Justice M Nagaprasanna and Karnataka HC 
ಸುದ್ದಿಗಳು

ಪಾವತಿಯಾಗದ ಹಾಲಿನ ಬಾಕಿ: ರೈತರು ದೂರು ನೀಡಿಲ್ಲ ಎಂಬುದರ ಅನುಕೂಲ ಪಡೆಯಬೇಡಿ ಎಂದು ಕಿವಿಹಿಂಡಿದ ಹೈಕೋರ್ಟ್‌

ಇದು ಎರಡು, ಮೂರು ಕೋಟಿ ಹಣ ವರ್ಗಾವಣೆ ಪ್ರಕರಣವಾಗಿದ್ದರೆ ಖಂಡಿತಾ ವಜಾ ಮಾಡುತ್ತಿದ್ದೆ. ದೊಡ್ಡ ವ್ಯಕ್ತಿಗಳು ದಾವೆ ನಡೆಸಲು ಸಮರ್ಥರಾಗಿರುತ್ತಾರೆ. ಆದರೆ, ಈ ಜನರಿಂದ ಅದು ಸಾಧ್ಯವಿಲ್ಲ ಎಂದ ನ್ಯಾಯಾಲಯ.

Bar & Bench

ರೈತರಿಂದ ಹಾಲು ಖರೀದಿಸಿ ಅವರಿಗೆ ಬಾಕಿ ಪಾವತಿಸಲು ಮೀನಮೇಷ ಎಣಿಸುತ್ತಿರುವ ಕಂಪೆನಿಯೊಂದರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ “ಬಡ ವ್ಯಕ್ತಿ ಅಥವಾ ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ರೈತರು ದೂರು ನೀಡಿಲ್ಲ ಎಂಬುದರ ಅನುಕೂಲ ಪಡೆಯಬೇಡಿ” ಎಂದು ಖಂಡತುಂಡವಾಗಿ ಹೇಳಿದೆ.

ಬೆಂಗಳೂರಿನ ಆಕಾಶ್‌ ಅಗರ್ವಾಲ್‌ ಮತ್ತು ಇಬ್ರಾಹಿಂ ಅಲಿ ಅನ್ಸರ್‌ ಅವರು ತಮ್ಮ ವಿರುದ್ಧ ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮಂಗಳವಾರ ನಿರಾಕರಿಸಿದೆ.

“ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ಮುಕ್ತಗೊಳಿಸಲು ಕೋರಿ ಅರ್ಜಿ ಸಲ್ಲಿಸಬಹುದು. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಆದೇಶಿಸಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ರೈತರಿಂದ ಹಾಲು ಖರೀದಿಸಲಾಗಿದೆ ಎಂದು ದೂರು ಅಥವಾ ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ. ಕಂಪೆನಿಯು ದಿವಾಳಿಯಾಗಿದ್ದು, ಈ ಸಂಬಂಧದ ಪ್ರಕರಣ ಎನ್‌ಸಿಎಲ್‌ಟಿಯಲ್ಲಿ ಬಾಕಿ ಇದೆ. ನಾವು ನೀಡಿದ್ದ ಚೆಕ್‌ ಬೌನ್ಸ್‌ ಆಗಿರುವುದರಿಂದ ಹಾಲಿ ನಮ್ಮ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ರೈತರು ದೂರುದಾರರಲ್ಲ. ಪ್ರಕರಣ ರದ್ದುಪಡಿಸಬೇಕು” ಎಂದರು.

ದೂರುದಾರರ ಪರ ವಕೀಲರು “ಬ್ಯಾಂಗರ್‌ ಟೆಕ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕರಾದ ಅರ್ಜಿದಾರರಿಗೆ ರೈತರಿಗೆ ಪಾವತಿಸಬೇಕಾದ 17 ಲಕ್ಷ ರೂಪಾಯಿ ಕುರಿತು ಇಮೇಲ್‌ ಕಳುಹಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಇದೆಲ್ಲವನ್ನೂ ಆಲಿಸಿದ ಪೀಠವು “ರೈತರಿಗೆ ಬಾಕಿ ಪಾವತಿಯಾಗಬೇಕಿರುವ ಪ್ರಕರಣದಲ್ಲಿ ವಂಚನೆ ಪ್ರಕರಣವನ್ನು ಖಂಡಿತವಾಗಿಯೂ ವಜಾ ಮಾಡುವುದಿಲ್ಲ. ಬಡ ವ್ಯಕ್ತಿ ಅಥವಾ ರೈತರಿಗೆ ಅನ್ಯಾಯವಾಗುವುದಕ್ಕೆ ಅನುಮತಿಸುವುದಿಲ್ಲ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 420 ಖಂಡಿತಾ ಅನ್ವಯಿಸುವುದಿಲ್ಲ. ಆದರೂ ಅರ್ಜಿಯನ್ನು ವಜಾ ಮಾಡುತ್ತೇನೆ. ರೈತರಿಗೆ ಅನ್ಯಾಯ ಮಾಡಬೇಡಿ. ಇದು ಎರಡು ಮೂರು ಕೋಟಿ ರೂಪಾಯಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣವಾಗಿದ್ದರೆ ಖಂಡಿತಾ ವಜಾ ಮಾಡುತ್ತಿದ್ದೆ. ದೊಡ್ಡ ವ್ಯಕ್ತಿಗಳು ದಾವೆ ನಡೆಸಲು ಸಮರ್ಥರಾಗಿರುತ್ತಾರೆ. ಆದರೆ, ಈ ಜನರಿಂದ ಅದು ಸಾಧ್ಯವಾಗುವುದಿಲ್ಲ. ಯಾಕೆ ರೈತರು ದೂರು ನೀಡಿಲ್ಲ ಅಂದರೆ ಅದನ್ನು ಅವರಿಂದ ನಡೆಸಲಾಗದು. ರೈತರು ದೂರು ನೀಡಿಲ್ಲ ಎಂಬುದರ ಅನುಕೂಲ ಪಡೆಯಬೇಡಿ” ಎಂದು ಅರ್ಜಿದಾರರಿಗೆ ಬಿಸಿ ಮುಟ್ಟಿಸಿತು.

ಮುಂದುವರಿದು, “ನ್ಯಾಯಾಲಯದ ಮೆಟ್ಟಿಲೇರಲಾಗದ ವ್ಯಕ್ತಿಯು ಕಂಪೆನಿಯ ವಿರುದ್ಧ ದಾವೆ ಹೂಡಲಾಗದು. ಏಕೆಂದರೆ ದಾವೆಯನ್ನು ನಡೆಸುವ ಶಕ್ತಿ ಅವರಿಗೆ ಇರುವುದಿಲ್ಲ. ಇಲ್ಲಿ ಕಂಪೆನಿ ಮುಂದೆ ಬಂದಿದೆ. ರೈತರಿಂದ ಹಾಲು ಖರೀದಿಸಿರುವುದರಿಂದ ಅವರಿಗೆ ಹಣ ಪಾವತಿಸಬಾರದೇ? ಹಾಲು ಆಕಾಶದಿಂದ ಬರುವುದಿಲ್ಲ” ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೌಖಿಕವಾಗಿ ಪೀಠವು ಅತೃಪ್ತಿ ವ್ಯಕ್ತಪಡಿಸಿತು.