ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ: ಹೈಕೋರ್ಟ್‌

“ಶ್ರೀಮಂತರು ಕೋಟ್ಯಂತರ ರೂಪಾಯಿ ವಸೂಲಿಗೆ ಅರ್ಜಿ ಹಾಕುತ್ತಾರಲ್ಲ. ಅದರಲ್ಲಿ ಬೇಕಾದರೆ ತಡೆ ನೀಡುತ್ತೇನೆ. ಏಕೆಂದರೆ ಅದರಲ್ಲಿ ಕ್ರಿಮಿನಲ್‌ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯಾಗುತ್ತದೆ. ಇಂಥ ಪ್ರಕರಣದಲ್ಲಿ ತಡೆ ನೀಡುವುದಿಲ್ಲ” ಎಂದ ಹೈಕೋರ್ಟ್‌.
Tomato & Karnataka HC
Tomato & Karnataka HC
Published on

“ರೈತರ ಬದುಕಿನ ಜೊತೆ ಆಟವಾಡುವುದಕ್ಕೆ ಅನುಮತಿಸುವುದಿಲ್ಲ. ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಖಂಡಾತುಂಡವಾಗಿ ಮೌಖಿಕವಾಗಿ ಹೇಳಿತು.

ಕೋವಿಡ್‌ ಸಂದರ್ಭದಲ್ಲಿ ಟೊಮೆಟೊ ಖರೀದಿಸಿ ರೈತರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕೋಲಾರದ ಮೆಹಬೂಬ್‌ ಪಾಷಾ ಮತ್ತು ಮುಬಾರಕ್‌ ಪಾಷಾ ಅಲಿಯಾಸ್‌ ಆಯಿನ್‌ ಖಾನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna and Karnataka HC
Justice M Nagaprasanna and Karnataka HC

ಅರ್ಜಿದಾರರ ಪರ ವಕೀಲೆ “ಅರ್ಜಿದಾರರು ತರಕಾರಿ ಮಾರಾಟಗಾರರಾಗಿದ್ದು, ಕೋವಿಡ್‌ ಸಂದರ್ಭದಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಹೀಗಾಗಿದೆ... ಟೊಮೆಟೊ ಕೊಳೆತದ್ದರಿಂದ ಅವು ಮಾರಾಟವಾಗಿಲ್ಲ. ಮಧ್ಯವರ್ತಿಗಳು ಸಹ ರೈತರನ್ನು ದಾರಿ ತಪ್ಪಿಸಿದ್ದಾರೆ. ನಮ್ಮ ವಿರುದ್ಧ ನಕಲಿ ದೂರು ದಾಖಲಿಸಲಾಗಿದೆ. ಅದನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಆಗ ಪೀಠವು “ಟೊಮೆಟೊ ತೆಗೆದುಕೊಂಡು ರೈತರಿಗೆ ದುಡ್ಡು ಕೊಡಲಿಲ್ಲ ಎಂದರೆ ಹೇಗೆ? ಬಡ ರೈತರಿಗೆ ನೀವು ಹೇಗೆ ವಂಚಿಸುತ್ತೀರಿ? ಕೋವಿಡ್‌ ಸಂದರ್ಭವಾಗಲಿ, ಯಾವುದೇ ಸಂದರ್ಭವಾಗಲಿ.. ನೀವು ಟೊಮೆಟೊ ತೆಗೆದುಕೊಂಡಿದ್ದೀರಲ್ಲವೇ? ರೈತರಿಂದ ಟೊಮೆಟೊ ಖರೀದಿಸಿ, ಅದು ಮಾರಾಟವಾಗಲಿಲ್ಲ ಎಂದು ನೀವು ರೈತರನ್ನು ವಾಪಸ್‌ ತೆಗೆದುಕೊಳ್ಳಿ ಎಂದು ಹೇಳಲಾಗುತ್ತದೆಯೇ? ಏನು ಇದರ ಅರ್ಥ? ಟೊಮೆಟೊ ಬದಲು ಬೇರೆ ಕೊಡಿ ಎಂದು ಹೇಳಲು ಇದು ವಿನಿಮಯವೇ? ಅರ್ಜಿದಾರರಿಗೆ ಟೊಮೆಟೊ ಮಾರಾಟ ಮಾಡಿರುವವರು ರೈತರಲ್ಲಾ ಎಂದಿಟ್ಟುಕೊಳ್ಳೋಣ. ಅರ್ಜಿದಾರರಿಗೆ ಟೊಮೆಟೊ ಮಾರಾಟ ಮಾಡಿರುವವರು ಅದನ್ನು ಎಲ್ಲಿ ಖರೀದಿಸಿರುತ್ತಾರೆ? ಅಂತಿಮವಾಗಿ ರೈತರ ಹೊಟ್ಟೆಗೇ ತಾನೆ ಏಟು ಬೀಳುವುದು” ಎಂದು ಬೇಸರಿಸಿತು.

“ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. 50 ಸಾವಿರ, 1 ಲಕ್ಷ, ಗರಿಷ್ಠ 2,92 ಲಕ್ಷ ರೂಪಾಯಿ ಪಾವತಿಸಬೇಕಿದೆ. ಟೊಮೆಟೊ ತೆಗೆದುಕೊಂಡು ದುಡ್ಡು ಕೊಡುವುದಿಲ್ಲ ಎಂದರೆ ಹೇಗೆ? ರೈತನ ಗತಿ ಏನಾಗಬೇಕು? ಇಂಥ ಪ್ರಕರಣಗಳಲ್ಲಿ ಪ್ರಕರಣ ದಾಖಲಾಗಬಾರದು. ಇದಕ್ಕೆ ತಡೆ ನೀಡುವುದಿಲ್ಲ. ಅಧೀನ ನ್ಯಾಯಾಲಯಕ್ಕೆ ವಿಚಾರಣೆಗೆ ಅನುಮತಿಸಲಾಗುವುದು. ಏಕೆಂದರೆ ನೀವು ರೈತರ ಬದುಕಿನ ಜೊತೆ ಆಟವಾಡುತ್ತಿದ್ದೀರಿ. ಅಂತಿಮವಾಗಿ ರೈತರಿಗೆ ಹಣ ಸಿಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿತು.

“ಮಧ್ಯವರ್ತಿಗಳ ಮೂಲಕ ಟೊಮೆಟೊ ಖರೀದಿಸುತ್ತೀರಿ. ಅವರ ಮೂಲಕ ರೈತರಿಗೆ ಹಣ ಸಂದಾಯವಾಗುತ್ತದೆ. ಒಟ್ಟಾರೆ ರೈತನಿಗೆ ಸಿಗುವ ಹಣವೇ ಕಡಿಮೆ. ಅದಾಗ್ಯೂ, ರೈತರಿಗೆ ಹಣ ನೀಡುವುದಿಲ್ಲ ಎಂದರೆ ಹೇಗೆ? ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಷ್ಟು ಹಣ ಪಾವತಿಸಲಾಗಿದೆ ಮತ್ತು ಎಷ್ಟು ಬಾಕಿ ಇದೆ ಎಂದು ವಿವರಿಸಲಾಗಿದೆ. ರೈತರು ಎಲ್ಲಿಗೆ ಹೋಗಬೇಕು? ದೊಡ್ಡದೊಡ್ಡವರು ಕೋಟ್ಯಂತರ ರೂಪಾಯಿ ರಿಕವರಿ ಹಣ ವಸೂಲಿಗೆ ಅರ್ಜಿ ಹಾಕುತ್ತಾರಲ್ಲ. ಅದರಲ್ಲಿ ಬೇಕಾದರೆ ತಡೆ ನೀಡುತ್ತೇನೆ. ಇಂಥ ಪ್ರಕರಣದಲ್ಲಿ ತಡೆ ನೀಡುವುದಿಲ್ಲ. ರೈತರಿಗೆ ಬೇರೆ ದಾರಿ ಏನಿದೆ? ಈ ಅರ್ಜಿಯಲ್ಲಿ ತಡೆ ನೀಡುವುದಿರಲಿ, ಇದಕ್ಕೆ ಆದ್ಯತೆಯನ್ನೇ ನೀಡುವುದಿಲ್ಲ” ಎಂದು ಕಟುವಾಗಿ ಹೇಳಿತು.

ಅಂತಿಮವಾಗಿ, “ನಿಗದಿತ ಕಾಲಾವಧಿಯಲ್ಲಿ ವಿಚಾರಣೆ ಮುಗಿಯಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಬೇಕಿದ್ದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಖುಲಾಸೆ ಕೋರಿ ಅರ್ಜಿ ಸಲ್ಲಿಸಬಹುದು” ಎಂದು ಹೇಳಿ, ಅರ್ಜಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com