ದೆಹಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಂಜಿತ್ ಕುಮಾರ್ ನಡುವಿನ ಆಸಕ್ತಿಕರ ಸಂಭಾಷಣೆಗೆ ವೇದಿಕೆ ಒದಗಿಸಿತ್ತು.
ವಿಚಾರಣೆಯ ವೇಳೆ ರಂಜಿತ್ ಕುಮಾರ್ ಅವರು “ಮಲಿನ ಗಾಳಿಯು ಬಹುಶಃ ಪಾಕಿಸ್ತಾನದಿಂದ ಬರುತ್ತಿದ್ದು, ಉತ್ತರ ಪ್ರದೇಶವು ತಗ್ಗು ಪ್ರದೇಶದಲ್ಲಿದೆ. ಹೀಗಾಗಿ, ಉತ್ತರ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಮುಚ್ಚುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಮಸ್ಯೆಯಾಗುತ್ತದೆ” ಎಂದರು.
ಇದಕ್ಕೆ ಸಿಜೆಐ ರಮಣ ಅವರು “ಹಾಗಾದರೆ ಪಾಕಿಸ್ತಾನದಲ್ಲಿ ಕಾರ್ಖಾನೆಗಳನ್ನು ಮುಚ್ಚಬೇಕು ಎಂದು ಹೇಳುತ್ತಿದ್ದೀರಾ?” ಎಂದರು.
ರಾಷ್ಟ್ರೀಯ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿ ದೆಹಲಿ ಮೂಲದ 17 ವರ್ಷದ ಆದಿತ್ಯ ದುಬೆ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ಕುತೂಹಲಕರ ಸಂಭಾಷಣೆ ನಡೆಯಿತು.
ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಕೇಂದ್ರಾಡಳಿತ ಪ್ರದೇಶವಾದ ದೆಹಲಿ ರಾಜ್ಯಗಳನ್ನು ಸದರಿ ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ನಿಷೇಧ ಹೇರುವಂತೆ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ಆದೇಶಿಸಿತ್ತು.