A1
ಸುದ್ದಿಗಳು

ಮಾಂಸಾಹಾರ ರವಾನೆ: ವಿದ್ಯಾರ್ಥಿ ಟ್ವೀಟ್‌ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಹೂಡಿದ್ದ ದಾವೆ ಹಿಂಪಡೆದ ಡೋಮಿನೋಸ್‌

ಕಂಪನಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್ಗಳನ್ನು ಅಳಿಸಲು ಒಪ್ಪಿಕೊಂಡ ವಿದ್ಯಾರ್ಥಿಗೆ ಪರಿಹಾರ ಮೊತ್ತ ಪಾವತಿಸಲಾಗಿದೆ ಎಂದು ಕಂಪನಿ ಪರ ವಕೀಲರು ಪೀಠಕ್ಕೆ ತಿಳಿಸಿದರು.

Bar & Bench

ಸಸ್ಯಾಹಾರದ ಬದಲಿಗೆ ಮಾಂಸಾಹಾರ ನೀಡಿದ್ದಕ್ಕೆ ಸಂಬಂಧಿಸಿದಂತೆ ಪಿಜ್ಜಾ ಮಾರಾಟ ಕಂಪೆನಿ ಡೊಮಿನೋಸ್‌ನ ಹಿರಿಯ ಅಧಿಕಾರಿಗಳ ಫೋನ್‌ ನಂಬರ್‌ಗಳನ್ನು ಟ್ವೀಟ್‌ ಮಾಡಿ ಆಕ್ಷೇಪಿಸಿದ್ದ ವಿದ್ಯಾರ್ಥಿ ವಿರುದ್ಧ ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಂಪೆನಿ ಹಿಂಪಡೆದಿದೆ. [ಜುಬಿಲೆಂಟ್ ಫುಡ್‌ವರ್ಕ್ಸ್ ಲಿಮಿಟೆಡ್ ಮತ್ತು ಪ್ರತೀಕ್ ವಿನಿತ್ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನುಪ್ ಭಂಭಾನಿ ಅವರು ವಿದ್ಯಾರ್ಥಿಯ ಟ್ವಿಟರ್‌ ಖಾತೆಯನ್ನು ಮತ್ತೆ ಸ್ಥಾಪಿಸಲು ಹಾಗೂ ಅಗತ್ಯವಿದ್ದರೆ ಸಂಬಂಧಿಸಿದ ಟ್ವೀಟ್‌ಗಳನ್ನು ತೆಗೆದುಹಾಕಲು ಟ್ವಿಟರ್‌ಗೆ ನಿರ್ದೇಶಿಸಿದರು.

ವಿನಿತ್ ಕಳೆದ ವರ್ಷ ಜುಲೈನಲ್ಲಿ ಮುಂಬೈನ ಆಂಟೊಪ್ ಹಿಲ್‌ನಲ್ಲಿರುವ ತಮ್ಮ ನಿವಾಸದಿಂದ ಊಟಕ್ಕೆ ಆರ್ಡರ್ ಮಾಡಿದ್ದರು. ವಿನಿತ್‌ಗೆ ವಿತರಿಸಲಾದ ಮೂರು ಪಿಜ್ಜಾಗಳಲ್ಲಿ ಒಂದು ಮಾಂಸಾಹಾರವಾಗಿತ್ತು. ಆದರೆ ಅವರು ಅದನ್ನು ಆರ್ಡರ್‌ ಮಾಡಿರಲಿಲ್ಲ. ಬಳಿಕ ಟ್ವಿಟರ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಪ್ರತೀಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಮತ್ತು ಔಟ್‌ಲೆಟ್‌ನ ಮುಖ್ಯ ವ್ಯಾಪಾರ ಅಧಿಕಾರಿ (ಸಿಬಿಒ) ಅವರ ಫೋನ್‌ ಸಂಖ್ಯೆಗಳನ್ನು ಟ್ವೀಟ್‌ ಮಾಡಿದ್ದರು. ಹೀಗೆ ಮಾಡುವುದರಿಂದ ಉಳಿದ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂಬುದು ಪ್ರತೀಕ್‌ ನಿಲುವಾಗಿತ್ತು.

ಈ ಬಗ್ಗೆ ಡೋಮಿನೋಸ್‌ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ವಿದ್ಯಾರ್ಥಿಗೆ ಪರಿಹಾರ ನೀಡಲು ಕಂಪೆನಿ ಒಪ್ಪಿತ್ತು. ಕಂಪನಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್‌ಗಳನ್ನು ಅಳಿಸಲು ಒಪ್ಪಿಕೊಂಡ ವಿದ್ಯಾರ್ಥಿಗೆ ಪರಿಹಾರ ಮೊತ್ತ ಪಾವತಿಸಲಾಗಿದೆ ಎಂದು ಕಂಪನಿ ಪರ ವಕೀಲರು ಪೀಠಕ್ಕೆ ತಿಳಿಸಿದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Jubilant_Foodworks_Ltd__vs_Pratik_Vinit.pdf
Preview