ಸುದ್ದಿಗಳು

ʼವಿದೇಶಿ ಕಾನೂನು ಸಂಸ್ಥೆಗಳಿಗೆ ಮಣೆ ಹಾಕುತ್ತಿರುವುದು ನಮ್ಮ ಸಂಸ್ಥೆಗಳನ್ನು ನಾಶ ಮಾಡಲೆಂದೇ?ʼ ಎಸ್ಐಎಲ್ಎಫ್ ಕಿಡಿ

ತಾನು ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶವನ್ನು ಬೆಂಬಲಿಸುತ್ತಿದ್ದರೂ ಬದಲಾವಣೆ ಕಾರ್ಯರೂಪಕ್ಕೆ ತರುತ್ತಿರುವ ವಿಧಾನದ ಬಗ್ಗೆ ತನಗೆ ಆತಂಕ ಇದೆ ಎಂದು ಅದು ಪುನರುಚ್ಚರಿಸಿದೆ.

Bar & Bench

ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದಲ್ಲಿ ಪ್ರಾಕ್ಟೀಸ್‌ ಮಾಡಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ತನ್ನ ವಿರೋಧದ ಬಗ್ಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ತನ್ನ ವಿರುದ್ಧ ಮಾಡಿರುವ ಆಪಾದನೆಗಳಿಗೆ ಭಾರತೀಯ ಕಾನೂನು ಸಂಸ್ಥೆಗಳ ಸೊಸೈಟಿ (ಎಸ್‌ಐಎಲ್‌ಎಫ್‌) ಶನಿವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ  ಬರೆದ ಪತ್ರದಲ್ಲಿ ದೇಶದಲ್ಲಿ ಕಾರ್ಪೊರೇಟ್, ವಹಿವಾಟು ಮತ್ತು ಮಧ್ಯಸ್ಥಿಕೆ ಕೆಲಸಗಳನ್ನು ಭಾರತೀಯ ಕಾನೂನು ಸಂಸ್ಥೆಗಳ ಒಂದು ಸಣ್ಣ ಗುಂಪು ಏಕಸ್ವಾಮ್ಯಗೊಳಿಸಿದೆ ಎಂಬ ಬಿಸಿಐ ಆರೋಪ ತರ್ಕರಹಿತವಾದುದು ವಾಸ್ತವಿಕವಾಗಿ ಲೋಪದಿಂದ ಕೂಡಿದೆ ಎಂದು ಸೊಸೈಟಿ ಅಧ್ಯಕ್ಷ ಲಲಿತ್‌ ಭಾಸಿನ್‌ ಕಿಡಿಕಾರಿದ್ದಾರೆ.

"ವಿದೇಶಿ ಕಾನೂನು ಸಂಸ್ಥೆಗಳಿಗೆ ಮಣೆ ಹಾಕುತ್ತಿರುವುದು ನಮ್ಮ ಸಂಸ್ಥೆಗಳನ್ನು ನಾಶ ಮಾಡಲೆಂದೇ?" ಎಂದು ಎಸ್ಐಎಲ್ಎಫ್ ಕಿಡಿಕಾರಿದೆ.

ಪತ್ರದ ಪ್ರಮುಖಾಂಶಗಳು

  • ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶದಿಂದ ದೊಡ್ಡ ಕಾನೂನು ಸಂಸ್ಥೆಗಳ ಏಕಸ್ವಾಮ್ಯ ಇಲ್ಲವಾಗಿ  ಸಣ್ಣ ಸಂಸ್ಥೆಗಳಿಗೆ ಅನುಕೂಲಕರವಾಗಲಿದೆ ಎಂಬ ಬಿಸಿಐ ವಾದ ಅಸಮರ್ಥನೀಯ.  

  • ಪ್ರಸ್ತುತ ಯಾವುದೇ ಏಕಸ್ವಾಮ್ಯ ಇಲ್ಲ. ಯುವ ಮತ್ತು ಉದಯೋನ್ಮುಖ ಕಾನೂನು ಸಂಸ್ಥೆಗಳು ಸಹ ದೊಡ್ಡ ಕಾರ್ಪೊರೇಟ್ ಮತ್ತು ವಹಿವಾಟಿನ ಕಾನೂನು ಕಾರ್ಯದಲ್ಲಿ ತೊಡಗಿವೆ.

  •  ತಾನು ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶವನ್ನು ಬೆಂಬಲಿಸುತ್ತೇನೆ, ಆದರೆ ಬದಲಾವಣೆ ಕಾರ್ಯರೂಪಕ್ಕೆ ತರುತ್ತಿರುವ ವಿಧಾನದ ಬಗ್ಗೆ ಆತಂಕ ಇದೆ

  • ದೊಡ್ಡ ಕಾನೂನು ಸಂಸ್ಥೆಗಳ ಮೇಲೆ ದಾಳಿ ಮಾಡುವುದು ದುರದೃಷ್ಟಕರ. ತಮ್ಮ ಅರ್ಹತೆ, ಕಠಿಣ ಪರಿಶ್ರಮ, ಜ್ಞಾನ, ಅನುಭವ ಮತ್ತು ಪರಿಣತಿಯಿಂದ ಈ ಸಂಸ್ಥೆಗಳು ಆ ಸ್ಥಾನವನ್ನು ಗಳಿಸಿದ್ದು ಭಾರತೀಯ ಕಾನೂನು ವೃತ್ತಿಯನ್ನು ಆಧುನೀಕರಿಸಿವೆ.

  • ದೊಡ್ಡದೇ ಇರಲಿ, ಚಿಕ್ಕವೇ ಇರಲಿ ಭಾರತೀಯ ಕಾನೂನು ಸಂಸ್ಥೆಗಳ ಪಾತ್ರವನ್ನು ಬಿಸಿಐ ಗುರುತಿಸಬೇಕು.

  • ಭಾರತೀಯ ಕಾನೂನು ಸಂಸ್ಥೆಗಳನ್ನೇ ಜಾಗತಿಕ ಸಂಸ್ಥೆಗಳನ್ನಾಗಿ ಮಾಡುವ ಕನಸು ಈಡೇರಿಸಬೇಕಿದೆ.  

  • ದೊಡ್ಡ ಅಥವಾ ಏಕಸ್ವಾಮ್ಯ ಎಂಬ ಆರೋಪ ಮಾಡಿ ಕಾನೂನು ಸಂಸ್ಥೆಗಳನ್ನು ಕೆಡವಬೇಡಿ ದೊಡ್ಡ ಎಂಬುದು ಸಾಪೇಕ್ಷ ಪದವಾಗಿದೆ.

  • ಕಾನೂನು ಸೇವಾ ಮಾರುಕಟ್ಟೆಯನ್ನು ಮುಕ್ತಗೊಳಿಸುವ ನಿರ್ಧಾರವನ್ನು ತಾನು ಸ್ವಾಗತಿಸುವುದಾಗಿ ಹೇಳಿರುವ ಎಸ್‌ಐಎಲ್‌ಎಫ್‌, ಆದರೆ ಅದನ್ನು ಹಂತಹಂತವಾಗಿ, ನಿಯಂತ್ರಿತವಾಗಿ ಮತ್ತು ಅನುಕ್ರಮವಾಗಿ ಮಾಡಬೇಕು ಎಂದು ಆಗ್ರಹಿಸಿದೆ.

  • ಇದೇ ವೇಳೆ ಎಸ್‌ಐಎಲ್‌ಎಫ್‌, ದೇಶದ ಲೆಕ್ಕಪರಿಶೋಧನಾ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ಗಮನಸೆಳೆದಿದ್ದು, ಹೇಗೆ ಆ ಕ್ಷೇತ್ರದಲ್ಲಿ ಕೇವಲ ವಿದೇಶಿ ಮೂಲದ ನಾಲ್ಕು ಸಂಸ್ಥೆಗಳೇ ಪ್ರಾಬಲ್ಯ ಸಾಧಿಸಿವೆ ಎನ್ನುವುದನ್ನು ತಿಳಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಐ ಮತ್ತು ಸೊಸೈಟಿ ನಡುವೆ ಕಳೆದ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಲೇ ಇದೆ. ʼಬಾರ್‌ ಅಂಡ್‌ ಬೆಂಚ್‌ʼಗೆ ನೀಡಿದ್ದ ಸಂದರ್ಶನವೊಂದರಲ್ಲಿ ಸೊಸೈಟಿಯ ಅಧ್ಯಕ್ಷ ಲಲಿತ್‌ ಭಾಸಿನ್‌ ಅವರು ಬಿಸಿಐನ ನಿರ್ಧಾರ ಅಕಾಲಿಕ ಎಂದಿದ್ದರು. ಆದರೆ ತಾವು ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶ ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದರು.

ಇದೇ ವೇಳೆ ಭಾರತದ ಎಲ್ಲಾ ಕಾನೂನು ಸಂಸ್ಥೆಗಳು ಮತ್ತು ಅವುಗಳ ವಕೀಲರ ನೋಂದಣಿಗಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಅಖಿಲ ಭಾರತ ಮಟ್ಟದ ಸಂಸ್ಥೆ ಸ್ಥಾಪನೆ ಮಾಡುವ ಇಂಗಿತವನ್ನು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ವ್ಯಕ್ತಪಡಿಸಿ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. 

[ಪತ್ರದ ಪ್ರತಿ]

SILF_response_to_BCI.pdf
Preview