bench

ಮಗುವಿನ ತಂದೆ ಯಾರು ಎಂಬ ವಿವಾದ ಇರುವ ಪ್ರತಿಯೊಂದು ಪ್ರಕರಣದಲ್ಲಿಯೂ ಮಗುವಿನ ಪಿತೃತ್ವ ನಿರ್ಧರಿಸಲು ನ್ಯಾಯಾಲಯಗಳು ಡಿಎನ್‌ಎ ಪರೀಕ್ಷೆಗೆ ಸೂಚಿಸಬಾರದು ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ [ಸುಜಿತ್ ಕುಮಾರ್ ಎಸ್ ಮತ್ತು ವಿನಯ ವಿ ಎಸ್ ಇನ್ನಿತರರ ನಡುವಣ ಪ್ರಕರಣ].

ವಿವಾದ ಇದ್ದ ಮಾತ್ರಕ್ಕೆ ಮಗುವಿನ ಪಿತೃತ್ವ ಕುರಿತಂತೆ ಡಿಎನ್‌ಎ ಪರೀಕ್ಷೆ ನಡೆಸುವಂತೆ ಆದೇಶಿಸಲಾಗದು. ಪಿತೃತ್ವದ ನಿರ್ದಿಷ್ಟ ನಿರಾಕರಣೆ ಇರಬೇಕು ಎಂದು ನ್ಯಾಯಾಲಯ ವಿವರಿಸಿದೆ.

ವಿವಾದವನ್ನು ಪರಿಹರಿಸಲು ಅಂತಹ ಪರೀಕ್ಷೆಗಳು ಅನಿವಾರ್ಯವಾದ ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಡಿಎನ್‌ಎ ಪರೀಕ್ಷೆ ಇಲ್ಲವೇ ಇನ್ನಿತರ ವೈಜ್ಞಾನಿಕ ಪರೀಕ್ಷೆಗಳಿಗೆ ಆದೇಶಿಸಬಹುದು ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ತಿಳಿಸಿದರು.

ಉಳಿದ ಪ್ರಕರಣಗಳಲ್ಲಿ ಮಗುವಿನ ಪಿತೃತ್ವವನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಮುನ್ನಡೆಸಲು ಕಕ್ಷಿದಾರರಿಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯ ಹೇಳಿದೆ.

"ಅಂತಹ ಪುರಾವೆಗಳ ಆಧಾರದ ಮೇಲೆ ತೀರ್ಮಾನವನ್ನು ತೆಗೆದುಕೊಳ್ಳಲು ಅಸಾಧ್ಯವೆಂದು ನ್ಯಾಯಾಲಯ ಕಂಡುಕೊಂಡಾಗ ಅಥವಾ ವಿವಾದವನ್ನು ಡಿಎನ್ಎ ಪರೀಕ್ಷೆಯಿಲ್ಲದೆ ಪರಿಹರಿಸಲಾಗುವುದಿಲ್ಲ ಎಂದು ಅನ್ನಿಸಿದಾಗ ಅದು ಡಿಎನ್ಎ ಪರೀಕ್ಷೆಗೆ ನಿರ್ದೇಶಿಸಬಹುದು ಇಲ್ಲದಿದ್ದರೆ ಇಲ್ಲ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಅಪರೂಪದ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ವಿವಾದವನ್ನು ಪರಿಹರಿಸಲು  ಡಿಎನ್‌ಎ ಪರೀಕ್ಷೆ ಅಥವಾ ಇನ್ನಿತರ ಯಾವುದೇ ವೈಜ್ಞಾನಿಕ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪಿತೃತ್ವ ಪರೀಕ್ಷೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವಾಗ ಹೈಕೋರ್ಟ್ ಈ ವಿಚಾರಗಳನ್ನು ತಿಳಿಸಿದೆ.

ತನ್ನ ಪರಿತ್ಯಕ್ತ ಗಂಡನೇ ತನ್ನ ಮಗುವಿನ ತಂದೆ ಎಂಬ ಮಾಜಿ ಪತ್ನಿಯ ಹೇಳಿಕೆಯನ್ನು ಪರಿತ್ಯಕ್ತ ಗಂಡ ನಿರಾಕರಿಸಿದ್ದ. ಇದಕ್ಕೆ ಪತ್ನಿ ಆಕ್ಷೇಪಿಸಿದ್ದು ಜೀವನಾಂಶ ಪಾವತಿ ತಪ್ಪಿಸುವುದಕ್ಕಾಇಗ ಮಗುವಿನ ತಂದೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಹವಾಲು ತೋಡಿಕೊಂಡಿದ್ದರು.

ಕೊನೆಗೆ ವ್ಯಕ್ತಿಯ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್‌ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.

[ತೀರ್ಪಿನ ಪ್ರತಿಯನ್ನು ಇಲ್ಲಿಓದಿ]

_xxxx_v__xxx_ (1).pdf
Preview