ವಕೀಲರ ವೃತ್ತಿಯನ್ನು ನಿಯಂತ್ರಿಸುವ ಜವಾಬ್ದಾರಿಯಿಂದ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಆಚೆ ಬರಬೇಕು. ಬದಲಿಗೆ ಅದು ವಕೀಲ ವೃತ್ತಿ ನಿಯಂತ್ರಿಸಲು ಸ್ವತಂತ್ರ ರಾಷ್ಟ್ರೀಯ ಪರಾಮರ್ಶನಾ ಸಂಸ್ಥೆ ಅಥವಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಶಿಕ್ಷಣ ತಜ್ಞರನ್ನೊಳಗೊಂಡ ವಿಶಾಲ ನಿಯೋಗವೊಂದನ್ನು ರೂಪಿಸಬೇಕು ಎಂದು ಹಿರಿಯ ನ್ಯಾಯವಾದಿ , ರಾಜಕಾರಣಿ ಡಾ. ಅಭಿಷೇಕ್ ಮನು ಸಿಂಘ್ವಿ ಪ್ರತಿಪಾದಿಸಿದರು.
ಅಮೆರಿಕ ವಕೀಲರ ಸಂಘದ (ಎಬಿಎ) ಅಂತರರಾಷ್ಟ್ರೀಯ ಕಾನೂನು ವಿಭಾಗದ ವತಿಯಿಂದ ನವದೆಹಲಿಯಲ್ಲಿ ಕಳೆದ ಮೂರುದಿನಗಳಿಂದ ಹಮ್ಮಿಕೊಳ್ಳಲಾಗಿದ್ದ 2023ನೇ ಸಾಲಿನ ಎಬಿಎ ಇಂಡಿಯಾ ಸಮಾವೇಶದ ಅಂತಿಮ ದಿನವಾದ ಭಾನುವಾರ ʼಕಾನೂನು ಶಿಕ್ಷಣದ ಭವಿಷ್ಯ: ಕಾನೂನು ವೃತ್ತಿಯ ದೇಸಿ ಜಾಗತೀಕರಣವೇ?ʼ ಎಂಬ ವಿಚಾರದ ಕುರಿತಂತೆ ಅವರು ಮಾತನಾಡಿದರು.
ಏಕೆಂದರೆ ಬಿಸಿಐ ಈಗ ಕಾನೂನು ಸುಧಾರಣೆ, ವಕೀಲರಲ್ಲಿ ಶಿಸ್ತು ಮೂಡಿಸುವುದು, ಕಾನೂನು ಶಿಕ್ಷಣ, ಚುನಾವಣಾ ರಾಜಕೀಯದ ವೈಪರೀತ್ಯಗಳಂತಹ ಹಲವಾರು ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿದ್ದು ಆ ಕಾರ್ಯಗಳ ವ್ಯಾಪಕ ಬಾಹುಳ್ಯದಿಂದಾಗಿ ಅವುಗಳನ್ನು ನಿರ್ವಹಿಸುವಲ್ಲಿ ರಾಜಿ ಮಾಡಿಕೊಳ್ಳಬೇಕಾದ ಸಂದರ್ಭ ಅದಕ್ಕೆ ಎದುರಾಗಿರಬಹುದು ಎಂದು ಅವರು ಹೇಳಿದರು.
ಸಿಂಘ್ವಿ ಅವರ ಭಾಷಣದ ಪ್ರಮುಖಾಂಶಗಳು
ಭಾರತದಲ್ಲಿ ಕಾನೂನು ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸದೇ ಇರುವುದರಿಂದ ಈ ಕ್ಷೇತ್ರದಲ್ಲಿ ಸಾಗರದಷ್ಟು ಸುಧಾರಣೆ ಮಾಡಬೇಕಾಗುತ್ತದೆ.
ಕಾನೂನು ಶಿಕ್ಷಣದಲ್ಲಿ ಸಮಾನತೆ ಮತ್ತು ಅದಕ್ಕಾಗಿ ರಾಷ್ಟ್ರೀಯ ಏಕೀಕೃತ ಸರಳ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ.
ಕಾನೂನು ಬೋಧಕರ ಕೊರತೆ ಮತ್ತು ವಿಷಯದ ಬಗ್ಗೆ ಆಳವಾದ ಜ್ಞಾನದ ಕೊರತೆ ಕಾಡುತ್ತಿದೆ. ಶಿಕ್ಷಣ ವಲಯಕ್ಕೆ ಇರುವ ಹಣಕಾಸಿನ ಮಿತಿಗಳನ್ನು ತೆಗೆದುಹಾಕಬೇಕು ಮತ್ತು ಕನಿಷ್ಠ ಅವಧಿಗೆ ಬೋಧನೆಯನ್ನು ಸಕ್ರಿಯಗೊಳಿಸಬೇಕು.
ಹಿರಿಯ ಅನುಭವಿ ಕಾನೂನು ತಜ್ಞರು ಕನಿಷ್ಠ ಸಂಖ್ಯೆಯ ತರಗತಿಗಳನ್ನು ತೆಗೆದುಕೊಳ್ಳಲು ತರಬೇತಿ ನೀಡಬೇಕು.
ನಿಯೋಜನೆ, ಇಂಟರ್ನ್‌ಶಿಪ್ ಹಾಗೂ ತರಬೇತಿಗಾಗಿ ಗಣಕೀಕೃತ ರಾಷ್ಟ್ರೀಯ ಯೋಜನೆ ರೂಪಿಸಬೇಕಿದೆ.
ವಿಶ್ವವಿದ್ಯಾಲಯಗಳು ಖಾಸಗಿ ಕಾನೂನು ಶಾಲೆಗಳಿಗೆ ಮಾನ್ಯತೆ ನೀಡುತ್ತಿರುವ ರಾಜ್ಯಗಳಲ್ಲಿ ಶ್ರೇಣಿಕರಣದ ಸಮಸ್ಯೆ ಇದೆ. ಅಂತಹ ಹಲವು ಕಾಲೇಜುಗಳು ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಪ್ರಗತಿ ಕಾಣದೆ ಕೇವಲ ಕಾನೂನು ಕಾಲೇಜುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.