ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಪತ್ನಿಯ ವ್ಯಭಿಚಾರ ಸಾಬೀತಿಗೆ ಮಗುವಿನ ಡಿಎನ್ಎ ಪರೀಕ್ಷೆ ನಡೆಯಲಿ: ರಾಜಸ್ಥಾನ ಹೈಕೋರ್ಟ್

ಘನತೆ ಮತ್ತು ಪಾಲಕತ್ವವನ್ನು ಹೊಂದುವ ಮಗುವಿನ ಹಕ್ಕಿಗೆ ಹೋಲಿಸಿದರೆ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಸಂಗಾತಿಗಳ ಗೆಲುವು ಅಥವಾ ಸೋಲು ತುಂಬಾ ಕ್ಷುಲ್ಲಕವಾದುದು ಎಂದ ನ್ಯಾಯಾಲಯ.
Rajasthan HC, DNA PATERNITY TEST
Rajasthan HC, DNA PATERNITY TEST

ವಿಚ್ಚೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ವಿವಾಹದ ಸಮಯದಲ್ಲಿ ಜನಿಸಿದ್ದ ಮಗು ತನ್ನದಲ್ಲ ಎಂದು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಯ ವಿವರಗಳನ್ನು ಅಧಿಕೃತವಾಗಿ ಸಲ್ಲಿಸುವುದಾಗಿ ತಿಳಿಸಿದ್ದ ಪತಿಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ಡಿಎನ್‌ಎ ಪಿತೃತ್ವ ಪರೀಕ್ಷೆಯನ್ನು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ನಡೆಸಬಹುದು ಹಾಗೂ ಡಿಎನ್‌ಎ ಪರೀಕ್ಷೆ ಆಧಾರದ ಮೇಲೆ ವ್ಯಭಿಚಾರ ನಡೆದಿದೆ ಎಂದು ಹೇಳಿ ವಿಚ್ಛೇದನ ಪಡೆಯುವುದಕ್ಕೆ ಮಗುವನ್ನು ಅಸ್ತ್ರವಾಗಿ ಬಳಸುವಂತಿಲ್ಲ ಎಂದು ನ್ಯಾ. ಪುಷ್ಪೇಂದ್ರ ಸಿಂಗ್‌ ಭಾಟಿ ತಿಳಿಸಿದರು.

Also Read
ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಆರಿಜ್‌ ಖಾನ್‌ಗೆ ಗಲ್ಲು ಶಿಕ್ಷೆ, ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದ ದೆಹಲಿ ನ್ಯಾಯಾಲಯ

“ಮಗುವಿನ ಹಿತದೃಷ್ಟಿಯಿಂದ ಹಾಗೆಯೇ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಿಂದ ಸ್ಥಾಪಿತವಾದ ಕಾನೂನನ್ನು ಗಮನದಲ್ಲಿರಿಸಿಕೊಂಡು ಡಿಎನ್‌ಎ ಪಿತೃತ್ವ ಪರೀಕ್ಷೆಯನ್ನು ಅಪರೂಪದಲ್ಲಿ ಅಪರೂಪವಾದ ಹಾಗೂ ಅಸಾಧಾರಣವೆನಿಸುವ ಪ್ರಕರಣಗಳಲ್ಲಿ ಮಾತ್ರವೇ ನಡೆಸಬೇಕು ಎಂಬುದನ್ನು ಈ ನ್ಯಾಯಾಲಯ ಕಂಡುಕೊಂಡಿದೆ” ಎಂಬುದಾಗಿ ಪೀಠ ತಿಳಿಸಿದೆ.

ಘನತೆ ಮತ್ತು ಪಾಲಕತ್ವವನ್ನು ಹೊಂದುವ ಮಗುವಿನ ಹಕ್ಕಿಗೆ ಹೋಲಿಸಿದರೆ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಸಂಗಾತಿಗಳ ಗೆಲುವು ಅಥವಾ ಸೋಲು ತುಂಬಾ ಕ್ಷುಲ್ಲಕವಾದುದು ಎಂದ ನ್ಯಾಯಾಲಯ.

“ಮಗು ಮತ್ತು ಅದರ ಬಾಲ್ಯವನ್ನು ಅರಿತುಕೊಳ್ಳಲು ಸಮಾಜ ಮತ್ತು ಕಾನೂನಿಗೆ ಇದು ಗಂಭೀರ ಸಮಯವಾಗಿದೆ. ವೈವಾಹಿಕ ಸಂಘರ್ಷದ ಬಲಿಪೀಠದಲ್ಲಿ ಮಗುವನ್ನು ಬಲಿಪಶು ಮಾಡುವ ಅಥವಾ ಆ  ಮಗು ಘನತೆಯಿಂದ ಬದುಕುವ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವುದರ ಹೋಲಿಕೆಯಲ್ಲಿ ವೈವಾಹಿಕ ವ್ಯಾಜ್ಯಗಳ ಸೋಲು ಗೆಲುವಿನ ಪರಿಣಾಮ ಕ್ಷುಲ್ಲಕವಾಗಿಬಿಡುತ್ತದೆ” ಎಂದು ಅದು ವಿವರಿಸಿದೆ.  

ಇದರೊಂದಿಗೆ ನ್ಯಾ. ಭಾಟಿ ಅವರು ಮದುವೆಯ ಪಾವಿತ್ರ್ಯ ಮತ್ತು ಬಾಲ್ಯದ ಪಾವಿತ್ರ್ಯದ ನಡುವೆ ಆಯ್ಕೆ ಇದ್ದರೆ ಬಾಲ್ಯದ ಪಾವಿತ್ರ್ಯದೆಡೆಗೆ ವಾಲುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿ ಇಲ್ಲ ಎಂದು ತಿಳಿಸಿ ಪತಿಯ ಮನವಿ ತಿರಸ್ಕರಿಸಿದರು.

Related Stories

No stories found.
Kannada Bar & Bench
kannada.barandbench.com