High Court of Jammu & Kashmir, Srinagar 
ಸುದ್ದಿಗಳು

ಸುದ್ದಿ ವೆಬ್‌ಸೈಟ್‌ಗಳಿಗೆ ನೋಂದಣಿ, ಪರವಾನಗಿ ಬೇಕೆ? ಸರ್ಕಾರದ ಪ್ರತಿಕ್ರಿಯೆ ಬಯಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌

ಸುದ್ದಿ ವೆಬ್‌ಸೈಟ್‌ಗಳ ಹೆಚ್ಚಳವಾಗಿದ್ದು, ಅವುಗಳು ಯಾವುದೇ ನೋಂದಣಿ ಅಥವಾ ಪರವಾನಗಿ ಪಡೆಯದೆ ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ವೆಬ್‌ಸೈಟ್‌ಗಳು ನಕಲಿ ಸುದ್ದಿ ಪ್ರಕಟಣೆಯಲ್ಲಿ ತೊಡಗಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

Bar & Bench

ಸುದ್ದಿ ವೆಬ್‌ಸೈಟ್‌ಗಳ ವ್ಯಾಪಕವಾಗಿ ಹೆಚ್ಚಳವಾಗಿದ್ದು, ಅವುಗಳು ಯಾವುದೇ ನೋಂದಣಿ ಅಥವಾ ಪರವಾನಗಿ ಪಡೆಯದೆ ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ವೆಬ್‌ಸೈಟ್‌ಗಳು ನಕಲಿ ಸುದ್ದಿ ಪ್ರಕಟಣೆಯಲ್ಲಿ ತೊಡಗಿವೆ ಎಂದು ಸಲ್ಲಿಸಲಾಗಿರುವ ಮನವಿಯ ವಿಚಾರಣೆ ನಡೆಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಆದೇಶಿಸಿದೆ.

ಸುದ್ದಿ ಪೋರ್ಟಲ್‌ಗಳು ನೋಂದಣಿ ಅಥವಾ ಪರವಾನಗಿ ಪಡೆಯುವ ಅಗತ್ಯವಿದೆಯೇ, ಹಾಗಾದರೆ ಅಂಥ ಪೋರ್ಟಲ್‌ಗಳು ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಮುಖ್ಯ ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌ ಮತ್ತು ನ್ಯಾಯಮೂರ್ತಿ ಸಂಜಯ್‌ ಧರ್‌ ಅವರಿದ್ದ‌ ವಿಭಾಗೀಯ ಪೀಠ ಪ್ರಶ್ನಿಸಿದೆ.

“ಒಂದೊಮ್ಮೆ ಸುದ್ದಿ ಪೋರ್ಟಲ್‌ಗಳು ನೋಂದಣಿ ಅಥವಾ ಪರವಾನಗಿ ಪಡೆಯಬೇಕು ಎಂದಿದ್ದರೆ ಯಾವ ನಿರ್ದಿಷ್ಟ ಕಾನೂನು ನಿಬಂಧನೆಯ ಅಡಿ ಅವು ನೋಂದಣಿ ಮಾಡಿಸಬೇಕು. ಕಾನೂನಿಗೆ ಅನುಸಾರವಾಗಿ ಆ ಸುದ್ದಿ ಪೋರ್ಟಲ್‌ಗಳು ಕಾರ್ಯನಿರ್ವಹಿಸುತ್ತಿವೆಯೇ, ಆ ಸುದ್ದಿ ಪೋರ್ಟಲ್‌ಗಳು ಪ್ರಕಟಿಸುತ್ತಿರುವ ಸುದ್ದಿಗಳ ಮೇಲೆ ಯಾವುದಾದರೂ ಸಂಸ್ಥೆ ನಿಗಾ ಇಟ್ಟಿದೆಯೇ ಎಂಬ ಅಂಶಗಳನ್ನು ಒಳಗೊಂಡು ಪ್ರತಿಕ್ರಿಯೆ ಸಲ್ಲಿಸಬೇಕು” ಎಂದು ಜುಲೈ 30ರ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸುದ್ದಿ ಪೋರ್ಟಲ್‌ಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳು ವ್ಯಾಪಕವಾಗಿ ಹೆಚ್ಚಳವಾಗಿದ್ದು, ಅವುಗಳು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುವಲ್ಲಿ ನಿರತವಾಗಿವೆ ಎಂದು ಆರೋಪಿಸಿ ಸರ್ಕಾರೇತರ ಸಂಸ್ಥೆಯಾದ ಜಮ್ಮು ಮತ್ತು ಕಾಶ್ಮೀರ ಜನರ ವೇದಿಕೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ಕಾಶ್ಮೀರ್‌ ನ್ಯೂಸ್‌, ಕಾಶ್ಮೀರ್‌ ವಾಯ್ಸ್‌, ಕಾಶ್ಮೀರ್‌ ಬ್ರೇಕಿಂಗ್‌ ನ್ಯೂಸ್‌, ನ್ಯೂಸ್‌ ಕಾಶ್ಮೀರ್‌ 24/7, ಕಾಶ್ಮೀರ್‌ ಬ್ಯುಸಿನೆಸ್‌ ಹಬ್‌ ಮತ್ತು ಬೋಲ್‌ ಕಾಶ್ಮೀರ್‌ ಇತ್ಯಾದಿಗಳು ಯಾವುದೇ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಲ್ಲ ಅಥವಾ ಪರವಾನಗಿ ಪಡೆದಿಲ್ಲ. ಅಲ್ಲದೇ, ಈ ಪೋರ್ಟಲ್‌ಗಳು ಯಾವುದೇ ಪ್ರಾಧಿಕಾರದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂದು ಅರ್ಜಿದಾರರ ಪರ ವಕೀಲರಾದ ಶಫ್ಕತ್‌ ನಜೀರ್‌ ಮತ್ತು ಶಬೀರ್‌ ಅಹ್ಮದ್‌ ಭಟ್‌ ವಾದಿಸಿದ್ದಾರೆ.

ಈ ಸಂಬಂಧ ಒಂದು ತಿಂಗಳ ಒಳಗೆ ಪ್ರತಿಕ್ರಿಯಿ ಸಲ್ಲಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪೀಠ ಆದೇಶ ಮಾಡಿದೆ. ಸೆಪ್ಟೆಂಬರ್‌ಗೆ ವಿಚಾರಣೆ ಮುಂದೂಡಲಾಗಿದೆ.