Protest at NLSIU 
ಸುದ್ದಿಗಳು

ಸ್ಥಳೀಯ ಮೀಸಲಾತಿ ನೀತಿ ಜಾರಿಗೊಳಿಸದ ಎನ್‌ಎಲ್‌ಎಸ್‌ಐಯು ವಿರುದ್ಧ ವಕೀಲರು, ಸಂಘಟನೆಗಳಿಂದ ಪ್ರತಿಭಟನೆ; ಸಿಜೆಐಗೆ ಪತ್ರ

ಎನ್‌ಎಲ್‌ಎಸ್‌ಐಯು ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಅವರು “ಸದರಿ ವಿಚಾರವನ್ನು ಕಾರ್ಯಕಾರಿ ಸಮಿತಿ ಸಭೆ ಮುಂದೆ ಇಟ್ಟು ಚರ್ಚಿಸಿ, ತಪ್ಪನ್ನು ಸರಿಪಡಿಸಲಾಗುವುದು” ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕಳೆದ ಎರಡು ವರ್ಷಗಳಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀತಿ ಜಾರಿಗೊಳಿಸಿಲ್ಲದಿರುವುದನ್ನು ವಿರೋಧಿಸಿ ವಕೀಲರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ವಿಶ್ವವಿದ್ಯಾಲಯದ ಎದುರು ಶನಿವಾರ ಪ್ರತಿಭಟನೆ ನಡೆಸಿದವು.

ಬೆಂಗಳೂರು ವಕೀಲರ ಸಂಘದ (ಎಎಬಿ) ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತ ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ನಗರ ಘಟಕ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಎದುರುಗೊಂಡ ಎನ್‌ಎಲ್‌ಎಸ್‌ಐಯು ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಅವರು “ಸದರಿ ವಿಚಾರವನ್ನು ಕಾರ್ಯಕಾರಿ ಸಮಿತಿ ಸಭೆ ಮುಂದೆ ಇಟ್ಟು ಚರ್ಚಿಸಿ, ತಪ್ಪನ್ನು ಸರಿಪಡಿಸಲಾಗುವುದು” ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಬರೆದಿರುವ ಪತ್ರವನ್ನು ಎನ್‌ಎಲ್‌ಎಸ್‌ಐಯು ಕುಲಪತಿಗೆ ನೀಡಿದರು. ಪತ್ರದಲ್ಲಿ “ಅಖಿಲ ಭಾರತ ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸ್ಥಳೀಯ ವಿಭಾಗದಲ್ಲಿ ಸೇರ್ಪಡೆ ಮಾಡಬಾರದು. ಮುಂದಿನ ಶೈಕ್ಷಣಿಕ ವರ್ಷ (2023ರ ಜುಲೈ) ಆರಂಭವಾಗಲು ಇನ್ನೂ ಸಾಕಷ್ಟು ಕಾಲಾವಕಾಶವಿದ್ದು, ಪ್ರವೇಶಾತಿ ಪ್ರಕ್ರಿಯೆಯನ್ನು ಅಮಾನತಿನಲ್ಲಿಡಬೇಕು. ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಮೀಸಲಾತಿ ನೀತಿ ಜಾರಿ ಮಾಡಲು ಎನ್‌ಎಲ್‌ಎಸ್‌ಐಯು ಕುಲಪತಿಗೆ ನಿರ್ದೇಶಿಸಬೇಕು” ಎಂದು ಕೋರಲಾಗಿದೆ.

“ಅಖಿಲ ಭಾರತ ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ನೀತಿ ಅನ್ವಯಿಸಬಾರದು. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಭಾಗವಾಗಿರುವ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌, ವಿಶಾಖಪಟ್ಟಣಂ ಡಿಎಸ್‌ಎನ್‌ಎಲ್‌ಯು, ಕೋಲ್ಕತ್ತಾದ ಡಬ್ಲುಬಿಎನ್‌ಯುಜೆಎಸ್‌, ರಾಯಪುರದ ಎಚ್‌ಎನ್‌ಎಲ್‌ಯು, ತಿರುಚನಾಳ್ಳಿಯ ಟಿಎನ್‌ಎನ್‌ಎಲ್‌ಯು ಸಂಬಂಧಿತ ರಾಜ್ಯಗಳ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ನೀತಿ ಜಾರಿಗೊಳಿಸಿವೆ. ಇದೇ ಮಾದರಿಯಲ್ಲಿ ಕರ್ನಾಟದಲ್ಲೂ ಸ್ಥಳೀಯ ಮೀಸಲಾತಿ ನೀತಿ ಜಾರಿಯಾಗಬೇಕು. ಅರ್ಹತೆಯ ಆಧಾರದಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಮೇಲೆ ಉಲ್ಲೇಖಿಸಿದ ವಿಶ್ವವಿದ್ಯಾಲಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಕರ್ನಾಟದ ವಿದ್ಯಾರ್ಥಿಗಳು ನಮ್ಮ ರಾಜ್ಯ ವಕೀಲರ ಪರಿಷತ್‌, ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳನ್ನು ಸಂಪನ್ನಗೊಳಿಸಿದ್ದಾರೆ. ಅನಾದರ ಧೋರಣೆಯ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೆ ದೇಶದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರವೇಶ ನಿರಾಕರಣೆಯು ಅಸಮರ್ಥನೀಯವಾಗಿದ್ದು, ಅದನ್ನು ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಚಾರಮಾಡಲಾಗಿದೆ. 2022ರ ಡಿಸೆಂಬರ್‌ 29ರಂದು ರಾಜ್ಯ ಕಾನೂನು ಸಚಿವರು ಕುಲಪತಿಗೆ ಪತ್ರ ಬರೆದು ಸ್ಥಳೀಯ ಮೀಸಲಾತಿ ನೀತಿಗೆ ಜಾರಿಗೆ ಆಗ್ರಹಿಸಿದ್ದರೂ ಅದಕ್ಕೆ ಅಸಮರ್ಥನೀಯ ಕಾರಣ ನೀಡಿದ್ದು, ಮೀಸಲಾತಿ ವಿರೋಧಿ ನಿಲುವಿಗೆ ಸಾಮಾನ್ಯ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿದೆ” ಎಂದೂ ಪತ್ರದಲ್ಲಿ ಆಕ್ಷೇಪಿಸಲಾಗಿದೆ.