ಮಾಧ್ಯಮ ವಿಚಾರಣೆ ಪ್ರಕರಣ: ಕೆಲ ನಿರ್ದೇಶನಗಳನ್ನು ನೀಡಿದ ಬಾಂಬೆ ಹೈಕೋರ್ಟ್

ವಾದಗಳು ಮುಂದುವರೆದಂತೆ ನ್ಯಾಯಾಲಯ ತನ್ನ ಮುಂದಿರುವ ಪ್ರಕರಣ ಹಿಂದೆಂದೂ ಕಂಡಿಲ್ಲದೇ ಇರುವಂಥದ್ದು. ಹೀಗಾಗಿ ಮಾಧ್ಯಮ ವಿಚಾರಣೆ ನಿಯಂತ್ರಿಸುವ ಮಾರ್ಗಸೂಚಿ ನೀಡುವ ಪರವಾಗಿ ತಾನು ಇರುವುದಾಗಿ ತಿಳಿಸಿತ್ತು.
Media Trial
Media Trial

ಮಾಧ್ಯಮಗಳು ನಡೆಸುವ ವಿಚಾರಣೆಯಿಂದಾಗಿ ಪೊಲೀಸರ ತನಿಖೆಗೆ ಅಡ್ಡಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮತ್ತು ವ್ಯಕ್ತಿಗಳ ಸಾವಿನ ಘಟನೆಗಳನ್ನು ವರದಿ ಮಾಡುವಾಗ ಅನುಸರಿಸಬೇಕಾದ ನಿರ್ದಶನಗಳನ್ನು ಬಾಂಬೆ ಹೈಕೋರ್ಟ್‌ ಸೋಮವಾರ ತಿಳಿಸಿದೆ. ಇದೇ ವೇಳೆ ಇಲೆಕ್ಟ್ರಾನಿಕ್‌ ಮಾಧ್ಯಮಗಳು ಭಾರತೀಯ ಪತ್ರಿಕಾ ಮಂಡಳಿಯ (ಪಿಸಿಐ) ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದೆ.

"ಮಾಧ್ಯಮಗಳ ವಿಚಾರಣೆಯು ಅಪರಾಧ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ಕೇಬಲ್ ಟಿವಿ ಕಾಯ್ದೆಯಡಿ ಒದಗಿಸಲಾದ ಕಾರ್ಯಕ್ರಮ ಸಂಹಿತೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತದೆ,” ಎಂದು ತೀರ್ಪು ನೀಡಿತು. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿ ಮಾಡಿರುವ ವರದಿಗಳ ಕೆಲ ಭಾಗ ತಿರಸ್ಕಾರಾರ್ಹವೆಂದು ಕೋರ್ಟ್ ಗಮನಿಸಿದೆ ಆದರೆ ನ್ಯಾಯಾಲಯವು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.

Also Read
ಸುಶಾಂತ್ ಸಿಂಗ್ ಪ್ರಕರಣ: ಮಾಧ್ಯಮಗಳ ವಿಚಾರಣೆ ಕುರಿತಂತೆ ನಾಳೆ ಬಾಂಬೆ ಹೈಕೋರ್ಟ್ ತೀರ್ಪು
ಕ್ರಿಮಿನಲ್‌ ತನಿಖೆಗೆ ಸಂಬಂಧಿಸಿದ ಚರ್ಚೆ, ಸಂವಾದಗಳನ್ನು ಮಾಧ್ಯಮಗಳು ತಪ್ಪಿಸಬೇಕು. ಅಂತಹ ವಿಷಯಗಳಲ್ಲಿ ಕೇವಲ ಮಾಹಿತಿಯುಕ್ತ ವರದಿಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು”
- ಬಾಂಬೆ ಹೈಕೋರ್ಟ್

ಆರೋಪಿ ಮತ್ತು ಸಾಕ್ಷಿಗಳ ಹಕ್ಕನ್ನು ಕುರಿತು ಪೂರ್ವಾಗ್ರಹಗೊಳಿಸದ ರೀತಿಯಲ್ಲಿ ಕ್ರಿಮಿನಲ್‌ ತನಿಖೆಗೆ ಸಂಬಂಧಿಸಿದ ಅಂಶಗಳನ್ನು ವರದಿ ಮಾಡಬೇಕು ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿತ್ತರವಾದ ವರದಿಗಳ ಹಿನ್ನೆಲೆಯಲ್ಲಿ ಮಾಧ್ಯಮ ವಿಚಾರಣೆ ನಡೆಯುತ್ತಿದೆ ಎಂದು ಆರೋಪಿಸಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆಗಳನ್ನು ದಾಖಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನವೆಂಬರ್‌ 6ರಂದು ತೀರ್ಪು ಕಾಯ್ದಿರಿಸಿತ್ತು.

Also Read
'ಸತ್ತವರನ್ನೂ ನೀವು ಬಿಡಲಿಲ್ಲ, ಇದು ತನಿಖಾ ಪತ್ರಿಕೋದ್ಯಮವೇ?' ಸುದ್ದಿ ವಾಹಿನಿಗಳಿಗೆ ಬಾಂಬೆ ಹೈಕೋರ್ಟ್‌ ತಪರಾಕಿ

ವರದಿ ಮಾಡುವಾಗ ಮಾಧ್ಯಮ ಈ ಕೆಳಗಿನ ಅಂಶಗಳಿಂದ ದೂರ ಇರಬೇಕು ಎಂದು ನ್ಯಾಯಾಲಯ ಹೇಳಿದೆ:

  • ಆತ್ಮಹತ್ಯೆಯಿಂದಾದ ಸಾವಿನಲ್ಲಿ ಪ್ರಾಣ ಕಳೆದುಕೊಂಡವರನ್ನು ದುರ್ಬಲ ಎಂದು ಚಿತ್ರಿಸುವುದು ತನಿಖೆಯೆಡೆಗೆ ಅನುಮಾನ ಉಂಟುಮಾಡುತ್ತದೆ.

  • ಘಟನೆಯ ಮರುನಿರ್ಮಾಣ ಅಥವಾ ಮರುಸೃಷ್ಟಿ ಇಲ್ಲವೇ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡುವುದು.

  • ಪೊಲೀಸರಿಗೆ ನೀಡಲಾದ ತಪ್ಪೊಪ್ಪಿಗೆಗಳನ್ನು ನ್ಯಾಯಾಲಯದಲ್ಲಿ ಅನುಮತಿಸಲಾಗುವುದಿಲ್ಲ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸದೆ ಕೇವಲ ತಪ್ಪೊಪ್ಪಿಗೆ ಹೇಳಿಕೆಗಳನ್ನು ಮಾತ್ರವೇ ಪ್ರಕಟಿಸುವುದು.

ತನಿಖಾಧಿಕಾರಿಗಳು ಮಾಹಿತಿ ಹಂಚಿಕೊಳ್ಳಲೇಬೇಕೆಂಬ ಯಾವುದೇ ಬಾಧ್ಯತೆ ಇಲ್ಲ .
ಬಾಂಬೆ ಹೈಕೋರ್ಟ್

ಮಾಧ್ಯಮ ಸ್ವಾತಂತ್ರ್ಯ ಕಾಪಾಡುತ್ತಲೇ, ಅಪರಾಧ ತನಿಖೆಗಳನ್ನು ವರದಿ ಮಾಡಲು ಇಲೆಕ್ಟ್ರಾನಿಕ್‌ ಮಾಧ್ಯಮಗಳ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ವಿಚಾರಣೆ ವೇಳೆ ನ್ಯಾಯಾಲಯ ಮನವಿಯಲ್ಲಿ ಕೋರಿದ ಮಾರ್ಗಸೂಚಿಗಳು ನಾಗರಿಕರ ಅರಿವಿನ ಹಕ್ಕಿಗೆ ಅಡ್ಡಿ ಉಂಟು ಮಾಡಬಹುದೇ ಎಂದು ಪ್ರಶ್ನಿಸಿತ್ತು. ಅನೇಕ ವಕೀಲರು ಮಂಡಿಸಿದ್ದ ವಾದವನ್ನು ನ್ಯಾಯಾಲಯ ಸುಮಾರು ಒಂದು ತಿಂಗಳ ಕಾಲ ಆಲಿಸಿತ್ತು.

ಇಲೆಕ್ಟ್ರಾನಿಕ್ ಮಾಧ್ಯಮವನ್ನು ನಿಯಂತ್ರಿಸಲು ಯಾವುದೇ ಶಾಸನಬದ್ಧ ಸಂಸ್ಥೆ ಇಲ್ಲ ಎಂದು ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ತಿಳಿಸಿದಾಗ, ಮುದ್ರಣ ಮಾಧ್ಯಮಕ್ಕಾಗಿ ಭಾರತೀಯ ಪ್ರೆಸ್ ಕೌನ್ಸಿಲ್ ಇರುವಾಗ ಇ- ಮಾಧ್ಯಮಗಳ ನಿಯಂತ್ರಣಕ್ಕೆ ಅಂತಹ ಸಂಸ್ಥೆ ಏಕೆ ಇಲ್ಲ ಎಂದು ಪ್ರತಿಕ್ರಿಯಿಸುಂತೆ ಅದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ಸುದ್ದಿ ಪ್ರಸಾರಕರ ಸಂಘ ​​(ಎನ್‌ಬಿಎ) ಮತ್ತು ರಾಷ್ಟ್ರೀಯ ಪ್ರಸಾರ ಒಕ್ಕೂಟ (ಎನ್‌ಬಿಎಫ್) ರೀತಿಯ ಸ್ವಯಂ-ನಿಯಂತ್ರಿತ ಖಾಸಗಿ ಸಂಸ್ಥೆಗಳು ಇದ್ದರೂ ಕೂಡ, ಅನೇಕ ಸುದ್ದಿ ವಾಹಿನಿಗಳು ಎರಡೂ ಸಂಘಗಳ ಸದಸ್ಯರಾಗಿಲ್ಲ ಹಾಗೂ ಕೇಬಲ್ ಮತ್ತು ಟೆಲಿವಿಷನ್ ನೆಟ್‌ವರ್ಕ್ ನಿಯಂತ್ರಣ ಕಾಯ್ದೆಯಡಿ ರೂಪಿಸಲಾದ ಕಾರ್ಯಕ್ರಮ ಸಂಹಿತೆ ಪಾಲಿಸುವುದಕ್ಕೆ ಅವುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಎಲೆಕ್ಟ್ರಾನಿಕ್ ಮಾಧ್ಯಮಗಳ ಪರಿಶೀಲನೆಗೆ ಸಚಿವಾಲಯ ಏಕೆ ವಿನಾಯಿತಿ ನೀಡಿದೆ ಎಂದಿದ್ದ ಪೀಠವು, "ನಾಗರಿಕರು ಪ್ರತಿ ಬಾರಿಯೂ ನ್ಯಾಯಾಲಯಕ್ಕೆ ಏಕೆ ಬರಬೇಕು? ಇದು ಮಾಧ್ಯಮಗಳಿಗೂ ಒಳ್ಳೆಯದಲ್ಲ" ಎಂದು ಹೇಳಿತ್ತು.

ಈ ಹಿಂದಿನ ವಿಚಾರಣೆಗಳ ವೇಳೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ವರದಿಗಳ ಕುರಿತು ನ್ಯಾಯಾಲಯ ಸುದ್ದಿ ವಾಹಿನಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಸಾರ್ವಜನಿಕ ವ್ಯಕ್ತಿಯ ಆತ್ಮಹತ್ಯೆ ಕುರಿತು ವರದಿ ಮಾಡುವಾಗ ಪತ್ರಿಕೋದ್ಯಮದ ಮೂಲಭೂತ ಗುಣ ಮತ್ತು ಶಿಷ್ಟಾಚಾರವನ್ನು ಕಡೆಗಣಿಸಲಾಗಿದೆ ಎಂದು ಮೌಖಿಕವಾಗಿ ನ್ಯಾಯಾಲಯ ಗಮನ ಸೆಳೆದಿತ್ತು. ಸುದ್ದಿವಾಹಿನಿಗಳ ತನಿಖಾ ಪತ್ರಿಕೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಪ್ರತಿಯೊಂದು ತನಿಖೆಯ ಮೇಲ್ವಿಚಾರಣೆ ತನ್ನ ಜವಾಬ್ದಾರಿಯೇ? ವಿವರಗಳನ್ನು ಹೊರಹಾಕುವ ಮೊದಲು ಅಪರಾಧ ದಂಡ ಸಂಹಿತೆಯ ಬಗ್ಗೆ ಏಕೆ ತಮಗೆ ತಾವೇ ಅರಿಯಲಿಲ್ಲ ಎಂದು ಪ್ರಶ್ನಿಸಲಾಗಿತ್ತು.

ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳು ವಿಫಲವಾದರೆ ಆಗ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದು ವಾಹಿನಿಗಳು ವಾದಿಸಿದಾಗ ನ್ಯಾಯಾಲಯ ʼಅದಾಗಲೇ ಹಾನಿ ಸಂಭವಿಸಿರುತ್ತದೆ ಮತ್ತದನ್ನು ಸರಿಪಡಿಸಲಾಗದುʼ ಎಂದು ಆತಂಕ ವ್ಯಕ್ತಪಡಿಸಿತ್ತು.

ವಾದಗಳು ಮುಂದುವರೆದಂತೆ ನ್ಯಾಯಾಲಯ ತನ್ನ ಮುಂದಿರುವ ಪ್ರಕರಣ ಹಿಂದೆಂದೂ ಕಂಡಿಲ್ಲದೇ ಇರುವಂಥದ್ದು. ಹೀಗಾಗಿ ಮಾಧ್ಯಮ ವಿಚಾರಣೆ ನಿಯಂತ್ರಿಸುವ ಮಾರ್ಗಸೂಚಿ ನೀಡುವ ಪರವಾಗಿ ತಾನು ಇರುವುದಾಗಿ ತಿಳಿಸಿತ್ತು.

Related Stories

No stories found.
Kannada Bar & Bench
kannada.barandbench.com