
ಭಾರತದ ಎಲ್ಲಾ ಕಾನೂನು ಸಂಸ್ಥೆಗಳು ಮತ್ತು ಅವುಗಳ ವಕೀಲರ ನೋಂದಣಿಗಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಅಖಿಲ ಭಾರತ ಮಟ್ಟದ ಸಂಸ್ಥೆ ಸ್ಥಾಪನೆ ಮಾಡುವ ಇಂಗಿತವನ್ನು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮಂಗಳವಾರ ವ್ಯಕ್ತಪಡಿಸಿದೆ.
ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಅವಕಾಶ ನೀಡುವ ಬಿಸಿಐ ಉದ್ದೇಶವನ್ನು ಭಾರತೀಯ ಕಾನೂನು ಸಂಸ್ಥೆಗಳ ಸೊಸೈಟಿ (ಎಸ್ಐಎಲ್ಎಫ್) ಸಾರ್ವಜನಿಕವಾಗಿ ವಿರೋಧಿಸುತ್ತಿರುವುದನ್ನು ಖಂಡಿಸಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ನಿರ್ಧಾರ ತಿಳಿಸಲಾಗಿದೆ.
ಎಸ್ಐಎಲ್ಎಫ್ ಭಾರತದ ದೊಡ್ಡ ಕಾನೂನು ಸಂಸ್ಥೆಗಳ ಹಿತಾಸಕ್ತಿಯನ್ನಷ್ಟೇ ಕಾಯುತ್ತಿದೆ ಎಂದು ಬಿಸಿಐ ಕಟು ಶಬ್ದಗಳಲ್ಲಿ ನುಡಿದಿತ್ತು. ಭಾರತದ ಉನ್ನತ ಕಾನೂನು ಸಂಸ್ಥೆಗಳ ಸಾಮೂಹಿಕ ಒಕ್ಕೂಟವಾದ ಎಸ್‌ಐಎಲ್‌ಎಫ್, ಭಾರತದ ಕಾನೂನು ಕ್ಷೇತ್ರವನ್ನು ಉದಾರೀಕರಣಗೊಳಿಸುವ ಬಿಸಿಐನ ಉದ್ದೇಶ ದೋಷಪೂರಿತ ಎಂದಿತ್ತು. ಬಾರ್ ಅಂಡ್ ಬೆಂಚ್‌ಗೆ ನೀಡಿದ ಸಂದರ್ಶನದಲ್ಲಿ ಸೊಸೈಟಿಯ ಅಧ್ಯಕ್ಷ ಲಲಿತ್ ಭಾಸಿನ್ ಅವರು ಬಿಸಿಐನ ನಿರ್ಧಾರ ಅಕಾಲಿಕ ಎಂದಿದ್ದರು. ಆದರೆ ತಾವು ವಿದೇಶಿ ಕಾನೂನು ಸಂಸ್ಥೆಗಳ ಪ್ರವೇಶ ಬೆಂಬಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದರು.
ಕಳೆದ ಮೇ ತಿಂಗಳಲ್ಲಿ ಹೊರಡಿಸಲಾದ ತಿದ್ದುಪಡಿ ನಿಯಮಗಳ ಕುರಿತು ಸಲಹೆ ನೀಡಲು ಎಸ್‌ಐಎಲ್‌ಎಫ್ ಇತ್ತೀಚೆಗೆ ಶಾರ್ದುಲ್ ಅಮರ್‌ಚಂದ್ ಮಂಗಲದಾಸ್ ಕಾನೂನು ಸಂಸ್ಥೆಯ ಅಧ್ಯಕ್ಷ ಶಾರ್ದುಲ್ ಶ್ರಾಫ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.