ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012ರ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಅಪ್ರಾಪ್ತ ವಯಸ್ಕರು ಗರ್ಭ ಧರಿಸಿರುವುದನ್ನು ವರದಿ ಮಾಡದ ಮತ್ತು ಒಪ್ಪಿಗೆಯಿಲ್ಲದೆ ಗರ್ಭಪಾತ ನಡೆಸಿದ ಆರೋಪ ಹೊತ್ತಿದ್ದ ವೈದ್ಯೆಯೊಬ್ಬರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕೇರಳ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಡಾ ಟಿ ಅಂಬುಜಾಕ್ಷಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಅಪ್ರಾಪ್ತ ವಯಸ್ಕರ ವಿರುದ್ಧದ ಅಪರಾಧಗಳನ್ನು ವರದಿ ಮಾಡದೆ ಇರಲು ನಿರ್ದಿಷ್ಟ ಉದ್ದೇಶ ಅಥವಾ ಲೋಪ ಕಂಡುಬರದೆ ಇದ್ದರೆ ಕಾಯಿದೆಯಡಿ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡದಂತೆ ನ್ಯಾಯಮೂರ್ತಿ ಎ ಬದುರುದ್ದೀನ್ ತನಿಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೋಗಿಗಳ ಜೀವ ಉಳಿಸುವ ಕರ್ತವ್ಯವನ್ನು ವೈದ್ಯರಿಗೆ ನೀಡಲಾಗಿದ್ದು ಅವರು ತಾವು ಮಾಡಿದ್ದ ಪ್ರತಿಜ್ಞೆಯಂತೆ ನಡೆದುಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಪೋಕ್ಸೊ ಕಾಯಿದೆಯ ಸೆಕ್ಷನ್ 19ರ ನೆರವಿನೊಂದಿಗೆ ವೈದ್ಯರನ್ನು ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವಾಗ, ಸಂಗ್ರಹಿಸಿದ ಸಾಕ್ಷ್ಯಗಳ ಬಗ್ಗೆ ತನಿಖಾಧಿಕಾರಿ ವಿವೇಚನೆ ಬಳಸಿ ಅಪರಾಧಗಳನ್ನು ವರದಿ ಮಾಡಲು ನಿರ್ದಿಷ್ಟ ಉದ್ದೇಶ ಅಥವಾ ಲೋಪ ಇತ್ತು ಎಂಬುದನ್ನು ಮೇಲ್ನೋಟಕ್ಕೆ ಕಂಡುಕೊಳ್ಳುವ ಕುರಿತು ಪಕ್ಷಪಾತವಿಲ್ಲದ ಅಭಿಪ್ರಾಯ ರೂಪಿಸಬೇಕು ಎಂದು ನ್ಯಾಯಾಲಯ ವಿವರಿಸಿದೆ.
ಪೋಕ್ಸೊ ಕಾಯಿದೆಯ ಸೆಕ್ಷನ್ 19 ಮತ್ತು 21ರ ಅಡಿಯಲ್ಲಿ ಅಪರಾಧಗಳನ್ನು ವರದಿ ಮಾಡಲು ವಿಫಲವಾದ ವೈದ್ಯರ ವಿರುದ್ಧ ಯಾಂತ್ರಿಕವಾಗಿ ಕ್ರಿಮಿನಲ್ ಪ್ರಕರಣ ಹೂಡುವುದು ವೈದ್ಯರಿಗೆ ಮಾಡುವ ಸಂಪೂರ್ಣ ಅಪಾಯವಾಗಿದ್ದು ಅವರಿಗೆ ಗಮನಾರ್ಹ ಮಾನಸಿಕ ಆಘಾತ ಉಂಟು ಮಾಡುತ್ತದೆ ಮತ್ತು ಅವರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪೀಠ ಎಚ್ಚರಿಕೆ ನೀಡಿತು.
ಸ್ತ್ರೀರೋಗ ತಜ್ಞೆ ವಿರುದ್ಧ ಪೋಕ್ಸೊ ಕಾಯಿದೆಯ ಸೆಕ್ಷನ್ 19 (ಅಪರಾಧಗಳ ವರದಿ) ಮತ್ತು 21 (ವರದಿ ಸಲ್ಲಿಸಲು ವೈಫಲ್ಯ) ಐಪಿಸಿ ಸೆಕ್ಷನ್ 312ರ (ಗರ್ಭಪಾತಕ್ಕೆ ಕಾರಣವಾಗುವುದು) ಮತ್ತು 313 (ಸಮ್ಮತಿಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುವುದು) ಅಡಿ ಆರೋಪ ಮಾಡಲಾಗಿತ್ತು.
ಸಂತ್ರಸ್ತೆಗೆ 18 ವರ್ಷವಾಗಿದ್ದು ವಿವಾಹವಾಗಿದೆ ಎಂದು ಆಕೆಯ ಪೋಷಕರು ತನಗೆ ತಿಳಿಸಿದ್ದು ತನ್ನ ವಿರುದ್ಧದ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ವೈದೈ ನ್ಯಾಯಾಲಯದ ಮೆಟ್ಟಿಲೇರಿದ್ದರು.
ತೀವ್ರ ರಕ್ತಸ್ರಾವ ಮತ್ತು ಗರ್ಭಪಾತವಾಗುವ ಲಕ್ಷಣ ಇದ್ದುದರಿಂದ ಸಂತ್ರಸ್ತೆಯನ್ನು ತನ್ನ ಬಳಿಗೆ ಕರೆತರಲಾಗಿತ್ತು. ಸಂತ್ರಸ್ತೆಯ ಜೀವ ಉಳಿಸುವುದರತ್ತಲೇ ತನ್ನ ಮೊದಲ ಗಮನ ಇತ್ತು. ಆಸ್ಪತ್ರೆಯ ದಾಖಲೆಗಳಲ್ಲಿ ಆಕೆಯ ವಯಸ್ಸು 18 ವರ್ಷ ಎಂದು ದಾಖಲಾಗಿರುವ ಕಾರಣ ಆಕೆಯ ವಯಸ್ಸಿನ ಬಗ್ಗೆ ಅನುಮಾನ ಇರಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂತ್ರಸ್ತೆಯ ತಂದೆ ಲಿಖಿತ ಒಪ್ಪಿಗೆ ನೀಡಿದ್ದರಿಂದ ಆಕೆಯ ಜೀವ ಉಳಿಸಲು ಗರ್ಭಪಾತ ನಡೆಸಿದ್ದಾಗಿ ವೈದ್ಯ ಪ್ರತಿಪಾದಿಸಿದ್ದರು.
ಆದರೆ ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವೈದ್ಯೆಗೆ ತಿಳಿದಿತ್ತು ಮತ್ತು ಪೋಕ್ಸೊ ಕಾಯಿದೆ ಮತ್ತು ಐಪಿಸಿ ಸೆಕ್ಷನ್‌ಗಳನ್ನು ಉಲ್ಲಂಘಿಸಿ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಲಾಗಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಪ್ರಕರಣದ ಡೈರಿ ಮತ್ತು ಸಾಕ್ಷ್ಯವನ್ನು ಪರಿಶೀಲಿಸಿದ ನ್ಯಾಯಾಲಯ, ಆಸ್ಪತ್ರೆಯ ದಾಖಲೆಗಳಲ್ಲಿ ಸಂತ್ರಸ್ತೆಯ ವಯಸ್ಸು ಸೇರಿದಂತೆ ಲಭ್ಯವಿರುವ ಎಲ್ಲಾ ದಾಖಲೆಗಳು ಆಕೆಗೆ 18 ವರ್ಷ ವಯಸ್ಸಾಗಿದೆ ಎಂದು ತಿಳಿಸಿತು. ಹೀಗಾಗಿ ಸಂತ್ರಸ್ತೆ ಅಪ್ರಾಪ್ತ ವಯಸ್ಕಳು ಎಂದು ವೈದ್ಯರಿಗೆ ತಿಳಿದಿತ್ತುಎಂಬ ಬಗ್ಗೆ ಅಥವಾ ಆ ಅರಿವಿನ ಬಗ್ಗೆ ಸಾಕ್ಷ್ಯಗಳು ಇಲ್ಲದಿದ್ದಾಗ ವೈದ್ಯೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಸಂತ್ರಸ್ತೆಯ ತಂದೆ ವೈದ್ಯಕೀಯ ಪ್ರಕ್ರಿಯೆಗೆ ಲಿಖಿತ ಒಪ್ಪಿಗೆ ನೀಡಿದ ನಂತರ ಸಂತ್ರಸ್ತೆಯ ಜೀವ ಉಳಿಸಲು ಗರ್ಭಪಾತ ಮಾಡಿರುವುದುರಿಂದ ವೈದ್ಯೆ ವಿರುದ್ಧ ಐಪಿಸಿ ಸೆಕ್ಷನ್ 312 ಮತ್ತು 313 ರ ಅಡಿಯಲ್ಲಿ ಮಾಡಲಾದ ಆರೋಪಗಳು ಕೂಡ ನಿಲ್ಲುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಅಂತೆಯೇ ವೈದ್ಯೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಅದು ಅಗತ್ಯ ಕ್ರಮಕ್ಕಾಗಿ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯದ ಆದೇಶದ ಪ್ರತಿ ರವಾನಿಸಲು ರಿಜಿಸ್ಟ್ರಿಗೆ ಸೂಚಿಸಿತು.